ಬೆಂಗಳೂರು, ಅ.01: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಂಜಾ (Cannabis) ಹಾವಳಿ ಹೆಚ್ಚಾಗಿದ್ದು ಮಾಜಿ ಸಚಿವ, ಶಾಸಕ ಮುನಿರತ್ನ (Munirathna) ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆರ್.ಆರ್.ನಗರದ (RR Nagara) ವಾರ್ಡ್ವೊಂದರಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಮುನಿರತ್ನ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರ (Bengaluru CCB Police) ಬಳಿ ದೂರು ದಾಖಲಾಗಿದೆ. ಯುವಕನೋರ್ವ ದೂರು ನೀಡಿದ್ದು ಡ್ರಗ್ಸ್ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಸಿಬಿಗೆ ಮನವಿ ಮಾಡಿದ್ದಾನೆ. ಸದ್ಯ ದೂರು ಪಡೆದಿರುವ ಸಿಸಿಬಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ತಮ್ಮ ಕ್ಷೇತ್ರದ ವಾರ್ಡ್ ಒಂದರಲ್ಲೇ 14 ಕೆಜಿ ಗಾಂಜಾ ಮಾರಾಟವಾಗುತ್ತದೆ ಎಂದು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಘಂಟಾಘೋಷವಾಗಿ ಮುನಿರತ್ನ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂತೋಷ್ ಎಂಬ ಯುವಕ ಸಿಸಿಬಿಗೆ ದೂರು ನೀಡಿದ್ದು ಡ್ರಗ್ ಪೆಡ್ಲರ್ಗಳು ಪೊಲೀಸರ ಜೊತೆಗೇ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎಂದೂ ಗಂಭೀರ ಆರೋಪ ಮಾಡಿದ್ದಾನೆ. ಅಲ್ಲದೆ ಮುನಿರತ್ನ ಹಾಗೂ ಮಾಜಿ ಕಾರ್ಪೋರೇಟರ್ ಜಿಕೆ ವೆಂಕಟೇಶ ವಿರುದ್ದ ದೂರು ನೀಡಿದ್ದಾನೆ. ಮಾಹಿತಿ ಪಡೆದು ಡ್ರಗ್ ಪೆಡ್ಲರ್ ಗಳನ್ನು ಬಂಧಿಸುವಂತೆ ಸಿಸಿಬಿಗೆ ಸಂತೋಷ್ ದೂರು ನೀಡಿದ್ದಾನೆ.
ಇದನ್ನೂ ಓದಿ: ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆಸಾಮಿ: ನಟೋರಿಯಸ್ ಗಾಂಜಾ ಪೆಡ್ಲರ್ ಬಂಧನ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 2 ಕೆ.ಜಿ ಗಾಂಜಾ ಹಾಗೂ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ಹಾನಗಲ್ ತಾಲೂಕಿನ ತಿರವಳ್ಳಿ ಗ್ರಾಮದ ಸಲ್ಮಾನಖಾನ ಆಲೂರ(24) ಬಂಧಿತ ಆರೋಪಿ. ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯ ಹತ್ತಿರ ಕೇಸರಿ ಬಣ್ಣದ ಕೈ ಚೀಲದಲ್ಲಿ 2 ಕೆ.ಜಿ 28ಗ್ರಾಂ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದಾಗ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ 80 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಿಪಿಐ ಬಿ.ಎಸ್. ಲೋಕಾಪುರ ನಿರ್ದೇಶನದಂತೆ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ ಮತ್ತು ಹನಮಂತ ಕುಡಗುಂಚಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:41 am, Sun, 1 October 23