ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ರಾಜ್ಯದಲ್ಲಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದಾರೆ.ಆರೋಪಿ ಕೇಂದ್ರ ಸರ್ಕಾರಿ ನೌಕರನೆಂದು ಹೇಳಿಕೊಂಡು ವಂಚಿಸುತ್ತಿದ್ದ. ಹಲವರಿಗೆ ವಂಚಿಸಿ ಕೋಟ್ಯಂತರ ಹಣ ಮಾಡಿದ್ದಾನೆ. ಸ್ವಂತ ಊರಿನಲ್ಲಿ ಒಂದು ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಫ್ಲ್ಯಾಟ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹೊಂದಿದ್ದಾನೆ. ಓಡಾಡುವುದಕ್ಕೆ 2 ಕಾರು ಕೂಡಾ ಖರೀದಿ ಮಾಡಿದ್ದಾನೆ.
ಬಂಧಿತ ರಾಘವೇಂದ್ರನ ಬಳಿಯಿದ್ದ ಫೋನ್, ಲ್ಯಾಪ್ಟ್ಯಾಪ್, ಟ್ಯಾಬ್, ಚೆಕ್ಗಳು, ಬಾಂಡ್ ಪೇಪರ್, ಆಸ್ತಿ ಪತ್ರಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ರಾಘವೇಂದ್ರ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಯಶವಂತಪುರ, ಬನವಾಸಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ರಾಘವೇಂದ್ರ ವಿರುದ್ಧ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಈತ ಕೆಲಸ ಕೊಡಿಸುವುದಾಗಿ ಬಾಂಡ್ ಪೇಪರ್, ಚೆಕ್ ಪಡೆಯುತ್ತಿದ್ದ. ಖಾಲಿ ಚೆಕ್ಗಳ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ. ವಂಚನೆಗೊಳಗಾದವರು ಹಣ ವಾಪಸ್ ಕೇಳಿದರೆ ಧಮ್ಕಿ ಹಾಕುತ್ತಿದ್ದ. ಸಹಿ ಹಾಕಿದ್ದ ಬಾಂಡ್ ಪೇಪರ್ ತೋರಿಸಿ ಬೆದರಿಕೆ ಹಾಕುತ್ತಿದ್ದ. ಹಣ ನೀಡಿದ್ದವರ ವಿರುದ್ಧ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಕುಂದಾಪುರದಲ್ಲಿ ಖಾಸಗಿಯಾಗಿ ಸರ್ವೆ ಕೆಲಸ ಮಾಡುತ್ತಿದ್ದ. ಆ ಬಳಿಕ ಹೆಚ್ಚಿನ ಹಣಕ್ಕಾಗಿ ವಂಚನೆಗೆ ಇಳಿದಿದ್ದ.
ವಂಚಕ ರಾಘವೇಂದ್ರ ಬೆಂಗಳೂರು, ಉಡುಪಿ ಜಿಲ್ಲೆ ಕುಂದಾಪುರ, ಬಾಗಲಕೋಟೆ, ಹಾವೇರಿಯಲ್ಲಿ ತಲಾ ಒಂದೊಂದು ಮದುವೆಯಾಗಿದ್ದಾನೆ. ಒಟ್ಟು ನಾಲ್ಕು ಮದುವೆಯಾಗಿರುವ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯುವಕರ ಮೇಲೆ ಹಲ್ಲೆ
ಕ್ಷುಲ್ಲಕ ಕಾರಣಕ್ಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ರಸ್ತೆಯಲ್ಲೇ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನೆ ತರಿಕೇರಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಗಲಾಟೆ ನಡೆದಿದೆ. ಮೂವರು ಯುವಕರ ಮೇಲೆ 15 ಜನರ ಗುಂಪು ಹಲ್ಲೆ ನಡೆಸಿದೆ. ಆಕಾಶ್, ಗೋಪಾಲ್, ರವಿ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಬೈಕ್ನಲ್ಲಿ ತೆರಳುವಾಗ ಆಕಾಶ್ ಜತೆ ನಿತಿನ್ ಶೆಟ್ಟಿ ಕಿರಿಕ್ ಮಾಡಿಕೊಂಡಿದ್ದ. ಮೊನ್ನೆ ನಿತಿನ್ ಶೆಟ್ಟಿಗೆ ಆಕಾಶ್ ತರಾಟೆಗೆ ತೆಗೆದುಕೊಂಡಿದ್ದ.
ಸಿಟ್ಟಿಗೆದ್ದು ಗುಂಪು ಕಟ್ಟಿಕೊಂಡು ಬಂದು ನಿತಿನ್ ಹಲ್ಲೆ ನಡೆಸಿದ್ದಾನೆ. ನಿತಿನ್ ಮತ್ತು ಆತನ ತಂಡ ಎಟಿಎಂ ಒಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸಮನೆ ಠಾಣೆಯಲ್ಲಿ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನೈಜೀರಿಯನ್ ಪ್ರಜೆ ಬಂಧನ
ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆ ಬಂಧನಕ್ಕೊಳಗಾಗಿದ್ದಾನೆ. ಆರೋಪಿ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಡ್ರಗ್ಸ್ ಮಾರುತ್ತಿದ್ದ. ಸದ್ಯ ಬೆಂಗಳೂರಿನ ಮಡಿವಾಳ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಬಂಧಿತನಿಂದ 5 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
ಕಾಡುಹಂದಿ ಊರೊಳಗೆ ಬಂದು ಕಾರು ಶೋರೂಮ್ ಸಿಬ್ಬಂದಿ ಮೇಲೆ ಅಟ್ಟಾಡಿಸಿ ಹಲ್ಲೆ ಮಾಡಿದ್ದು ಮಂಗಳೂರಿನಲ್ಲಿ ಮಾರಾಯ್ರೇ!
ಸೋನಾಕ್ಷಿ ಸಿನ್ಹಾಗೆ ಕೈಕೊಡುತ್ತಲೇ ಇದೆ ಅದೃಷ್ಟ; ಸಿನಿಮಾವನ್ನೇ ಅರ್ಧಕ್ಕೆ ಕೈಬಿಟ್ಟ ನೆಟ್ಫ್ಲಿಕ್ಸ್
Published On - 4:35 pm, Sat, 27 November 21