ಬೆಂಗಳೂರು, ಅ.02: ಸಂಚಾರ ದಟ್ಟಣೆಗೆ ಪರಿಹಾರವಾಗಿದ್ದ ಕಾರ್ ಪೂಲಿಂಗ್ (Carpooling) ಅನ್ನು ಸಾರಿಗೆ ಇಲಾಖೆ ನಿಷೇಧಿಸಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಕಾರ್ ಪೂಲಿಂಗ್ ನಿಷೇಧಿಸಿಲ್ಲ ಎಂದು ರಾಮಲಿಂಗಾ ರೆಡ್ಡಿ ಅವರು ಎಕ್ಸ್ ನಲ್ಲಿ (ಟ್ವಿಟರ್) ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ. ಕಾರ್ ಪೂಲಿಂಗ್ ನಿಷೇಧ ಕುರಿತು ಯಾವುದೇ ಅಧಿಕೃತ ನೋಟಿಸ್ ನೀಡಿಲ್ಲ. ಈ ಕುರಿತು ಸರ್ಕಾರದಿಂದ ಯಾವುದೇ ಆದೇಶ ನೀಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ ಪೂಲಿಂಗ್ ಆ್ಯಪ್‌ಗಳು ಇದುವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗಿ ಪಡೆದುಕೊಂಡಿಲ್ಲ. ಅನುಮತಿ ಇಲ್ಲದ ಕಾರ್ ಪೂಲಿಂಗ್ ಸಂಸ್ಥೆಗಳನ್ನು ಕಾನೂನು ಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಾರ್ ಪೂಲಿಂಗ್‌ಗೆ ಕೆಲ ಷರತ್ತುಗಳು ಅನ್ವಯವಾಗಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಹಾಗೂ ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿ ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ ? ಎಂದು ಟ್ವಿಟರ್ನಲ್ಲಿ ಪೋಸ್ಟ್ ಹಾಕಿ ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನು ಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್ ಪೂಲಿಂಗ್ ಗೆ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.
Karnataka Transport Minister Ramalinga Reddy tweets, “Carpooling is not banned, it is false news. First, let them take permission. When they have not taken the permission where is the question of banning? Everyone should follow the rules and regulations. It is illegal to use… pic.twitter.com/Sq8On8EYYt
— ANI (@ANI) October 2, 2023
ಇದನ್ನೂ ಓದಿ: ಬೆಂಗಳೂರಲ್ಲಿ ಕಾರ್ಪೂಲಿಂಗ್ ನಿಷೇಧಕ್ಕೆ ಸಾರಿಗೆ ಇಲಾಖೆ ಮುಂದು; 10,000 ರೂ ವರೆಗೆ ದಂಡ ವಿಧಿಸುವ ಸಾಧ್ಯತೆ
ಬೆಂಗಳೂರು, ಮುಂಬೈ ಇತ್ಯಾದಿ ನಗರಗಳಲ್ಲಿ ಕಾರ್ ಪೂಲಿಂಗ್ ಟ್ರೆಂಡ್ನಲ್ಲಿದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ಕಾರಿನಲ್ಲಿ ಹೋಗುವ ಉದ್ಯೋಗಿಗಳಲ್ಲಿ ಇದು ಜನಪ್ರಿಯವಾಗಿದೆ. ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು. ಇದರಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆ ಆಗುತ್ತದೆ, ಪೆಟ್ರೋಲ್ ವೆಚ್ಚ ತಗ್ಗುತ್ತದೆ. ಐಟಿ ವಲಯದಲ್ಲಿ ಈ ಕಾರ್ ಪೂಲಿಂಗ್ ಬಹಳ ಜನಪ್ರಿಯವಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