Odinangala: ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ‘ಅನಾರ್ಕಲಿಯ ಸೇಫ್ಟಿಪಿನ್’​ ತಂದಿದ್ದಾರೆ ಡಿಎಸ್ ನಾಗಭೂಷಣ

Odinangala: ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ‘ಅನಾರ್ಕಲಿಯ ಸೇಫ್ಟಿಪಿನ್’​ ತಂದಿದ್ದಾರೆ ಡಿಎಸ್ ನಾಗಭೂಷಣ
ಕಥೆಗಾರ ಜಯಂತ ಕಾಯ್ಕಿಣಿ ವಿಮರ್ಶಕ ಡಿ ಎಸ್ ನಾಗಭೂಷಣ

Jayanth Kaikini: ‘ಈ ಸಂಕಲನದ ಪ್ರತಿ ಕಥೆಯೂ ದಿನವಹಿಯಾಗಿ ನಮ್ಮ ಅರಿವಿನ ಅಳವಿಗೆ ಸಿಗದಷ್ಟು ವೇಗದಲ್ಲಿ ಆಧುನಿಕವಾಗುತ್ತಿರುವ ಜಗತ್ತಿನಲ್ಲಿನ ಬದುಕುವ ಹೋರಾಟದಲ್ಲಿ ಎಲ್ಲೋ ತಮಗೆ ಗೊತ್ತಿಲ್ಲದಂತೆಯೇ ತಮ್ಮ ಆತ್ಮವನ್ನೇ ಕಳೆದುಕೊಳ್ಳುತ್ತಿರುವ ತಳಮಳದಿಂದ ಕಂಪಿಸುತ್ತದೆ.’ ಡಿ. ಎಸ್. ನಾಗಭೂಷಣ

ಶ್ರೀದೇವಿ ಕಳಸದ | Shridevi Kalasad

|

Dec 30, 2021 | 1:32 PM

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

ಕನ್ನಡದ ಮಾಂತ್ರಿಕ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರ ಕೃತಿಯ ಬಗ್ಗೆ ಬರೆದಿದ್ದಾರೆ ಶಿವಮೊಗ್ಗದಲ್ಲಿ ವಾಸಿಸುತ್ತಿರುವ ಲೇಖಕ, ವಿಮರ್ಶಕ ಡಿ. ಎಸ್. ನಾಗಭೂಷಣ.

*

ಪುಸ್ತಕ: ಅನಾರ್ಕಲಿಯ ಸೇಫ್ಟಿಪಿನ್ (ಕಥೆಗಳು) ಲೇಖಕ: ಜಯಂತ ಕಾಯ್ಕಿಣಿ ಪುಟ : 176 ಬೆಲೆ : ರೂ. 125 ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

ಇದು ನಮ್ಮ ಹಿರಿಯ ಕಥೆಗಾರ ಜಯಂತ ಕಾಯ್ಕಿಣಿ ಕಳೆದ ಎಂಟು ವರ್ಷಗಳಲ್ಲಿ ಬರೆದ ಒಂಬತ್ತು ಕಥೆಗಳಿರುವ ಅವರ ಏಳನೇ ಕಥಾ ಸಂಕಲನ. ಇವನ್ನು ಕಥೆಗಳೆಂದು ಕರೆಯುವುದು ಎಷ್ಟು ಸರಿ ಎಂಬ ಅನುಮಾನ ಆತಂಕವಾಗಿ ಕಾಡುವಷ್ಟು ಇವು ನಮ್ಮ ಸಾಂಪ್ರದಾಯಿಕ ಕಥೆಗಾರಿಕೆಯ ಎಲ್ಲೆಗಳನ್ನೆಲ್ಲ ಮೀರಿ ಬೆಳೆದು ಓದುವವರ ಮನಸ್ಸುಗಳನ್ನೂ ಮಿಕ್ಕಿ ಮೀರಿದ ಎಲ್ಲೆಗಳಿಗೆ ಕರೆದೊಯ್ದು ಅವರನ್ನು ಬೆರಗಿನ ಅಂಚಿನಲ್ಲಿ ನಿಲ್ಲಿಸುವಂತಿವೆ. ಈ ಕಥೆಗಳ ಅವಲೋಕನವೇ ಇವುಗಳಿಗೆ ಮಾಡುವ ಅಪಚಾರವಾದೀತೇನೋ ಎನ್ನಿಸುವಷ್ಟು ಅವು ಒಂದು ಸೂಕ್ಷ್ಮ ಸಮತೋಲನದಲ್ಲಿವೆ.

