Karnataka Bandh: ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ; ಕರ್ನಾಟಕ ಬಂದ್ ಇಲ್ಲ ಎಂದ ವಾಟಾಳ್ ನಾಗರಾಜ್

ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿರುವ ವಾಟಾಳ್ ನಾಗರಾಜ್ ಕರ್ನಾಟಕ ಬಂದ್​ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ನಮಗೆ ಕೊಟ್ಟಿರುವ ಭರವಸೆ ಈಡೇರಿಸಬೇಕು. ಅವರು ಸಹೃದಯದಿಂದ ಕರೆದು ಪ್ರೀತಿಯಿಂದ ಮಾತನಾಡಿದ್ದರಿಂದ ನಾವು ಬಂದ್ ಕೈಬಿಟ್ಟಿದ್ದೇವೆ ಎಂದಿದ್ದಾರೆ.

Karnataka Bandh: ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ;  ಕರ್ನಾಟಕ ಬಂದ್ ಇಲ್ಲ ಎಂದ ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 31, 2021 | 6:57 AM

ಬೆಂಗಳೂರು: ಎಂಇಎಸ್​ ಸಂಘಟನೆಗಳಿಗೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಶುಕ್ರವಾರ (ಡಿ. 31) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿತ್ತು. ಈಗಾಗಲೇ ಕೊವಿಡ್ ಕೇಸುಗಳು ಕೂಡ ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಹಲವು ರಾಜಕೀಯ ನಾಯಕರು ಮನವಿ ಮಾಡಿದರೂ ವಾಟಾಳ್ ನಾಗರಾಜ್ ಬಂದ್​ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಆದರೆ, ಇಂದು ಫೋನ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ತೊಂದರೆಯಾಗುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ತಮ್ಮ ಕಚೇರಿಗೆ ಬಂದು ಭೇಟಿ ನೀಡುವಂತೆಯೂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿರುವ ವಾಟಾಳ್ ನಾಗರಾಜ್ ಕರ್ನಾಟಕ ಬಂದ್​ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

ಕರ್ನಾಟಕ ಬಂದ್​ ಹಿಂಪಡೆಯುವಂತೆ ವಾಟಾಳ್ ನಾಗರಾಜ್ ಅವರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿರುವ ವಾಟಾಳ್​ ನಾಗರಾಜ್​, ನಾಳೆಯ ಕರ್ನಾಟಕ ಬಂದ್​ ಮುಂದೂಡಲು ನಿರ್ಧಾರ ಮಾಡಲಾಗಿದೆ. ಎಂಇಎಸ್​ ಸಂಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ ಹಿನ್ನೆಲೆ ಬಂದ್​ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ನಾವು ಮುಖ್ಯಮಂತ್ರಿಗೆ ಗಡುವು ಕೊಟ್ಟಿಲ್ಲ. ನೀವು ಎಂಇಎಸ್ ನಿಷೇಧ ಮಾಡಲೇಬೇಕು ಅಂತ ಹೇಳಿದ್ದೇವೆ. ನನಗೆ ಈ ಸಲ ಬಂದ್ ಹಿಂಪಡೆಯಲು ಇಷ್ಟವೇ ಇರಲಿಲ್ಲ. ನಾಳೆ ಬಂದ್ ಇಲ್ಲ, ಆದರೆ, ಜನವರಿ 22ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ.  ಮುಖ್ಯಮಂತ್ರಿಯವರು ಎರಡು ಬಾರಿ ಮನವಿ ಮಾಡಿ ನಮ್ಮನ್ನು ಕರೆಸಿದ್ದರು. ಕಾನೂನು ಪ್ರಕಾರ ಎಂಇಎಸ್ ನಿಷೇಧಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತೀನಿ. ಬಂದ್ ಕರೆ ಹಿಂದೆ ಪಡೀರಿ ಅಂತ ಮುಖ್ಯಮಂತ್ರಿ ಹೇಳಿದರು. ಅವರ ಮಾತಿಗೆ ಗೌರವ ಕೊಟ್ಟು, ನಾವು ಒಂದು ತೀರ್ಮಾನ ತೆಗೆದುಕೊಂಡೆವು. ನಾಳೆ ಬಂದ್ ಮಾಡಿದ್ರೆ ಹೊಸವರ್ಷಾಚರಣೆಗೆ ತೊಂದರೆ ಆಗುತ್ತೆ ಅಂತ ಹೇಳಿದ್ರು. ಚಲನಚಿತ್ರ ವಾಣಿಜ್ಯ ಮಂಡಳಿಯವರು ಮೂರು ಚಿತ್ರ ಬಿಡುಗಡೆ ಆಗುತ್ತೆ, ನಮ್ಮ ಬೆಂಬಲ ಇಲ್ಲ ಎಂದು ಹೇಳಿದರು ಎಂದಿದ್ದಾರೆ.

