ಕಾವೇರಿ ಜಲವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟ CWRC; ಮುಂದಿನ 15 ದಿನ ನಿತ್ಯ 2000 ಕ್ಯೂಸೆಕ್ ನೀರು ಹರಿಸಲು ಶಿಫಾರಸು
ಕಾವೇರಿ ಜಲ ವಿವಾದ ಸಂಬಂಧ ತಮಿಳುನಾಡಿನ ಎರಡು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಶಾಕ್ ನೀಡಿದೆ. ಮುಂದಿನ 15 ದಿನಗಳ ಕಾಲ ನಿತ್ಯ 2000 ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿದೆ. CWRC 147ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

ನವದೆಹಲಿ, ನವೆಂಬರ್ 20: ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ನಡುವೆಯೇ ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ CWRC ಶಿಫಾರಸು ಮಾಡಿದೆ. ಮುಂದಿನ 15 ದಿನ ನಿತ್ಯ 2000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ಸಿಡಬ್ಲ್ಯುಆರ್‌ಸಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡೆದ CWRC 147ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಬೆಳಿಗ್ಗೆಯಷ್ಟೇ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿತ್ತು. 3ನೇ ಅರ್ಜಿಯನ್ನೂ ವಜಾಗೊಳಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ್ದು, ತಮಿಳುನಾಡು ಪರ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿತ್ತು. ಈ ನಡುವೆಯೇ ಸಿಡಬ್ಲ್ಯೂಆರ್ಸಿ ಮಾಡಿರುವ ಶಿಫಾರಸು ಮಹತ್ವ ಪಡೆದುಕೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