ನಾನು ಅವರ ಇತ್ತೀಚಿನ ಕಥೆಗಳಲ್ಲಿ ಗಮನಿಸಿದಂತೆ ಜಯಂತ ಮುಖ್ಯವಾಗಿ ಜಾಗತೀಕರಣದ ಪರಿಣಾಮಗಳನ್ನು ನಗರ ಜೀವನದ ಹುಚ್ಚು ವೇಗ ಅದರ ಲಯವನ್ನು ಕೆಡಿಸಿ ಉಂಟು ಮಾಡುತ್ತಿರುವ ಮಾನವ ದುರಂತಗಳನ್ನೂ, ಮಾನವ ಅಂತಃಕರಣವನ್ನು ಘಾತಗೊಳಿಸುತ್ತಿರುವ ಪರಿಗಳನ್ನೂ ಸಣ್ಣ ಸಣ್ಣ ವಿವರಗಳಲ್ಲಿ ಕಟ್ಟಿಕೊಡುವರು. ಆದರೆ ಅದೇ ವೇಳೆಯಲ್ಲೇ ಆ ದುರಂತಗಳ ಪಾಳುಗಳ ನಡುವಿನಿಂದಲೇ ಮನುಷ್ಯ ಚೈತನ್ಯ ತನ್ನ ಅಂತಃಕರಣದ ಪಸೆಯನ್ನು ಉಳಿಸಿಕೊಂಡು ಮೇಲೇಳುವ ಚಿತ್ರಗಳನ್ನು ಕಟ್ಟಕೊಡುವ ಮೂಲಕ ಆ ಕಥೆಗಳಿಗೆ ಒಂದು ಹೊಸ ಅಸ್ತಿತ್ವವನ್ನೇ ನೀಡಿದವರು, ಪ್ರಸ್ತುತ ಸಂಕಲನದ ಒಂಬತ್ತು ಕಥೆಗಳಲ್ಲಿ ನಾವು ಇದನ್ನೇ ಕಾಣುತ್ತೇವಾದರೂ ಕಥೆ ಹೇಳುವ ಪರಿ ಈ ಎಲ್ಲ ಕಥೆಗಳ ಅಂತರಾಳಗಳಲ್ಲೂ ಕಂಡು ಕಾಣದಂತೆ ಹರಿವ ವಿಷಾದ ಎಂದು ಕರೆಯಬಹುದಾದ ಆವಿ ರೂಪದಲ್ಲಿ ಮಾತ್ರ ನಮ್ಮನ್ನು ತಾಕುವ ದುಃಖವು ಒಂದು ಅನುಭಾವಿ ಆಯಾಮವನ್ನು ಈ ಕಥೆಗಳಿಗೆ ಸೃಷ್ಟಿಸಿಕೊಟ್ಟಿದೆ. ಅದು ಅವನ್ನು ಕಥೆಯ ಹಂತದಿಂದ ಒಂದು ಹಂತ ಮೇಲೇರಿಸಿ ನಮ್ಮ ಒಳ ಹೊರಗನ್ನೆಲ್ಲ ತಾಕಿ ನಮ್ಮನ್ನು ಅಲ್ಲಾಡಿಸಿಬಿಡುವ ಒಂದು ಅಮಾಯಕ ಪ್ರತಿಪ್ರಪಂಚವನ್ನು ನಿರ್ಮಾಣ ಮಾಡುತ್ತದೆ.

