ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಜೊತೆ ಚರ್ಚೆ: ಪ್ರಲ್ಹಾದ್ ಜೋಶಿ
ದೀಪಾವಳಿ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಬರುವುದಾಗಿ ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ (Cabinet expansion) ಸುಳಿವನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದೀಪಾವಳಿ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಬರುವುದಾಗಿ ಹೇಳಿದ್ದಾರೆ. ದೀಪಾವಳಿ ಹಬ್ಬ ಮುಗಿದ ಮೇಲೆ ಸಿಎಂ ದೆಹಲಿಗೆ ಬರಲಿದ್ದಾರೆ. ಬಸವರಾಜ್ ಬೊಮ್ಮಾಯಿಯವರು ದೆಹಲಿಗೆ ಬಂದಾಗ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವುದಾಗಿ ಪ್ರಲ್ಹಾದ್ ಜೋಶಿ ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನ ಭೇಟಿ ಮಾಡಿ ಮಾತಾನಾಡುವುದಾಗಿ ಹೇಳಿರುವ ಪ್ರಲ್ಹಾದ್ ಜೋಶಿಯವರು, ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆಯ ಸುಳಿವು ನೀಡಿದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡಿದಷ್ಟು ಬಿಜೆಪಿಗೆ ಅನುಕೂಲ
ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿ ಭಯ ಬಿದ್ದಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಹೌದು ನಾವು ವಿಚಲಿತರಾಗಿದಕ್ಕೆ ಗೋವಾದಲ್ಲಿ ಕೈ ನಾಯಕರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗ್ತಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದರು.
ಭಾರತ್ ಜೋಡೊ ಆಗ್ತಿದ್ದಂತೆ ರಾಜಸ್ಥಾನದಲ್ಲೂ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಲು ತಯಾರಾಗಿದ್ದಾರೆ. ಜೋಡೋ ಅಂತ ಹೆಸರಿಟ್ಟುಕೊಂಡು ಯಾತ್ರೆ ನಡೆಸ್ತಿದ್ದಾರೆ. ಆದರೆ, ಅಸಲಿಗೆ ನಡೆಯುತ್ತಿರುವುದು ಕಾಂಗ್ರೆಸ್ ತೋಡೋ. ಆದರೆ ಕಾಂಗ್ರೆಸ್ ನಾಯಕರು ಅದನ್ನು ಮುಚ್ಚಿಕೊಳ್ಳಲು ಜೋಡೋ ಯಾತ್ರೆ ನಡೆಸ್ತಿದ್ದಾರೆ. ರಾಹುಲ್ ಗಾಂಧಿ ಅವರು ಯಾತ್ರೆ ಹೋದಲೆಲ್ಲ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜೋಶಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




