ಡಿಎಸ್ ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಡಿಎಸ್ ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗಾಂಧಿ ಕಥನ ಪುಸ್ತಕ ಮತ್ತು ಲೇಖಕ ಡಿ.ಎಸ್.ನಾಗಭೂಷಣ

ಮಹಾತ್ಮ ಗಾಂಧಿ ಅವರ ಬದುಕಿನ ವಿವರಗಳನ್ನು ನಿರುದ್ವಿಗ್ನವಾಗಿ ಕಟ್ಟಿಕೊಡುವ ಅಪರೂಪದ ಕೃತಿಯು ಈವರೆಗೆ ಹಲವು ಬಾರಿ ಪುನರ್​ ಮುದ್ರಣವಾಗಿದೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 30, 2021 | 11:20 PM

ದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2021ರ ಸಾಲಿನ ವರ್ಷದ ಪುಸ್ತಕ ಪ್ರಶಸ್ತಿಗೆ ಕನ್ನಡದ ಹಿರಿಯ ಲೇಖಕ ಡಿ.ಎಸ್.ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಯು ಆಯ್ಕೆಯಾಗಿದೆ. ಮಹಾತ್ಮ ಗಾಂಧಿ ಅವರ ಬದುಕಿನ ವಿವರಗಳನ್ನು ನಿರುದ್ವಿಗ್ನವಾಗಿ ಕಟ್ಟಿಕೊಡುವ ಅಪರೂಪದ ಕೃತಿಯು ಈವರೆಗೆ ಹಲವು ಬಾರಿ ಪುನರ್​ ಮುದ್ರಣವಾಗಿದೆ. ಬಸು ಬೇವಿನಗಿಡದ ಅವರ ‘ಓಡಿ ಹೋದ ಹುಡುಗ’ ಕಾದಂಬರಿಗೆ ‘ಬಾಲ ಪುರಸ್ಕಾರ’ ಹಾಗೂ ಎಚ್.ಲಕ್ಷ್ಮೀನಾರಾಯಣ ಸ್ವಾಮಿ ಅವರ ‘ತೊಗಲು ಚೀಲದ ಕರ್ಣ’ ಕೃತಿಗೆ ‘ಯುವ ಪುರಸ್ಕಾರ’ ಗೌರವ ಲಭಿಸಿದೆ.

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಯುವ, ಬಾಲ ಪುರಸ್ಕಾರಗಳು ಐವತ್ತು ಸಾವಿರ ರೂಪಾಯಿ ಜೊತೆಗೆ ಸನ್ಮಾನವನ್ನು ಒಳಗೊಂಡಿರುತ್ತವೆ. ಸಾಹಿತಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಅವರು ಯುವ ಸಾಹಿತ್ಯ ಪ್ರಶಸ್ತಿಯ ತೀರ್ಪುಗಾರರಾಗಿದ್ದರು. ಟಿ.ಪಿ. ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್ ದಿವಾಕರ ಅವರು ಬಾಲ ಸಾಹಿತ್ಯ ಪ್ರಶಸ್ತಿ ವಿಭಾಗದ ತೀರ್ಪುಗಾರರಾಗಿದ್ದರು.

ಪ್ರಮುಖ ಕೃತಿ ಆಯ್ಕೆಯ ತೀರ್ಪುಗಾರರಾಗಿ ಬೊಳುವಾರ್ ಮಹಮ್ಮದ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು. ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ಪುಸ್ತಕ ಆಯ್ಕೆ ಪ್ರಕ್ರಿಯೆಯು ನಡೆಯಿತು. ದೆಹಲಿಯಲ್ಲಿ ಫೆಬ್ರುವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ನಿರುದ್ವಿಗ್ನ ಬರಹಗಾರ ಡಿ.ಎಸ್.ನಾಗಭೂಷಣ್ ಪರಿಚಯ ನಿರಂತರ ಅಧ್ಯಯನ ಮತ್ತು ಬರಹವನ್ನೇ ಧ್ಯಾನಿಸುವ ಅಪರೂಪದ ಬರಹಗಾರ ಡಿ.ಎಸ್.ನಾಗಭೂಷಣ್. ಬೆಂಗಳೂರಿನ ತಿಮ್ಮಸಂದ್ರದಲ್ಲಿ 1ನೇ ಫೆಬ್ರುವರಿ 1952ರಂದು ಜನಿಸಿದ ನಾಗಭೂಷಣ್, ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಗಾಂಧಿ ಕಥನದ ಜೊತೆಗೆ ಇಂದಿಗೆ ಬೇಕಾದ ಗಾಂಧಿ, ಲೋಹಿಯಾ ಜೊತೆಯಲ್ಲಿ, ರೂಪ ರೂಪಗಳನು ದಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ ಅವರ ಪ್ರಮುಖ ಕೃತಿಗಳಾಗಿವೆ.

