ಬೆಂಗಳೂರು: ಇತ್ತೀಚೆಗಷ್ಟೇ ಹಾಲಿನ ದರ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಿಸಿಯ ನಡುವೆ ಹಾಲಿನ ದರವೂ ಏರಲಿದೆ ಎಂಬ ಸುದ್ದಿ ಕೇಳಿ ಜನ ಆತಂಕಿತರಾಗಿದ್ದರು. ಇದೀಗ ನೀರಿನ ದರವನ್ನೂ ಏರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಮ್ಮೆ ದರ ಬೆಲೆ ಏರಿಕೆಯ ಹೊರೆ ಬೀಳುವ ಸಾಧ್ಯತೆ ಇದೆ. ಕಾರಣ, ಬೆಂಗಳೂರು ಜಲಮಂಡಳಿಯು (BWSSB) ನೀರಿನ ದರ ಏರಿಕೆಯ ಪ್ರಸ್ತಾಪ ಸಲ್ಲಿಸಲಿದೆ. 8 ವರ್ಷಗಳ ಬಳಿಕ ನೀರಿನ ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿರುವ ಜಲಮಂಡಳಿ, ಗೃಹ ಬಳಕೆಗೆ ಶೇಕಡಾ 16ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ವಾಣಿಜ್ಯ ಬಳಕೆಗೆ ಶೇ.21ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ನಿರ್ವಹಣೆ ವೆಚ್ಚ ಹೆಚ್ಚಳದ ಕಾರಣ ನೀಡಿ ಪ್ರಸ್ತಾವನೆ ಸಲ್ಲಿಸುವ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ. 2 ವರ್ಷಗಳ ಹಿಂದೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೊವಿಡ್ ಕಾರಣದಿಂದ ಸರ್ಕಾರ ದರ ಏರಿಕೆಗೆ ಒಪ್ಪಿರಲಿಲ್ಲ. ಇದೀಗ ಮತ್ತೊಮ್ಮೆ ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ.
ಜಲಮಂಡಳಿ ದರ ಹೆಚ್ಚಳ ಪ್ರಸ್ತಾವಕ್ಕೆ ಕಾರಣವೇನು?
ಈಗಾಗಲೇ ದಿನಸಿ, ತರಕಾರಿ, ಪೆಟ್ರೋಲ್, ಡೀಸೆಲ್, ಎಲ್ ಪಿಜಿ ದರ ಏರಿಕೆಯಾಗಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಹಾಲು, ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಈಗ ನೀರಿನ ಏರಿಕೆಯ ಫೈಲ್ ಸರ್ಕಾರದ ಕೈ ಸೇರಿದೆ. ಇದರಿಂದ ಮೂಲ ಸೌಕರ್ಯವಾದ ನೀರಿನ ದರವೂ ಏರಿಕೆಯಾಗುವ ಸಾಧ್ಯತೆ ಇದ್ದು, ಜನರಿಗೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಇದೆ.
ಇತ್ತ ಜಲಮಂಡಳಿ ವೆಚ್ಚ ಹೆಚ್ಚಳವಾಗಿರುವುದು ದರ ಏರಿಕೆ ಪ್ರಸ್ತಾವಕ್ಕೆ ಮೂಲ ಕಾರಣವಾಗಿದೆ. ಜಲಮಂಡಳಿಗೆ ನಷ್ಟದ ವೆಚ್ಚ ಪ್ರತಿ ವರ್ಷ ಹೆಚ್ಚಳವಾಗುತ್ತಿದೆ. 2013-14ರಲ್ಲಿ 390 ಕೋಟಿ ವಿದ್ಯುಚ್ಛಕ್ತಿ ವೆಚ್ಚವಾಗಿತ್ತು. 2020-21ರಲ್ಲಿ 669 ಕೋಟಿ ವಿದ್ಯುಚ್ಛಕ್ತಿ ವೆಚ್ಚವಾಗಿದೆ. ಕಳೆದ 8 ವರ್ಷದಲ್ಲಿ ಶೇ.79.26 ವೆಚ್ಚ ಹೆಚ್ಚಳವಾಗಿದೆ. ಇದೇ ಕಾರಣದಿಂದ ಜಲಮಂಡಳಿ ದರ ಏರಿಕೆ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ.
ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ದರ ಏರಿಕೆ ಖಚಿತವಾಗಲಿದೆ. ದರ ಏರಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಕೊರೊನಾ ಸಂಕಷ್ಟದಲ್ಲಿದಲ್ಲಿರುವ ಜನರಿಗೆ ಬೆಲೆ ಏರಿಕೆ ಹೊರೆ ಬೀಳಲಿದೆಯೇ ಅಥವಾ ಸರ್ಕಾರ ಮಂಡಳಿಯ ಪ್ರಸ್ತಾಪವನ್ನು ಜನರ ಹಿತದೃಷ್ಟಿಯಿಂದ ಮುಂದೂಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:
ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ಶಾಕ್? ಸಿಎಂ ಚರ್ಚೆ ಬಳಿಕ ಘೋಷಣೆ
ಒಬ್ಬ ಗೃಹಿಣಿ ತಮ್ಮನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಮುಚ್ಚಿಹೋಗಲಿದ್ದ ಹಾಲಿನ ಡೈರಿಯನ್ನು ಉಳಿಸಿದ ಕತೆಯಿದು!
Published On - 11:45 am, Fri, 21 January 22