ನನ್ನ ಮೇಲೆ ನಿರಂತರ ಒತ್ತಡ ಇತ್ತು. ಇಂಥ ಒತ್ತಡ ಯಾವತ್ತೂ ಆಗಿರಲಿಲ್ಲ. ಒತ್ತಡದಿಂದ ನನಗೆ ಮಾನಸಿಕವಾಗಿ ಬೇಸರವಾಯ್ತು. ನಾವು ಮಾಡೋಕೆ ಹೊರಟಿರೋದು, ಕನ್ನಡ ನಾಡು ನುಡಿ ಹಾಗೂ ಬಾವುಟಕ್ಕೆ ಅನ್ಯಾಯ ಆಗಿದೆ, ಬೆಂಕಿ ಇಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಬಸವಣ್ಣನಿಗೆ ಅವಮಾನ ಆಗಿದೆ ಅಂತ ನಾವು ಬಂದ್ ಮಾಡಲು ಹೊರಟಿದ್ವಿ. ಯಾರ ವಿರುದ್ಧವೂ ಅಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

‘ನಾವು ನಿಮ್ಮ ಜೊತೆ ಇದ್ದೀನಿ. ಬಂದ್ ಮಾಡಬೇಡಿ’ ಅಂತ ಮುಖ್ಯಮಂತ್ರಿಗಳು ಪ್ರೀತಿ ಮತ್ತು ಅಭಿಮಾನದಿಂದ ಹೇಳಿದರು. ಬಂದ್ ಮಾಡಿದರೆ ರಾಜ್ಯಕ್ಕೆ ಏನೋ ಅನಾಹುತ ಆಗುತ್ತೆ ನಮ್ಮ ಮೇಲೆ ದಬ್ಬಾಳಿಕೆಯ ಮಾತುಗಳೆಲ್ಲ ಬಂದವು. ಯಾರ ಮಾತಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಇವತ್ತು ಬೆಳಿಗ್ಗೆಯಿಂದಲೂ ನಮ್ಮ ಒಕ್ಕೂಟದವರು ಬಂದ್ ಬೇಡ ಅಂತ ಒತ್ತಡ ತಂದಿದ್ರು. ಅವರ ಮಾತಿಗೂ ಬೆಲೆ ಕೊಡಬೇಕಾಯಿತು, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಕೊಡಬೇಕಾಯಿತು. ಹೀಗಾಗಿ ನಾಳೆ ನಡೆಯಬೇಕಾದ ಬಂದ್ ನಡೆಯುವುದಿಲ್ಲ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಹಿಂದೆ ಪಡೆದಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಎಂಇಎಸ್​ ನಿಷೇಧದ ಬಗ್ಗೆ ಪರಿಶೀಲಿಸುತ್ತೇವೆ- ಸಿಎಂ ಬೊಮ್ಮಾಯಿ:

