ಒಬ್ಬ ಗೃಹಿಣಿ ತಮ್ಮನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಮುಚ್ಚಿಹೋಗಲಿದ್ದ ಹಾಲಿನ ಡೈರಿಯನ್ನು ಉಳಿಸಿದ ಕತೆಯಿದು!

ಒಬ್ಬ ಗೃಹಿಣಿ ತಮ್ಮನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಮುಚ್ಚಿಹೋಗಲಿದ್ದ ಹಾಲಿನ ಡೈರಿಯನ್ನು ಉಳಿಸಿದ ಕತೆಯಿದು!
ಲಕ್ಷ್ಮಿ ರಾವ್

ತುಂಬಾ ವರ್ಷಗಳ ಹಿಂದೆ ಲಕ್ಷ್ಮಿಯವರು ಸುರತ್ಕಲ್ ಡೈರಿಗೆ ಹಾಲನ್ನು ಹಾಕುತ್ತಿದ್ದರು. ಆದ್ರೆ ಸುರತ್ಕಲ್ ಸುತ್ತಮುತ್ತಲಿನ ಹಾಗೂ ಮಂಗಳೂರಿನ ಜನರು ಅವರಲ್ಲಿಗೆಯೇ ಬಂದು ಹಾಲನ್ನು ಖರೀದಿ ಮಾಡಲು ಆರಂಭಿಸಿದಾಗಿನಿಂದ ಡೈರಿಗೆ ಹಾಲನ್ನು ಕಳಿಸುವುದನ್ನು ನಿಲ್ಲಿಸಿದರು.

TV9kannada Web Team

| Edited By: shivaprasad.hs

Dec 31, 2021 | 8:52 AM

ಸಾಕಷ್ಟು ಹೊಲ, ಗದ್ದೆ, ತೋಟಗಳನ್ನು ಹೊಂದಿದವರು ವ್ಯವಸ್ಥಿತವಾಗಿ ಹೈನುಗಾರಿಕೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನಗರ ಪ್ರದೇಶದವೊಂದರ ಕೇವಲ 13 ಸೆಂಟ್ಸ್ ಜಾಗದಲ್ಲಿ, ಹಿರಿಯ ಮಹಿಳೆಯೊಬ್ಬರ ಇಚ್ಚಾಶಕ್ತಿಯಿಂದ ಒಂದು ಕ್ಷೀರಕ್ರಾಂತಿ ನಡೆದಿದೆ. ಅವರ ಸಂಕಲ್ಪ, ಆತ್ಮವಿಶ್ವಾಸ ಮತ್ತು ಪ್ರಯತ್ನಶೀಲತೆ ನಮ್ಮೆಲ್ಲರಿಗೆ ಮಾದರಿ. ಇವರು ನಡೆಸಿದ ಕ್ಷೀರಕ್ರಾಂತಿಯಿಂದ ಅಳಿದು ಹೋಗಬೇಕಾಗಿದ್ದ ಒಂದು ಡೈರಿಯ ಅಸ್ತಿತ್ವ ಉಳಿದುಕೊಂಡಿದೆ ಎಂದರೆ ನೀವು ನಂಬಲಾರಿರಿ.

ಲಕ್ಷ್ಮಿ ರಾವ್ ಅವರ ಕ್ಷೀರ ಕ್ರಾಂತಿ!! ಕರಾವಳಿ ನಗರ ಮಂಗಳೂರಿನ ಹೊರಭಾಗದ ಸಮುದ್ರದಂಚಿನಲ್ಲಿ ಒಂದು ಸಣ್ಣ ಬಯಲು ಜಾಗವಿದೆ. ಅಲ್ಲೊಂದು ಸುಂದರ ಚಿಕ್ಕ ಕುಟುಂಬ ವಾಸವಾಗಿದೆ. ಆ ಕುಟುಂಬದ ಜೊತೆ ದನಕರುಳ ದೊಡ್ಡ ಕುಟುಂಬವವೂ ಇದೆ. ಅಲ್ಲಿಗೆ ಪ್ರವೇಶ ಮಾಡಿದರೆ ಸಾಕು, ಮುದ್ದಾದ ಗೋವಿನ ಕರುಗಳು ಅಂಬಾ ಅಂತ ತಮ್ಮ ತಾಯಂದಿರನ್ನು ಹುಡುಕಾಡುವ ಸುಮಧುರ ಸ್ವರ ಕೇಳಿಸುತ್ತೆ. ಕಣ್ಣು ಹಾಯಿಸಿದೆಲ್ಲೆಡೆ ಸದೃಢ ಕಾಯದ ವಿವಿಧ ತಳಿಯ ರಾಸುಗಳು ಕಾಣಸಿಗುತ್ತವೆ.