ಅಪರೂಪದ ಕೃತಿ ಗಾಂಧಿ ಕಥನ 2019ರಲ್ಲಿ ಪ್ರಕಟವಾದ ಗಾಂಧಿ ಕಥನ ಕನ್ನಡ ಸಹೃದಯರ ಮೆಚ್ಚುಗೆಗೆ ಪಾತ್ರವಾದ ಕೃತಿ. ಕನ್ನಡ ಹಲವು ಪ್ರಮುಖ ವಿಮರ್ಶಕರು ಈ ಪುಸ್ತಕದ ಕಥನ ವೈಖರಿ, ಈ ಪುಸ್ತಕಕ್ಕಾಗಿ ಲೇಖಕರು ನಡೆಸಿದ್ದ ಸಿದ್ಧತೆಯನ್ನು ಮೆಚ್ಚಿ ವಿಮರ್ಶೆ ಬರೆದಿದ್ದರು. ಈ ಪೈಕಿ ಎರಡು ಪ್ರಮುಖ ವಿಮರ್ಶೆಗಳ ಆಯ್ದ ಭಾಗವನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸ್ವ- ಆವಿಷ್ಕಾರದ ಸಂಭ್ರಮ ಗಾಂಧಿ ಕಥನ ಕೃತಿಯ ಬಗ್ಗೆ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿಯವರು ‘ಹೊಸ ಮನುಷ್ಯ ಸಮಾಜವಾದಿ ಮಾಸಿಕ’ದಲ್ಲಿ ಹೀಗೆ ಬರೆದಿದ್ದರು.

‘ಗಾಂಧಿಯವರ ಚಿತ್ರ ಆರಾಧನಾ ಭಾವದಿಂದ ಬಾನೇರದಂತೆ, ವಿಮರ್ಶೆಯ ಉಳಿಯಿಂದ ಮೂರ್ತಿ ಭಂಜನೆಯೂ ಆಗದಂತೆ, ವರದಿ ಮಾತ್ರ ವಿವರಣೆಗಳಿಂದ ರಕ್ತ ಹೀನವು ಆಗದಂತೆ, ಸಾವಧಾನದ ಓದುಗರಿಗೆ ತಮ್ಮೊಳಗೇ ಅರ್ಥವಾಗುವಂತೆ, ತಮ್ಮದೇ ಪೂರ್ವಾಗ್ರಹಗಳ ತಿಕ್ಕಾಟದ ಒಳಗಿಂದಲೇ ಗಾಂಧಿ ಮೂರ್ತಿಯೊಂದು ಮೂಡಿಬರಲನುವಾಗುವಂತೆ -ಬಹು ಪರಿಶ್ರಮದಿಂದ ಬರೆದಿರತಕ್ಕ ಅಪೂರ್ವವಾದ ಬರಹವಿದು. ಗಾಂಧಿ, ತಮ್ಮನ್ನು ತಾವೇ ಹೇಗೆ ಕಡೆದುಕೊಂಡರೆನ್ನವುದನ್ನು, ತಮ್ಮನ್ನು ತಾವೇ ಕೆತ್ತಿಕೊಳ್ಳುತ್ತಾ ಆ ಅಸಹನೀಯ ನೋವು ಮತ್ತು ಸ್ವ- ಆವಿಷ್ಕಾರದ ಸಂಭ್ರಮಗಳನ್ನು ಹೇಗೆ ಅನುಭವಿಸಿದರೆಂಬುದನ್ನು ಪಾರದರ್ಶಕವಾಗಿ ತೋರಿಸುತ್ತಿರುವ ಗ್ರಂಥವಿದು. ಪಾರದರ್ಶಕತೆಗೆ ವಿರೋಧಿಯಾದ ಎಲ್ಲ ಬಗೆಯ ವಾಗಾಡಂಬರಗಳನ್ನು ಕೈಬಿಟ್ಟ ಬರಹವಿದು. ಒಂದು ಮಾತಿನಲ್ಲಿ ಹೇಳಬೇಕೆಂದರೆ- ಉಪವಾಸ ಕೂರುತ್ತಾ, ಉಪವಾಸದಿಂದಲೇ ಪುಷ್ಟಿಗೊಳ್ಳುತ್ತ ಹೋಗುವ ಗಾಂಧಿ ವ್ಯಕ್ತಿತ್ವವನ್ನು ತೋರಿಸಬೇಕಾದ ಮಾತು ಹೇಗಿರಬೇಕು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಂಡ ಬರಹವಿದು’.