ಈ ಸಂಕಲನದ ಪ್ರತಿ ಕಥೆಯೂ ದಿನವಹಿಯಾಗಿ ನಮ್ಮ ಅರಿವಿನ ಅಳವಿಗೆ ಸಿಗದಷ್ಟು ವೇಗದಲ್ಲಿ ಆಧುನಿಕವಾಗುತ್ತಿರುವ ಜಗತ್ತಿನಲ್ಲಿನ ಬದುಕುವ ಹೋರಾಟದಲ್ಲಿ ಎಲ್ಲೋ ತಮಗೆ ಗೊತ್ತಿಲ್ಲದಂತೆಯೇ ತಮ್ಮ ಆತ್ಮವನ್ನೇ ಕಳೆದುಕೊಳ್ಳುತ್ತಿರುವ ತಳಮಳದಿಂದ ಕಂಪಿಸುತ್ತದೆ. ಅದು ‘ಕುತನಿ ಕುಲಾವಿ’ ಕಥೆಯಲ್ಲಿ ಅವ್ವನ ಬದುಕು ನಿರ್ಮಮವಾಗುತ್ತಿರುವ ಗತಿ ಕೊನೆಗೆ ಬೇಂದ್ರೆ ಅಜ್ಜನ ಮನೆಯ ಹಿಂದಿನ ತುಳಸೀಕಟ್ಟೆಯನ್ನರಸಿ ಹೋಗುವಲ್ಲಿನ ನಿರ್ಭಾವುಕತೆ, ‘ಭಾಮೆ ಕೇಳೊಂದು ದಿನ’ ಕಥೆಯಲ್ಲಿ ಬದಲಾದ ತನ್ನೂರ ಆವರಣ ನೋಡುತ್ತಾ ವಿಷಾದದೊಡನೆ ಬೆಂಗಳೂರಿನಲ್ಲಿನ ತನ್ನ ಮಗನ ಗೆಳೆಯನ ಗೃಹಪ್ರವೇಶದ ಸಂದರ್ಭದಲ್ಲಿ ‘ತಾಳಮದ್ದಳೆ’ಯ ಪ್ರಧಾನ ಅರ್ಥಧಾರಿಯಾಗಿ ಮಗನ ಮನೆಗೆ ಬರುವ ತಾಳಮದ್ದಲೆ ಮಾಸ್ತರ ಪದ್ಮಾಕರರು ಆ ಮನೆಯಲ್ಲಿ ಮತ್ತು ನಂತರ ನಡೆಸುವ ತಾಳಮದ್ದಲೆಯಲ್ಲಿ ಅನುಭವಿಸುವ ತಬ್ಬಲಿತನ, ‘ಬೆಳಕಿನ ಬಿಡಾರ’ದ ಮುನ್ನಾ ಮುಂಬೈನ ಸಿನಿಮಾ ಸೆಟ್ಟುಗಳ ಮಧ್ಯದ ಬದುಕಿನಿಂದೆದ್ದು ತನ್ನ ಬಾಲ್ಯವನ್ನರಸುತ್ತಾ ತದಡಿಗೆ ಬರುವುದು, ‘ವಾಯಾ ಚಿನ್ನದ ಕೇರಿ’ಯ ಪೇಪರ್ ಹಾಕುವ ಬಡ ಹುಡುಗ ಯಾರೋ ಪ್ರೀತಿಯಿಂದ ಕೊಟ್ಟ ಇಂಪೋರ್ಟೆಡ್ ಬೂಟುಗಳನ್ನು ಹಾಕಿಕೊಂಡ ಹುರುಪಿನಲ್ಲಿ ಕಾಣುವ ತನ್ನೂರಿನ ಚಿನ್ನದ ಕೇರಿಯ ಹುಡುಗಿಯ ಕನಸು ಕಾಣುವ ಹಿಂದಿನ ಅವನ ಬದುಕಿನ ಆರ್ತತೆಗಳು, ‘ಎವರ್ ಗ್ರೀನ್’ನ ಸಿನಿಮಾ ನಟನ ಯೌವ್ವನ ಕಾಯ್ದುಕೊಳ್ಳುವ ಒಳಗಿನ ಹೋರಾಟದಲ್ಲಿ ಅವನ ಮಗ ತಬ್ಬಲಿತನವನ್ನು ಕಾಣುವಲ್ಲಿನ ದಟ್ಟ ವಿಷಾದ, ‘ಕಾಗದದ ಚೂರುಗಳು’ಲ್ಲಿನ ಸಿನಿಮಾ-ಧಾರಾವಾಹಿ ಲೋಕದ ವಾಹನ ಚಾಲಕನಿಂದ ಹಿಡಿದು ನಟಿ, ವಸ್ತ್ರ ವಿನ್ಯಾಸಕಿಯವರೆಗಿನ ಬದುಕುಗಳಲ್ಲಿನ ನೋವು ತುಂಬಿದ ಬಿರುಕುಗಳ ಸೂಕ್ಷ್ಮದರ್ಶನ, ‘ಹಲೋ ಮೈಕ್ ಟೆಸ್ಟಿಂಗ್’ದಲ್ಲಿ ಮುಂಬೈನ ಭೌಗೋಳಿಕ ವೈವಿಧ್ಯ-ವಿಸ್ತಾರ-ಬದುಕುಗಳೊಂದಿಗೆ ಬಿಚ್ಚಿಕೊಳ್ಳುವ ಗೀತ-ಸಂಗೀತಗಳ ಒಂದು ಅದ್ಭುತಲೋಕ ತಾರಕಕ್ಕೇರಿ ಕಥೆಯನ್ನು ಒಂದು ಅನನ್ಯ ಅನುಭವವನ್ನಾಗಿಸುವ ಬೆರಗಿನ ಮುಕ್ತಾಯ, ‘ಅನಾರ್ಕಲಿ ಸೇಫ್ಟಿ ಪಿನ್’ನ ಇಬ್ಬರು ಎಳೆಯ ಹುಡುಗಿಯರ ಒಡಲಲ್ಲಿನ ಅವ್ಯಕ್ತ ಸಂವೇದನೆಗಳ ಅಲೆಯುಬ್ಬರಗಳ ಸೂಕ್ಷ್ಮ ಸದ್ದುಗಳನ್ನು ನಮಗೆ ಕೇಳಿಸುವ ಕಲೆಗಾರಿಕೆಯ ಕೌಶಲ, ಕೊನೆಯದಾಗಿ ‘ಮೃಗನಯನಾ’ ಮುಂಬೈನ ಪೃಥ್ವಿ ಥಿಯೇಟರ್‌ನ ನಾಟಕಗಳ ಸುತ್ತಲ ಕಥೆಯನ್ನು ಈ ಕಥೆಗೆ ನಿಮಿತ್ತವಾದ ಕಲಾ ಮೀಮಾಂಸಕ ಹಸ್ತಾಕ್ಷರನ ಊರಾದ ಗಾಣಗಾಪುರದ ಆತನ ತಂದೆ- ತಾಯಿಯರ ಸುತ್ತಲಿನ ಕಥೆಯೊಂದಿಗೆ ಜೋಡಿಸಿ (ಅಲ್ಲೆ ‘ಹಸ್ತಾಕ್ಷರ’ ಎಂಬ ಶಬ್ದದ ದಿವ್ಯತೆ ಪರಿಚಯವಾಗುವುದು) ಮತ್ತೆ ಅದನ್ನು ಭೌತಿಕವಾಗಿ ಮುಂಬೈ ಕಥೆಯನ್ನಾಗಿ ಮಾಡಿಯೂ ಹಸ್ತಾಕ್ಷರನ ತಂದೆ ಮುಂಬೈಗೆ ಭೇಟಿ ನೀಡಿ ತನ್ನ ಕುಲವೃತ್ತಿಯ ಗೌರವಾರ್ಥ ಆ ಮಹಾನಗರದಲ್ಲಿ ದೋಬಿಘಾಟನ್ನು ನೋಡಬಯಸುವ ಹಂಬಲದಲ್ಲಿ ಮತ್ತು ಅದರ ಈಡೇರಿಕೆಯಲ್ಲಿ ಕಥೆಯನ್ನು ಅನುಭಾವಿಕ ಎತ್ತರಕ್ಕೆ ಮುಟ್ಟಿಸುವ ಇಲ್ಲಿನ ಕಥಾ ಕೌಶಲ ಅಸಾಮಾನ್ಯವಾದದ್ದು.