ವಾಟಾಳ್ ನಾಗರಾಜ್ ಜೊತೆಗೆ ಮಾತನಾಡಿದ್ದೇವೆ. ಕನ್ನಡ ರಕ್ಷಣೆ ಬಗ್ಗೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕನ್ನಡದ ರಕ್ಷಣೆಗಾಗಿ ನಮ್ಮ ಸರ್ಕಾರ ನಿಮ್ಮ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತದೆ ಅಂತ ಹೇಳಿದ್ದಾರೆ. ನನ್ನ ಮನವಿಗೆ ಸ್ಪಂದಿಸಿ, ಬಂದ್ ಕರೆ ಹಿಂಪಡೆದಿರುವ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಂಇಎಸ್ ನಿಷೇಧದ ಬಗ್ಗೆ ಕಾನೂನು ಪ್ರಕಾರ ಪರಿಶೀಲಿಸುತ್ತಿದ್ದೇವೆ. ಈ ಹಿಂದೆಯೂ ಈ ಮಾತು ಹೇಳಿದ್ದೆ. ಈಗ ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಂದ್ ಮುಂದೂಡಿಕೆಯಾಗಿದೆಯೇ ವಿನಃ ವಾಪಾಸ್ ಪಡೆದಿಲ್ಲ: ನಾವು ಕರ್ನಾಟಕ ಬಂದ್ ಹಿಂಪಡೆದಿಲ್ಲ, ಮುಂದೂಡಿದ್ದೇವೆ. ಮುಂದೆ ಯಾವ ದಿನ ಕರ್ನಾಟಕ ಬಂದ್ ಆಚರಿಸುತ್ತೇವೆಂಬ ದಿನಾಂಕವನ್ನು ತಿಳಿಸ್ತೇವೆ. ಇನ್ನೆರೆಡು ದಿನಗಳಲ್ಲಿ ಸಭೆ ಕರೆದು ಹೋರಾಟ ಹೇಗೆ ಮಾಡಬೇಕು ಎಂಬ ತೀರ್ಮಾನ ಪ್ರಕಟಿಸುತ್ತೇನೆ ಎಂದು ಕನ್ನಡಪರ ಸಂಘಟನೆಯ ನಾಯಕ ಕೆ. ಆರ್​. ಕುಮಾರ್ ಹೇಳಿದ್ದಾರೆ. ಅಲ್ಲದೆ, ಕನ್ನಡಪರ ಸಂಘಟನೆಗಳ ಒಕ್ಕೂಟ 250ಕ್ಕೂ ಹೆಚ್ಚು ಸಂಘಟನೆಗಳು ನಾಳೆಯ ಬಂದ್​ಗೂ ಬೆಂಬಲ ನೀಡಿದ್ದೆವು. ಅವರು ಮುಂದೆ ದಿನಾಂಕ ನಿಗದಿ ಮಾಡಿದರೂ ನಮ್ಮ ಬೆಂಬಲ ಇರುತ್ತೆ. ಎಂಇಎಸ್ ನಿಷೇಧ ಮಾಡದಿದ್ದರೆ ಜನವರಿ 22ರಂದು ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ನಾಳೆ ಬೃಹತ್ ರ್ಯಾಲಿ: ನಾಳೆ (ಶುಕ್ರವಾರ) ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಟೌನ್​ಹಾಲ್​ನಿಂದ ಭಾರೀರಿ ಮೆರವಣಿಗೆ ನಡೆಸುತ್ತೇವೆ. ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸಾರಾ ಗೋವಿಂದು ಹೇಳಿದರು.