ಇದು ಬೃಹತ್‌ ಕೃತಿಯೂ ಹೌದು, ಮಹತ್ಕೃತಿಯೂ ಹೌದು ಸಾಮಾಜಿಕ ಚಿಂತಕ ನಿತ್ಯಾನಂದ ಬಿ.ಶೆಟ್ಟಿ ಅವರು ಪ್ರಜಾವಾಣಿಯಲ್ಲಿ ಹೀಗೆ ಬರೆದಿದ್ದರು.

‘ಗಾಂಧಿಯ ಕಾಲದ ರಾಜಕೀಯ- ಸಾಮಾಜಿಕ- ಸಾಂಸ್ಕೃತಿಕ ಮತ್ತು ಬೌದ್ಧಿಕ ವಾತಾವರಣವೊಂದನ್ನು ತನ್ನ ಭಾವಕೋಶದಲ್ಲಿ ಮರುಸೃಜಿಸದಿದ್ದರೆ ಯಾವ ಲೇಖಕನಿಗೂ ಇಂತಹ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಡಿಎಸ್‍ಎನ್ ತಮ್ಮ ಅಪಾರವಾದ ಓದಿನಿಂದ ಇಂತಹ ಸನ್ನಿವೇಶವೊಂದನ್ನು ತಮ್ಮೊಳಗೆ ಪುನರ್‌ ಸೃಷ್ಟಿಸಿಯೇ ಗಾಂಧಿ ಕಥನಕ್ಕೆ ತೊಡಗಿದಂತಿದೆ ಎನ್ನುವುದಕ್ಕೆ ಅವರು ಕೃತಿಯ ಕೊನೆಗೆ ಕೊಟ್ಟ ಪರಾಮರ್ಶನ ಗ್ರಂಥಗಳ ಪಟ್ಟಿಯೇ ಸಾಕ್ಷಿ. 24 ಶೀರ್ಷಿಕೆಗಳಲ್ಲಿರುವ 38 ಪುಸ್ತಕಗಳನ್ನು ಓದಿ 93 ಅಧ್ಯಾಯಗಳಾಗಿ ಈ ಪುಸ್ತಕವನ್ನು ಡಿಎಸ್‍ಎನ್ ಹೆಣೆದಿದ್ದಾರೆ. ಹಾಗಾಗಿ ಇದು ಬೃಹತ್‌ ಕೃತಿಯೂ ಹೌದು, ಮಹತ್ಕೃತಿಯೂ ಹೌದು’.

ಇದನ್ನೂ ಓದಿ: ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ‘ಅನಾರ್ಕಲಿಯ ಸೇಫ್ಟಿಪಿನ್’​ ತಂದಿದ್ದಾರೆ ಡಿಎಸ್ ನಾಗಭೂಷಣ ಇದನ್ನೂ ಓದಿ: Mahatma Gandhi: ಮಹಾತ್ಮ ಗಾಂಧಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲು ನಿರ್ಣಯ ಮಂಡನೆ

Follow us on

Related Stories

Most Read Stories

Click on your DTH Provider to Add TV9 Kannada