
ಬೆಂಗಳೂರು, ಜನವರಿ 09: ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಂಟಿ ನಿರ್ದೇಶಕ ರಾಜಾರಾಮ್ ಮೋಹನ್ ರಾವ್ ಚೆನ್ನು ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ (CBI Raid) ಮಾಡಿದ್ದಾರೆ. 9.5 ಲಕ್ಷ ರೂ. ಲಂಚ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ ಅವರ ನಿವಾಸದಲ್ಲಿ 3.59 ಕೋಟಿ ರೂ ನಗದು ಪತ್ತೆ ಆಗಿದೆ. ವಿದೇಶಿ ಕರೆನ್ಸಿ (Foreign currency) ಮತ್ತು ಚಿನ್ನಾಭರಣಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಲಂಚ ಆರೋಪ ಹಿನ್ನೆಲೆ ದೂರು ದಾಖಲಿಸಿಕೊಂಡು ಬೆಂಗಳೂರಿನಲ್ಲಿರುವ ರಾಜಾರಾಮ್ ಮೋಹನ್ ರಾವ್ ಚೆನ್ನು ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಕೋಟ್ಯಂತರ ರೂ ನಗದು ಸೇರಿದಂತೆ ಯುಎಸ್, ಹಾಂಗ್ ಕಾಂಗ್, ಸಿಂಗಾಪುರ್ ಡಾಲರ್, ಇಂಡೋನೇಷ್ಯಾ ರುಪಿಯಾ,
ಮಲೇಷಿಯನ್ ರಿಂಗಿಟ್, ಯುರೋ ಸೇರಿ ಯುವಾನ್ ವಿದೇಶಿ ಕರೆನ್ಸಿ ಮನೆಯಲ್ಲಿ ಪತ್ತೆ ಆಗಿದೆ. ಜೊತೆಗೆ ಆಭರಣಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ರಾಜಾರಾಮ್ ಮೋಹನ್ ರಾವ್ ಜೊತೆಗೆ ಸುಧೀರ್ ಗ್ರೂಪ್ ಆಫ್ ಕಂಪನಿಯ ನಿರ್ದೇಶಕನಾಗಿರುವ ಅತುಲ್ ಖನ್ನಾ ಕೂಡ ಬಂಧನವಾಗಿದೆ. ಸುಧೀರ್ ಗ್ರೂಪ್ ಆಫ್ ಕಂಪನಿ ಉತ್ಪಾದಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರ ಪರೀಕ್ಷಾ ವರದಿಗಳನ್ನ ನೀಡಲು ಲಂಚ ಪಡೆದ ಆರೋಪ ಹಿನ್ನೆಲೆ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಶಿವಮೊಗ್ಗ ನಗರ ಪಾಲಿಕೆ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ, ಟಪಾಲು ವಿಭಾಗದ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದೆ. ಲೋಕಾಯುಕ್ತ ದಾಳಿ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದರು.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಭೂಸ್ವಾಧೀನ ಪರಿಹಾರ ನೀಡದಕ್ಕೆ NHAI ಕಚೇರಿ, ಡಿಸಿ ಕಾರು ಜಪ್ತಿ
ವಿಲೇವಾರಿಯಾಗದೇ ಇರುವ ಅರ್ಜಿಗಳನ್ನ ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಕಚೇರಿಗಳ ಬೀಗ ಹುಡುಕುತ್ತಿರುವುದು ನೋಡಿ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು. ಮಹಾನಗರ ಪಾಲಿಕೆ ಸಿಬ್ಬಂದಿ ಐಡಿ ಕಾರ್ಡ್ ಹಾಕದೆ ಇರುವುದಕ್ಕೂ ತರಾಟೆ ತೆಗೆದುಕೊಂಡರು. ದಿನನಿತ್ಯ ನಿರ್ವಹಿಸುವ ಕಾರ್ಯದ ಬಗ್ಗೆ ಮಾಹಿತಿ ಇಲ್ಲದೆ ಸಿಬ್ಬಂದಿ ಪರದಾಡಿದರು. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಗೆ ಲೋಕಾಯುಕ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.