ಬೆಂಗಳೂರು: ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು; ಬಂಧನ

| Updated By: ವಿವೇಕ ಬಿರಾದಾರ

Updated on: Aug 12, 2023 | 7:27 AM

ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು; ಬಂಧನ
ಪುನೀತ್ ಕೆರೆಹಳ್ಳಿ
Follow us on

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆಯಡಿ (Goond Act) ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಬಿ ಪೊಲೀಸರು (CCB Police) ಆತನನ್ನು ಬಂಧಿಸಿದ್ದಾರೆ. ಪುನೀತ್ ಕೆರೆಹಳ್ಳಿ 2013 ರಿಂದ 2023 ರವರಗೆ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಸಮಾಜದಲ್ಲಿ ಶಾಂತಿ‌ ಕದಡುವ ಯತ್ನ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪದೇ ಪದೇ ಭಾಗಿಯಾದ ಹಿನ್ನೆಲೆಯಲ್ಲಿ ಮೇಲೆ ಮೇಲಿಂದ‌ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪುನೀತ್ ಕೆರೆಹಳ್ಳಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪುನೀತ್ ಕೆರೆಹಳ್ಳಿ ವಿರುದ್ಧ ಡಿಜೆ ಹಳ್ಳಿ, ಬೇಗೂರು, ಕಗ್ಗಲಿಪುರ, ಹಲಸೂರು ಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಮಳವಳ್ಳಿ ಮತ್ತು ಸಾತನೂರು ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಜಾಮೀನಿನ ಮೇಲೆ ಹೊರಗೆ ಬಂದಿದ್ದ ಪುನೀತ್ ಕೆರೆಹಳ್ಳಿ

ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಗೋ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸಾಯಿಸಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆಯಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

ಏನಿದು ಗೂಂಡಾ ಕಾಯ್ದೆ?

1985ರಲ್ಲಿ ಆಗಿನ ಜನತಾ ಪಕ್ಷದ ಸರ್ಕಾರ ಗೂಂಡಾ ಚಟುವಟಿಕೆ ನಿಯಂತ್ರಿಸಲು ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಜೂಜುಕೋರರು, ಕಳ್ಳ ಬಟ್ಟಿ ವ್ಯಾಪಾರಿಗಳು, ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟಗಾರರ ವಿರುದ್ಧ ಈ ಕಾಯ್ದೆಯ ಮೂಲಕ ಕ್ರಮಕೈಗೊಳ್ಳಬಹುದಾಗಿತ್ತು. ಈ ಕಾಯ್ದೆಯಡಿ ಬಂಧಿಸಲಾದ ವ್ಯಕ್ತಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯವಿರುವುದಿಲ್ಲ. ಅಲ್ಲದೇ ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೆ ನೇರವಾಗಿ ಜೈಲಿಗೆ ಕಳುಹಿಸಬಹುದು. ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿತನಾದಲ್ಲಿ ಅಪರಾಧಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ.

ಗೂಂಡಾ ತಡೆ ಕಾಯ್ದೆಯನ್ನು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಪೊಲೀಸ್‌ ಆಯುಕ್ತರಿಗೆ ಮ್ಯಾಜಿಸ್ಟೀರಿಯಲ್‌ ಅಧಿಕಾರವಿರುತ್ತದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಥವಾ ಪೊಲೀಸ್‌ ಆಯುಕ್ತರಿಗೆ ಈ ಅಧಿಕಾರವಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಕೆಳಹಂತದ ಪೊಲೀಸ್‌ ಅಧಿಕಾರಿಗಳು ನೀಡುವ ವರದಿಯನ್ನು ಪರಿಶೀಲಿಸಿ ಪೊಲೀಸ್‌ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಕಾಯ್ದೆಯನ್ನು ಜಾರಿಗೊಳಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

 

Published On - 7:16 am, Sat, 12 August 23