ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ(Education institutions) ಮೇಲೆ ಸಿಬಿಐ ದಾಳಿ (CBI Raid) ಮಾಡಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ಸಿಬಿಐ ಅಧಿಕಾರಿಗಳು ಇಂದು(ಡಿಸೆಂಬರ್ 19) ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಚೇರ್ಮನ್ ಆಗಿದ್ದರೆ, ಪುತ್ರಿ ಐಶ್ವರ್ಯ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಕಾರ್ಯದರ್ಶಿಯಾಗಿದ್ದಾರೆ. 2013-2018ರವರೆಗೆ 74.92 ಕೋಟಿ ರೂ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪ ಹಿನ್ನೆಲೆಯಲ್ಲಿ ಡಿಕೆಶಿ ವಿರುದ್ಧ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ FIR ದಾಖಲಿಸಿದ್ದರು. 2020ರ ಅಕ್ಟೋಬರ್ 5ರಂದು ಡಿಕೆಶಿ, ಡಿ.ಕೆ.ಸುರೇಶ್ ಮನೆ ಸೇರಿ 14 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆದಿತ್ತು.
ಸಿಬಿಐ ದಾಳಿ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇಂದು ನಮ್ಮ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ಮಾಡಿದ್ದು, ನಮ್ಮ ಜಮೀನು, ವ್ಯವಹಾರದ ಸಂಬಂಧ ತನಿಖೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ತನಿಖಾ ಸಂಸ್ಥೆಗಳಿಂದ ನಿರಂತರ ಕಿರುಕುಳ ನೀಡುತ್ತಿದೆ. ಎಲ್ಲಾ ತನಿಖಾ ಸಂಸ್ಥೆಗಳು ದೂರು ದಾಖಲಿಸಿ ತನಿಖೆ ನಡೆಸುತ್ತಿವೆ. ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ಭಯಪಡುವುದಿಲ್ಲ. ಸಿಬಿಐ ಅಧಿಕಾರಿಗಳು ನನ್ನ ಸಂಬಂಧಿಕರು, ವ್ಯವಹಾರಿಕ ಪಾಲುದಾರರಿಗೂ ನೋಟಿಸ್ ನೀಡಿ ಮಾಹಿತಿ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ವಿರೋಧಿಗಳನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ನವರಿಗೆ ತೊಂದರೆ ಕೊಡುವುದೇ ಮುಖ್ಯ ಉದ್ದೇಶವಾಗಿದೆ. ಐಟಿ, ಇಡಿ, ಸಿಬಿಐ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾರೆ. ನ್ಯಾಯಾಲಯ, ದೇವರ ಮೇಲೆ ಭಾರ ಹಾಕಿ ಮುನ್ನಡೆಯುತ್ತೇವೆ. ನಾನು ಯಾವುದೇ ತಪ್ಪು ಮಾಡದಿರುವುದರಿಂದ ಧೈರ್ಯವಾಗಿದ್ದೇನೆ ಎಂದರು.
ಬಿಜೆಪಿಯವರಿಗೆ ತನಿಖಾ ಸಂಸ್ಥೆಗಳು ಇಲ್ವಾ?
ಆಪರೇಷನ್ ಕಮಲದ ವೇಳೆ ಹಣದ ವ್ಯವಹಾರ ನಡೆದಿದೆ. ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಬೈಎಲೆಕ್ಷನ್ ವೇಳೆ ಹೆಚ್.ವಿಶ್ವನಾಥ್ಗೆ ಹಣ ನೀಡಿದ್ದಾಗಿ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ರು. ಗವರ್ನರ್ ಮಾಡಬೇಕಾದರೆ 5-6 ಕೋಟಿ ಕೊಡಬೇಕೆಂದು ಹೇಳಿಕೆ ನೀಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಕೂಡ ಹಣ ನೀಡಬೇಕೆಂದು ಹೇಳಿದ್ದಾರೆ. ಇವರಿಗೆ ತನಿಖಾ ಸಂಸ್ಥೆಗಳು ಯಾವುದೇ ನೋಟಿಸ್ ನೀಡಿಲ್ಲ. ಕೋಟಿ ಕೋಟಿ ಹಣ ನೀಡಿದ ಬಗ್ಗೆ ಹೇಳಿಕೆ ನೀಡಿದ್ದರೂ ಕೇಳಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ನವರನ್ನು ಹಣಿಯಲು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಮೊಬೈಲ್ ಗಿಫ್ಟ್ ನೀಡಿದ್ದಕ್ಕೆ ನೋಟಿಸ್ ನೀಡಿದ್ದರು ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಆರೋಪಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:12 pm, Mon, 19 December 22