ಠೇವಣಿದಾರರಿಗೆ ಹಣ ಮರಳಿಸದೆ ವಂಚನೆ, ಶುಶೃತಿ ಸಹಕಾರ ಬ್ಯಾಂಕ್​ ಮೇಲೆ ಪೊಲೀಸರ ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 12, 2022 | 2:30 PM

ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಬ್ಯಾಂಕ್​ನಲ್ಲಿ ಠೇವಣಿದಾರರಿಗೆ ಈವರೆಗೆ ಹಣ ಹಿಂದಿರುಗಿಸಿಲ್ಲ.

ಠೇವಣಿದಾರರಿಗೆ ಹಣ ಮರಳಿಸದೆ ವಂಚನೆ, ಶುಶೃತಿ ಸಹಕಾರ ಬ್ಯಾಂಕ್​ ಮೇಲೆ ಪೊಲೀಸರ ದಾಳಿ
ಬೆಂಗಳೂರಿನ ಶುಶೃತಿ ಬ್ಯಾಂಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಠೇವಣಿದಾರರಿಗೆ ಹಣ ಮರಳಿಸದೆ ವಂಚಿಸಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಶುಶೃತಿ ಸಹಕಾರ ಬ್ಯಾಂಕ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಸಿಬಿ ಅಧಿಕಾರಿಗಳ ದಾಳಿಯ ವೇಳೆ ₹ 20 ಲಕ್ಷ ನಗದು ಹಾಗೂ ₹ 30 ಲಕ್ಷ ಎಫ್​ಡಿ ಇರಿಸಿರುವ ದಾಖಲೆಗಳು ಪತ್ತೆಯಾಗಿತ್ತು. ಆರೋಪಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಬೆಂಗಳೂರಿನ 14 ಕಡೆ ಸಿಸಿಬಿ ಆರ್ಥಿಕ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಬ್ಯಾಂಕ್​ನಲ್ಲಿ ಠೇವಣಿದಾರರಿಗೆ ಈವರೆಗೆ ಹಣ ಹಿಂದಿರುಗಿಸಿಲ್ಲ. ವರ್ಷಕ್ಕೆ ಶೇ 8ರಿಂದ 10ರವರೆಗೆ ಬಡ್ಡಿ ನೀಡುವುದಾಗಿ ನಂಬಿಸಿದ್ದ ಬ್ಯಾಂಕ್ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿತ್ತು. 1998ರಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸಿಸುತ್ತಿತ್ತು. ಸಾಲದ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ನೀಡಲಾಗಿದೆ. ಆದರೆ ಈ ವೇಳೆ ಖಾತ್ರಿಯೂ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಯಾಗಿದೆ. ಸಾಲ ಪಡೆದಿರುವವರನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಮುಂದಾಗಿದೆ.

ಬೆಂಗಳೂರಿನ 14 ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಐವರು ಎಸಿಪಿ ಸೇರಿ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ ಸೇರಿದಂತೆ ಹಲವೆಡೆ ಸಿಸಿಬಿ ತಂಡವು ದಾಳಿ ನಡೆಸಿತು.

ಠೇವಣಿದಾರರಿಗೆ ಹಣ ಹಿಂದಿರುಗಿಸದ ಬಗ್ಗೆ ಸಹಕಾರ ಬ್ಯಾಂಕ್ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣಗಳನ್ನು ನಂತರದ ದಿನಗಳಲ್ಲಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರಿನ ವಿಲ್ಸನ್ ಗಾರ್ಡನ್, ನೆಲಮಂಗಲ, ವಿಜಯ ನಗರ. ಬಸವೇಶ್ವರ ನಗರ, ಆನೇಕಲ್, ಚಿಕ್ಕಜಾಲ, ರಾಜಗೋಪಾಲ್ ನಗರ ಸೇರಿದಂತೆ ಒಟ್ಟು ಹದಿನಾಲ್ಕು ಶಾಖೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

ಐವರ ಬಂಧನ

ಶುಶೃತಿ ಸಹಕಾರ ಬ್ಯಾಂಕ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ವೇಳೆ ₹ 39 ಲಕ್ಷ ನಗದು, 50ಕ್ಕೂ ಹೆಚ್ಚು ದಾಖಲೆ ಪತ್ರ, 5 ಕೆಜಿಗೂ ಹೆಚ್ಚು ಬೆಳ್ಳಿ ಹಾಗೂ ₹ 30 ಲಕ್ಷ ಠೇವಣಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ.

Published On - 12:02 pm, Wed, 12 October 22