ಕನ್ನಡಪರ ಸಂಘಟನೆಗಳ ಜೊತೆ ಸಿಎಂ ಸಭೆ:

ಕರ್ನಾಟಕ ಬಂದ್ ಕೈ ಬಿಡುವಂತೆ ವಾಟಾಳ್ ನಾಗರಾಜ್​ಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಯಾವುದೇ ಕಂಡಿಷನ್ ಗಳೂ ಬೇಡ, ಕನ್ನಡಕ್ಕೆ ಅನ್ಯಾಯ ಆಗುವಂತೆ ಸರ್ಕಾರ ನಡೆದುಕೊಂಡಿಲ್ಲ. ದುಷ್ಕೃತ್ಯ ಎಸಗಿದ ಕಿಡಿಗೇಡಿಗಳನ್ನು ನಾವು ಬಂಧಿಸಿದ್ದೇವೆ. ಕನ್ನಡ ಸಂಘಟನೆಗಳ ಅಹವಾಲು ಆಲಿಸಲು ಸರ್ಕಾರ ಬದ್ದವಾಗಿದೆ. ಬಂದ್ ಮಾಡಿ ರಾಜ್ಯದ ಜನತೆಗೆ ತೊಂದರೆ ಆಗುವುದು ಬೇಡ ಎಂದು ವಾಟಾಳ್ ನಾಗರಾಜ್ ಅವರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.

ಎಂಇಎಸ್​ ಸಂಘಟನೆಯ ನಿಷೇಧಕ್ಕೆ ಆಗ್ರಹಿಸಿ ನಾಳೆ ಕನ್ನಡಪರ ಸಂಘಟನೆಗಳು ಬಂದ್​ಗೆ ಕರೆನೀಡಿದ್ದವು. ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ಬಂದ್ ವಾಪಾಸ್ ಪಡೆಯುವುದಿಲ್ಲ. ಹಾಗೇನಾದರೂ ಬಂದ್ ವಾಪಾಸ್ ಪಡೆದರೆ ಅಥವಾ ಮುಂದೂಡಿದರೆ ರಾಜ್ಯದ ಜನರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದಿದ್ದರು.

MES ನಿಷೇಧಕ್ಕೆ ಒತ್ತಾಯಿಸಿ ಡಿ.31ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, K.R. ಕುಮಾರ್​ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಜೀಪ್​ನಲ್ಲಿ ಕುಳಿತು ಮಾತುಕತೆ ನಡೆಸಿದ್ದರು. ವಾಟಾಳ್ ನಾಗರಾಜ್ ಮನವೊಲಿಕೆಗೆ ಮುಖಂಡರು ಪ್ರಯತ್ನ ಮಾಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್​ ಶೆಟ್ಟಿ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್​ ಮನವೊಲಿಕೆ ಯತ್ನ ಮಾಡಿದ್ದರು. ಆದರೂ ವಾಟಾಳ್ ನಾಗರಾಜ್ ಒಪ್ಪಿರಲಿಲ್ಲ.

ಯಾರು ಬೆಂಬಲ ಕೊಡಲಿ ಬಿಡಲಿ ನಾಳೆ ಬಂದ್ ಮಾಡುತ್ತೇವೆ ಎಂದು ಧರಣಿ ವೇಳೆ ಹೋರಾಟಗಾರ ವಾಟಾಳ್ ನಾಗರಾಜ್​ ಹೇಳಿಕೆ ನೀಡಿದ್ದರು. ಬಂದ್​ಗೆ ಬೆಂಬಲ ನೀಡುವಂತೆ ತೆರೆದ ಜೀಪ್​ನಲ್ಲಿ ಮೆರವಣಿಗೆ ನಡೆಸಲಾಗಿತ್ತು. ನಾಳೆ ಅಂಗಡಿ ಮುಚ್ಚುವಂತೆ ಮಾಲೀಕರಿಗೆ ವಾಟಾಳ್​ ನಾಗರಾಜ್ ಮನವಿ ಮಾಡಿದ್ದರು. ಇದೀಗ ಅವರು ಕರ್ನಾಟಕ ಬಂದ್ ಅನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್​ ಕೈ ಬಿಡುವಂತೆ ವಾಟಾಳ್​ ನಾಗರಾಜ್​ಗೆ ಫೋನ್ ಮಾಡಿದ ಸಿಎಂ ಬೊಮ್ಮಾಯಿ

Published On - 6:42 pm, Thu, 30 December 21