ಬೆಂಗಳೂರು, ಮಾರ್ಚ್ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Bengaluru Water Crisis) ಎದುರಾಗಿದೆ. ನೀರು ಉಳಿತಾಯಕ್ಕೆ ಯೋಜನೆ ಮಾಡುತ್ತಿರುವ ಜಲಮಂಡಳಿ, ಮತ್ತೊಂದು ಸಿದ್ಧತೆ ಮಾಡಿದೆ. ನಲ್ಲಿಗಳಲ್ಲಿ ನೀರು ಪೋಲಾಗುವುದನ್ನ ತಪ್ಪಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ.
ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಲು ಜಲಮಂಡಳಿ ಮುಂದಾಗಿದೆ. ಅದಕ್ಕಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವುದನ್ನ ಕಡ್ಡಾಯ ಮಾಡಿದೆ. ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಲಮಂಡಳಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಪ್ಲಂಬರ್ ಅಸೋಸಿಯೇಷನ್ ಪದಾಧಿಕಾರಿಗಳ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ.
ನೀರು ಪೋಲು ತಡೆಗೆ ಮಾರ್ಚ್ 21 ರಿಂದ ಮಾರ್ಚ್ 31ರ ಒಳಗೆ ನಲ್ಲಿಗಳಿಗೆ ವಾಟರ್ ಟ್ಯಾಪ್ ಮಾಸ್ಕ್, ಅಂದರೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ನಗರದಲ್ಲಿ ಪರವಾನಗಿ ಹೊಂದಿದ 1,500 ಪ್ಲಂಬರ್‌ಗಳಿದ್ದು, ಏರಿಯೇಟರ್ ಅಳವಡಿಕೆಗೆ ಜಾಗೃತಿ ಮೂಡಿಸಬೇಕಿದೆ. ಏರಿಯೇಟರ್ ಅಳವಡಿಸುವುದರಿಂದ ಶೇಕಡಾ 60 ರಿಂದ 85 ರಷ್ಟು ನೀರಿನ ಉಳಿತಾಯ ಮಾಡಬಹುದಾಗಿದೆ.
ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ. ಮನೆಗಳಲ್ಲಿ ಸ್ವಯಂ ಪ್ರೇರಿತವಾಗಿ ಏರಿಯೇಟರ್ ಅಳವಡಿಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಜಲಮಂಡಳಿ ಇಂದು ಅಧಿಕೃತ ಆದೇಶ ಹೊರಡಿಸಲಿದೆ.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿಯ ನಲ್ಲಿಗಳಿಗೂ ಏರಿಯೇಟರ್ ಅಳವಡಿಸುವ ಕಾರ್ಯ ಪ್ರಾರಂಭಿಸಲಾಗಿದ್ದು, ಜಲಮಂಡಳಿಯ ಇತರೆ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರು ನಗರಕ್ಕೆ ಪ್ರತಿದಿನ 2,600 ಮಿಲಿಯನ್ ಲೀಟರ್ ನೀರು (ಎಂಎಲ್‌ಡಿ) ಅಗತ್ಯವಿದ್ದು, ಸುಮಾರು 500 ಎಂಎಲ್‌ಡಿ ನೀರಿನ ಕೊರತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯ ನಂತರ ತಿಳಿಸಿದ್ದರು. ಬೆಂಗಳೂರಿಗೆ ಅಗತ್ಯ ಇರುವ ನೀರಿನಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ನಗರದ ಬೋರ್‌ವೆಲ್‌ಗಳಿಂದ ಪೂರೈಸಲಾಗುತ್ತಿದೆ. 500 ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರಿಗೆ ದಿನಕ್ಕೆಷ್ಟು ಬೇಕು ನೀರು, ಎಷ್ಟಿದೆ ಕೊರತೆ: ಸಿಎಂ ಸಿದ್ದರಾಮಯ್ಯ ಕೊಟ್ಟ ಮಾಹಿತಿ ಇಲ್ಲಿದೆ
ಹೀಗಾಗಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಲ ಮಂಡಳಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಇದೀಗ ಏರಿಯೇಟರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