ಅಲ್ಲೇ, ರಾಸುಗಳನ್ನು ತಮ್ಮ ಸ್ವಂತ ಮಕ್ಕಳಂತೆ ಆರೈಕೆ ಮಾಡುತ್ತಿರುವ ಒಬ್ಬ ಹಿರಿಯ ಮಹಿಳೆ ನಮಗೆ ಕಾಣಸಿತ್ತಾರೆ. ಅಕ್ಕಪಕ್ಕ ಅವರಿಗೆ ಸಹಾಯ ಮಾಡುತ್ತಿರುವ ಮಗ, ಸೊಸೆ, ಮೊಮ್ಮಕ್ಕಳು ಕಾಣುತ್ತಾರೆ. ಇಂತಹ ಅಪ್ಯಾಯಮಾನ ದೃಶ್ಯ ಕಾಣ ಸಿಗೋದು ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್ ನಲ್ಲಿ.

ಈ ಮಮತಾಮಯಿ ಮಹಿಳೆಯ ಹೆಸರು ಲಕ್ಷ್ಮಿ ರಾವ್ ಅಂದಹಾಗೆ, 60ರ ಪ್ರಾಯದ ಈ ಮಮತಾಮಯಿ ಮಹಿಳೆಯ ಹೆಸರು ಲಕ್ಷ್ಮಿ ರಾವ್ ಅಂತ. ಕಳೆದ 35 ವರ್ಷಗಳಿಂದ ಅವರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ವಾಸದ ಮನೆ ಸೇರಿದಂತೆ 13 ಸೆಂಟ್ಸ್ ಜಾಗದಲ್ಲಿ 52 ಹಸುಗಳು ಮತ್ತು 15 ಕ್ಕೂ ಹೆಚ್ಚು ಕರುಗಳನ್ನು ಸಾಕುತ್ತಿದ್ದಾರೆ. ಇವರ ಕೊಟ್ಟಿಗೆಯಲ್ಲಿ ಜೆರ್ಸಿ, ಸಿಂಧಿ, ಎಚ್.ಎಫ್, ಸಾಯಿವಾಲ್, ಗಿರ್, ಮಿಶ್ರತಳಿ ಸೇರಿದಂತೆ ಹತ್ತಾರು ಜಾತಿಯ ರಾಸುಗಳು ಇವೆ. ಪ್ರಸ್ತುತವಾಗಿ 25 ಕ್ಕೂ ಹೆಚ್ಚು ಹಸುಗಳು ಹಾಲು ಕೊಡುತ್ತಿದ್ದು ದಿನಕ್ಕೆ 400 ರಿಂದ 500 ಲೀಟರ್ ಹಾಲು ಸಂಗ್ರಹವಾಗುತ್ತದೆ.

ಸುರತ್ಕಲ್ ಹಾಲಿನ ಡೈರಿ ಮುಚ್ಚುವ ಸ್ಥಿಯಲ್ಲಿತ್ತು! ತುಂಬಾ ವರ್ಷಗಳ ಹಿಂದೆ ಲಕ್ಷ್ಮಿಯವರು ಸುರತ್ಕಲ್ ಡೈರಿಗೆ ಹಾಲನ್ನು ಹಾಕುತ್ತಿದ್ದರು. ಆದ್ರೆ ಸುರತ್ಕಲ್ ಸುತ್ತಮುತ್ತಲಿನ ಹಾಗೂ ಮಂಗಳೂರಿನ ಜನರು ಅವರಲ್ಲಿಗೆಯೇ ಬಂದು ಹಾಲನ್ನು ಖರೀದಿ ಮಾಡಲು ಆರಂಭಿಸಿದಾಗಿನಿಂದ ಡೈರಿಗೆ ಹಾಲನ್ನು ಕಳಿಸುವುದನ್ನು ನಿಲ್ಲಿಸಿದರು. ಆಗ ಸುರತ್ಕಲ್ ಡೈರಿಗೆ ಮುಚ್ಚುವ ಸ್ಥಿತಿ ಎದುರಾಗಿತ್ತು. ಡೈರಿಯನ್ನು ನಡೆಸುತ್ತಿದ್ದವರು ಬಂದು ಹಾಲು ಕಳಿಸುವುದನ್ನು ಮುಂದುವರಿಸಿ ಅಂತ ಮನವಿ ಮಾಡಿದಾಗ ಸ್ವಲ್ಪ ಹಾಲನ್ನು ಅಲ್ಲಿಗೆ ಕೊಡಲು ಆರಂಭಿಸಿದ್ರು. ಹಾಗಾಗೇ, ಡೈರಿಯ ಅಸ್ತಿತ್ವ ಉಳಿಯುವಂತಾಯಿತು.

ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಲಕ್ಷ್ಮಿ ರಾವ್ ಅವರು ತಮ್ಮ ಅನುಭವದ ಕಂತೆಯನ್ನು ಬಿಚ್ಚಿಟ್ಟರು.

ಚಿಕ್ಕಂದಿನಿಂದಲೇ ಅವರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ! ಚಿಕ್ಕಂದಿನಿಂದಲೇ ಅವರಿಗೆ ಹೈನುಗಾರಿಕೆ ಮತ್ತು ಕೃಷಿ ಬಗ್ಗೆ ಅಪಾರ ಆಸಕ್ತಿ ಇತ್ತು ಮತ್ತು ಅದು ಈಗಲೂ ಮುಂದುವರಿದಿದೆ. ಅವರ ಪತಿ ಎನ್. ರಾಮಚಂದ್ರ ರಾವ್ ಸೇನೆಯಲ್ಲಿ ಯೋಧರಾಗಿದ್ದರು. ಮದುವೆಯಾಗಿ ಬಂದ ಬಳಿಕವೂ ಅವರು ತಮ್ಮ ಆಸಕ್ತಿಯನ್ನು ಗಂಡನ ಮನೆಯಲ್ಲಿ ಮುಂದುವರಿಸಿದರು. ಸುಮಾರು 35 ವರ್ಷಗಳ ಹಿಂದೆ ಆರು ದನ ಕರುಗಳೊಂದಿಗೆ ಆರಂಭವಾದ ಈ ಡೈರಿಯಲ್ಲಿ ಈಗ 70ಕ್ಕೂ ಅಧಿಕ ವಿವಿಧ ತಳಿಯ ರಾಸು ಮತ್ತು ಕರುಗಳಿವೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಹೈನುಗಾರಿಕೆಯಲ್ಲಿ ಲಾಭ ಇದೆ, ಆದರೆ ಆಸಕ್ತಿ ಮತ್ತು ನಾವು ಸಾಕುವ ಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಪ್ರೀತಿ ತೋರಿಸುವ ಮನೋಭಾವ ಇದ್ದಾಗ ಪ್ರತಿಫಲವೂ ಉತ್ತಮವಾಗಿರುತ್ತದೆ ಎಂದು ಹೇಳುವ ಅವರು ಅವುಗಳ ಆರೈಕೆಯಲ್ಲಿ ತೊಡಗಿರುವಾಗ ವಯಸ್ಸಾದ ಅನುಭವವೇ ಆಗುವುದಿಲ್ಲವಂತೆ. ಆದರೆ ರಾಸುಗಳಿಂದ ದೂರವಾದರೆ ಆರೋಗ್ಯ ಹದಗೆಡುತ್ತದೆ ಅಂತ ಅವರು ಹೇಳುತ್ತಾರೆ

ಇಂಜಿನೀಯರ್ ಆಗಿದ್ದ ಮಗ ಕೆಲಸಕ್ಕೆ ಗುಡ್ ಬೈ ಹೇಳಿ ಅಮ್ಮನ ಜೊತೆ ಕೈಜೋಡಿಸಿದ್ದಾರೆ! ಲಕ್ಷ್ಮಿ ರಾವ್ ಮಗ ಸಂತೋಷ್ ತನ್ನ ಇಂಜಿನೀಯರ್ ವೃತ್ತಿಯನ್ನು ತ್ಯಜಿಸಿ ತಾಯಿಗೆ ಸಹಕಾರ ನೀಡುತ್ತಿದ್ದಾರೆ. ಸಂತೋಷ್ ಅವರೊಂದಿಗೆ ಪತ್ನಿ ರಮ್ಯಾ ಲಕ್ಷ್ಮಿ ರಾವ್ ಅವರ ಕ್ಷೀರಕ್ರಾಂತಿಗೆ ಸಾಥ್ ನೀಡುತ್ತಿದ್ದಾರೆ. ಅವರ ಮೊಮ್ಮಕ್ಕಳಲ್ಲೂ ಇದರ ಬಗ್ಗೆ ಆಸಕ್ತಿ ಮೂಡಿದೆ. ತಿಂಗಳಿಗೆ ರೂ. 5.3 ಲಕ್ಷ ಆದಾಯ ಬರುತ್ತಿದ್ದು, 4.5 ಲಕ್ಷ ವೆಚ್ಚವಾಗುತ್ತದೆ. ಕೊಟ್ಟಿಗೆಯ ಸಗಣಿ ಗೊಬ್ಬರದಿಂದ ವರ್ಷಕ್ಕೆ 3 ಲಕ್ಷ ಆದಾಯ ಬರುತ್ತಿದೆ. ಇನ್ನು ಹಾಲು ಕರೆಯಲು, ಮೇವು ಕತ್ತರಿಸಲು ಯಂತ್ರಗಳನ್ನು ಅವರು ಉಪಯೋಗಿಸುತ್ತಿದ್ದಾರೆ.