ಹೀಗೆ ನಾನು ಇಲ್ಲಿನ ಕಥೆಗಳ ‘ಮಹಿಮೆ’ಗಳನ್ನು ಹೇಳುವ ಅವಸರದಲ್ಲಿ ಅವುಗಳನ್ನು ಸಂಕ್ಷೇಪಿಸಿ ಹೇಳುವ ಮೂಲಕ ಅವುಗಳ ಹಲವು ಆಯಾಮಗಳನ್ನು ಕತ್ತರಿಸಿರುವ ಮತ್ತು ಹಲವು ಸಣ್ಣವಾದರೂ ಕಥೆಗಳನ್ನು ಮೃದುವಾಗಿ ಮೇಲೆತ್ತುವ ‘ಕುತನಿ ಕುಲಾವಿ’ಯ ಬಾಬಾ, ‘ಭಾಮೆ ಕೇಳೊಂದು ದಿನ’ದ ಬಾಯಕ್ಕ, ‘ಬೆಳಕಿನ ದಾರಿ’ಯ ಬಬನ್ ‘ಅನಾರ್ಕಲಿಯ ಸೇಫ್ಟಿಪಿನ್’ನ ಚಮೇಲಿಯ ಅಮ್ಮ, ಕನಕಾಂಬರ ಹೂವಿನ ಬಣ್ಣದ ಹೆಡ್​ಬ್ಯಾಂಡಿನ ಹುಡುಗ ಮತ್ತು ‘ಮೃಗನಯನಾ’ದ ಚಂದಾರಂತಹ ಕಥೆಯ ಶೃತಿ ಮೂಲಾಧಾರ ಪಾತ್ರಗಳ ಉಲ್ಲೇಖ ಕೂಡ ಮಾಡದೆ ಗೈದಿರುವ ವಿಮರ್ಶಾ ಕರ್ಮದ ಪಾಪದ ಅರಿವೂ ನನಗಿದೆ.

