ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ಶಾಕ್? ಸಿಎಂ ಚರ್ಚೆ ಬಳಿಕ ಘೋಷಣೆ

ಕೆಎಂಎಫ್‌ ಲೀಟರ್ ಹಾಲಿನ ದರ 2 ರೂಪಾಯಿ ಏರಿಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದೆ.

ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ಶಾಕ್? ಸಿಎಂ ಚರ್ಚೆ ಬಳಿಕ ಘೋಷಣೆ
ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ಶಾಕ್?
Follow us
TV9 Web
| Updated By: ಆಯೇಷಾ ಬಾನು

Updated on:Jan 18, 2022 | 10:57 AM

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರದಲ್ಲೇ ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಹಾಲಿನ ದರ ಏರಿಕೆಯಾಗುವ ಬಿಸಿ ಮುಟ್ಟಲಿದೆ. ಲೀಟರ್ ಹಾಲಿನ ದರ 2 ರೂಪಾಯಿ ಏರಿಕೆ ಮಾಡಲು ಕೆಎಂಎಫ್‌ ಚಿಂತಿಸುತ್ತಿದೆ.

ಕೆಎಂಎಫ್‌ ಲೀಟರ್ ಹಾಲಿನ ದರ 2 ರೂಪಾಯಿ ಏರಿಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದೆ. ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡುವ ಸಂಬಂಧ ಪ್ರಸ್ತಾಪ ಮಾಡಲಾಗಿದ್ದು ಒಕ್ಕೂಟಗಳ ಜತೆ ಸಭೆಯ ಬಳಿಕ ಸಿಎಂ ಬೊಮ್ಮಾಯಿ ಜತೆ ಚರ್ಚಿಸುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದ್ರೆ, ನಂದಿನಿ ಹಾಲಿನ ದರ ರಾಜ್ಯದಲ್ಲಿ ಅತಿ ಕಡಿಮೆ ಇದೆ. ಪ್ರತಿ ಲೀಟರ್ ಗೆ 3 ರೂ. ದರ ಏರಿಕೆ ಮಾಡುವಂತೆ KMF ಅಧ್ಯಕ್ಷರಿಗೆ 14 ಹಾಲು ಒಕ್ಕೂಟಗಳು ಮನವಿ ಮಾಡಿವೆ. ಈ ಹಿನ್ನಲೆ ಹಾಲಿನ ದರ ಏರಿಕೆ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸಿ ಸಿಎಂರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ, ಹಾಲಿನ ದರ ಏರಿಕೆ ಫಿಕ್ಸ್ ಎನ್ನಲಾಗಿದೆ. ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಬೆಲೆ ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿದೆ.

ಕಳೆದ 3 ವರ್ಷಗಳಿಂದ ಹಾಲಿನ ದರ ನಿರಂತರವಾಗಿ ಏರಿಕೆಯಾಗುತ್ತಿದೆ. 2019ರಲ್ಲಿ 3 ಬಾರಿ ಹಾಲಿನ ದರ ಏರಿಕೆ ಮಾಡಲಾಗಿತ್ತು. ಮೊದಲು 2019ರ ಫೆಬ್ರವರಿಯಲ್ಲಿ ₹1.50, ಆಗಸ್ಟ್‌ನಲ್ಲಿ ₹1.50 ಏರಿಕೆ ಹಾಗೂ ನವೆಂಬರ್‌ನಲ್ಲಿ 3ನೇ ಬಾರಿಗೆ 1 ರೂಪಾಯಿ ಏರಿಕೆ ಮಾಡಲಾಗಿತ್ತು. ಬಳಿಕ 2020ರಲ್ಲಿ 1 ರೂಪಾಯಿ 50 ಪೈಸ್ ಏರಿಕೆ ಮಾಡಲಾಗಿತ್ತು. 2021ರ ಫೆಬ್ರವರಿಯಲ್ಲಿ ಹಾಲಿನ ದರ ₹2 ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್‌ ಮುಂದಾಗಿದೆ.

ಪ್ರತಿ ಲೀಟರ್‌ಗೆ ₹3 ಹೆಚ್ಚಳ ಮಾಡುವಂತೆ ಪ್ರಸ್ತಾಪ 1 ವಾರದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ತಿಳಿಯಲಿದೆ ಎಂದು ಟಿವಿ9ಗೆ KMF ವ್ಯವಸ್ಥಾಪಕ ನಿರ್ದೇಶಕ ಸತೀಶ್ ಮಾಹಿತಿ ನೀಡಿದ್ದಾರೆ. ಕೆಎಂಎಫ್ ಅಧ್ಯಕ್ಷರು ಬೆಳಗಾವಿ ಪ್ರವಾಸದಲ್ಲಿರುವ ಹಿನ್ನೆಲೆ ಅಧ್ಯಕ್ಷರು ಬಂದ ಕೂಡಲೇ ಸಿಎಂ ಜೊತೆ ಚರ್ಚಿಸುತ್ತೇವೆ.ಪ್ರತಿ ಲೀಟರ್‌ಗೆ ₹3 ಹೆಚ್ಚಳ ಮಾಡುವಂತೆ ಪ್ರಸ್ತಾಪ ಇಟ್ಟಿದ್ದೇವೆ. ಹಾಲು ಒಕ್ಕೂಟಗಳ ಮನವಿ ಬಗ್ಗೆ ಸಿಎಂ ಮುಂದೆ ಪ್ರಸ್ತಾಪ ಮಾಡ್ತೀವಿ. ಆದರೆ ಸರ್ಕಾರ ದರ ಹೆಚ್ಚಳ ಮಾಡುತ್ತೋ ಇಲ್ವೋ ಗೊತ್ತಿಲ್ಲ ಎಂದು ಟಿವಿ9ಗೆ KMF ವ್ಯವಸ್ಥಾಪಕ ನಿರ್ದೇಶಕ ಸತೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶ ವಿರೋಧ ಪಕ್ಷದ ನಾಯಕ, ಟಿಡಿಪಿ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡುರಿಗೆ ಕೊರೊನಾ ಸೋಂಕು

Published On - 9:33 am, Tue, 18 January 22