‘ನನ್ನ ವೃತ್ತಿಯಲ್ಲಿ ಇದಕ್ಕಿಂತ ಹೆಚ್ಚು ಆದಾಯವಿತ್ತು. ಆದ್ರೆ ಇಷ್ಟು ನೆಮ್ಮದಿ ಅಲ್ಲಿ ಸಿಕ್ಕಿರಲಿಲ್ಲ. ನನ್ನ ತಾಯಿ ಮತ್ತು ನಾನು ಇಬ್ಬರು ಒಟ್ಟಿಗೆ ಯಾವುದೇ ಮದುವೆಗಾಗಲೀ ಬೇರೆ ಯಾವುದೇ ಸಮಾರಂಭಕ್ಕಾಗಲೀ ಹೋಗಲು ಆಗಲ್ಲ ಅನ್ನೊದನ್ನು ಬಿಟ್ರೆ ಯಾವ ಅನಾನುಕೂಲವು ಇಲ್ಲ. ಸಮರ್ಪಕ ರೀತಿಯಲ್ಲಿ ಆಸಕ್ತಿದಾಯಕ ಹೈನುಗಾರಿಕೆಯಿಂದ ಉತ್ತಮ ಲಾಭ ಗಳಿಸಬಹುದು. ಇದರಿಂದ ಸಿಗುವ ನೆಮ್ಮದಿಗೆ ಬೆಲೆ ಕಟ್ಟಲಾಗದು. ನಾನು ನನ್ನ ಇಂಜಿನಿಯರಿಂಗ್ ವೃತ್ತಿಯಿಂದ ಅದೆಷ್ಟೇ ಒತ್ತಡವಿದ್ದರೂ ಕಚೇರಿಯಿಂದ ಮನೆಗೆ ಬಂದಾಗ ಈ ದನಕರುಗಳು ತೋರಿಸುವ ಮುಕ್ತ ಪ್ರೀತಿಯ ಎದುರು ಅದು ನಿವಾರಣೆಯಾಗುತ್ತಿತ್ತು. ಬೇರೆಲ್ಲೂ ಸಿಗದ ನೆಮ್ಮದಿ ಈ ಗೋಪ್ರಂಪಂಚದಲ್ಲಿದೆ,’ ಎಂದು ಸಂತೋಷ್ ಹೇಳುತ್ತಾರೆ.

ಜನ ಲಕ್ಷ್ಮಿ ರಾವ್ ಅವರ ಹೈನುಗಾರಿಕೆಯನ್ನು ನೋಡಲು ಬರುತ್ತಾರೆ! ಲಕ್ಷ್ಮಿ ರಾವ್ ಅವರ ಈ ಕ್ಷೀರ ಕ್ರಾಂತಿಯನ್ನು ನೋಡಲು ಇಲ್ಲಿಗೆ ಜನ ಆಗಾಗ ಬರುತ್ತಿರುತ್ತಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕೂಡ ಬಂದು ಹೋಗಿದ್ದಾರೆ. ಇಲ್ಲಿನ ಸ್ವಚ್ಚತೆ ಮತ್ತು ಅವರ ಆಸಕ್ತಿ ಕಂಡು ಪೊಲೀಸ್ ಅಧಿಕಾರಿ ನಿಬ್ಬೆರಗಾಗಿದ್ದಾರೆ. ವಿಶೇಷ ಅಂದ್ರೆ ಇಷ್ಟೊಂದು ಹಸುಗಳು ಇಷ್ಟು ಸಣ್ಣ ಜಾಗದಲ್ಲಿದ್ರೂ ಎಲ್ಲಾ ಆರೋಗ್ಯವಾಗಿವೆ. ಮನೆ ಸುತ್ತಮುತ್ತ ನೊಣಗಳು ಬರದ ಹಾಗೆ ಇಲ್ಲಿನ ಪರಿಸರವನ್ನು ಸ್ವಚ್ಛವಾಗಿಡಲಾಗಿದೆ.

ಲಕ್ಷ್ಮಿ ರಾವ್ ಅವರ ಇಚ್ಚಾಶಕ್ತಿ, ಸಂಕಲ್ಪ, ಬದ್ಧತೆ, ಮತ್ತು ಮಾತೃಹೃದಯ ಪದಗಳಲ್ಲಿ ಹೇಳಲಾಗದು.

ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು

ಇದನ್ನೂ ಓದಿ:   Karnataka Bandh: ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ; ನಾಳೆ ಕರ್ನಾಟಕ ಬಂದ್ ಇಲ್ಲ ಎಂದ ವಾಟಾಳ್ ನಾಗರಾಜ್

Follow us on

Most Read Stories

Click on your DTH Provider to Add TV9 Kannada