Bengaluru Water Crisis: ಬೆಂಗಳೂರಿಗೆ ದಿನಕ್ಕೆಷ್ಟು ಬೇಕು ನೀರು, ಎಷ್ಟಿದೆ ಕೊರತೆ: ಸಿಎಂ ಸಿದ್ದರಾಮಯ್ಯ ಕೊಟ್ಟ ಮಾಹಿತಿ ಇಲ್ಲಿದೆ
ಬೆಂಗಳೂರಿನ ನೀರಿನ ಬಿಕ್ಕಟ್ಟು ಪರಿಹರಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಜಲ ಮಂಡಳಿ ಮತ್ತು ಸರ್ಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನಂತರ ಮಾಹಿತಿ ನೀಡಿರುವ ಅವರು, ನಗರಕ್ಕೆ ಪ್ರತಿದಿನ ಎಷ್ಟು ನೀರಿನ ಅಗತ್ಯವಿದೆ, ಈಗೆಷ್ಟು ಕೊರತೆಯಾಗಿದೆ, ಬಿಕ್ಕಟ್ಟು ಪರಿಹರಿಸಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದೆ. ಅದನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು, ಮಾರ್ಚ್ 19: ಬೆಂಗಳೂರು ನಗರಕ್ಕೆ ಪ್ರತಿದಿನ 2,600 ಮಿಲಿಯನ್ ಲೀಟರ್ ನೀರು (ಎಂಎಲ್‌ಡಿ) (Water) ಅಗತ್ಯವಿದ್ದು, ಸುಮಾರು 500 ಎಂಎಲ್‌ಡಿ ನೀರಿನ ಕೊರತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಸರ್ಕಾರಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ನಗರಕ್ಕೆ ಕುಡಿಯುವ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ 2,600 ಎಂಎಲ್‌ಡಿ ನೀರು ಬೇಕು ಎಂದಿದ್ದಾರೆ.
ಬೆಂಗಳೂರಿಗೆ ಅಗತ್ಯ ಇರುವ ನೀರಿನಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ನಗರದ ಬೋರ್‌ವೆಲ್‌ಗಳಿಂದ ಪೂರೈಸಲಾಗುತ್ತಿದೆ. 500 ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸರ್ಕಾರ ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಅವರು ಹೇಳಿದ್ದಾರೆ. ನೀರು ವ್ಯರ್ಥವಾಗುವುದನ್ನು ತಡೆಯಲು ಅಧಿಕಾರಿಗಳು 143 ಕಾರ್ಯಪಡೆ ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಇವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಾಗರಿಕರು ನೀರು ಪೋಲು ಮಾಡುವುದಕ್ಕೆ ಸಂಬಂಧಿಸಿದ ದೂರುಗಳನ್ನು ಸಹಾಯವಾಣಿ 1916 ಅಥವಾ ವಾಟ್ಸಾಪ್‌ನಲ್ಲಿ ಸಲ್ಲಿಸಬಹುದು. ಬಂದಿರುವ ದೂರುಗಳನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ನಗರದಲ್ಲಿ 14,000 ಬೋರ್‌ವೆಲ್‌ಗಳ ಪೈಕಿ 6,900 ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ 55 ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 110 ಗ್ರಾಮಗಳ ಅಗತ್ಯತೆಗಳನ್ನು ಪೂರೈಸಲು 775 ಎಂಎಲ್‌ಡಿ ನೀರು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕಾವೇರಿ 5 ನೇ ಹಂತದ ಯೋಜನೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕೊಡಗು ಸೇರಿ ಕೆಲವೆಡೆ ಸುರಿದ ಮಳೆ, ಮುಂದಿನ 2 ದಿನ ರಾಜ್ಯದಲ್ಲಿ ಮಳೆ ಮುನ್ಸೂಚನೆ
ಅಧಿಕಾರಿಗಳು 313 ಸ್ಥಳಗಳಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯಿಸಲಿದ್ದಾರೆ. 1,200 ಕೊಳವೆ ಬಾವಿಗಳಿಗೆ ಕಾಯಕಲ್ಪ ನೀಡಲಿದ್ದಾರೆ. ಅಧಿಕಾರಿಗಳು ಕೊಳೆಗೇರಿಗಳು, ಎತ್ತರದ ಪ್ರದೇಶಗಳು ಮತ್ತು 110 ಹಳ್ಳಿಗಳಲ್ಲಿ ಬೋರ್‌ವೆಲ್ ನೀರಿನ ಮೇಲೆ ಅವಲಂಬಿತರಾಗಿರುವವರಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕ್ರಮ
ಕರ್ನಾಟಕ ಹಾಲು ಮಹಾಮಂಡಳ ಸೇರಿದಂತೆ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಸಲು ಸೂಚಿಸಲಾಗಿದೆ. ನಗರದ ಪ್ರಮುಖ ಕೆರೆಗಳಿಗೆ ಶುದ್ಧೀಕರಿಸಿದ ನೀರಿನಿಂದ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