ಹಾಗೇ ಜಯಂತ್ ಕಥೆಯ ಪಾತ್ರಗಳು ಬರೀ ಪಾತ್ರಗಳಾಗಿರದೆ ಕಥೆಗಾರಿಕೆಯ ಸಾವಯವ ಭಾಗವಾಗುವಂತೆ ಅವುಗಳ ಸಣ್ಣ ಚಲನೆಗಳನ್ನೂ ಕಥೆ ಕಟ್ಟುವ ವಿವರಗಳಾಗಿ ಬಳಸುವ ಸೂಕ್ಷ್ಮ ಕುಸುರಿ ಕಲೆಗಾರಿಕೆಯನ್ನೂ ಇಲ್ಲಿ ಉಲ್ಲೇಖಿಸದೇ ಹೋದರೆ ಅದೂ ಒಂದು ಲೋಪವಾದೀತು! ಆದರೆ ಕೆಲವೆಡೆ ಈ ಕುಸರಿ ಅತಿರೇಕಕ್ಕೆ ಹೋಗಿ ಓದನ್ನು ಸುಸ್ತು ಮಾಡುವುದೂ ಉಂಟು. ಉದಾ: ‘ಸಾಮಾನು ಸರಂಜಾಮುಗಳು ಖಾಲಿಯಾದ ಮನೆ ಪರೀಕ್ಷೆಯಲ್ಲಿ ನೀಡುವ ಉತ್ತರ ಪತ್ರಿಕೆಯ ಖಾಲಿ ಕೋರಾತನವನ್ನು ನೆನಪಿಸುವಂತಿತ್ತು’ ಎಂಬಂತಹ ಓದಿನ ಸುಗಮತೆಗೆ ಅಡ್ಡಿಯಾಗುವ ಹಲವು ಅತಿ ವರ್ಣನೆಗಳು.

ಈ ಕಥಾಸಂಕಲನ ಆಯ್ದ ಭಾಗ : ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020;ಓದಿನಂಗಳ’ದಲ್ಲಿ ಕಾದಂಬರಿಕಾರ ವಿವೇಕ ಶಾನಭಾಗ

Follow us on

Related Stories

Most Read Stories

Click on your DTH Provider to Add TV9 Kannada