AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಮುಂದುವರಿದ ಮಳೆ ಅವಾಂತರ; ಉಕ್ಕಿ ಹರಿಯುತ್ತಿರುವ ಹಳ್ಳಗಳು, ಜನಜೀವನ ಅಸ್ತವ್ಯಸ್ತ

ಕೆಲ ಗದ್ದೆಗಳಲ್ಲಿ ಬೆಳೆ ಸಂಪೂರ್ಣವಾಗಿ ಮಲಗಿದ್ದು, ಹಾಸಿಗೆ ಹಾಸಿದಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

Karnataka Rain: ಮುಂದುವರಿದ ಮಳೆ ಅವಾಂತರ; ಉಕ್ಕಿ ಹರಿಯುತ್ತಿರುವ ಹಳ್ಳಗಳು, ಜನಜೀವನ ಅಸ್ತವ್ಯಸ್ತ
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ಕೆರೆ ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.
TV9 Web
| Edited By: |

Updated on:Oct 12, 2022 | 9:46 AM

Share

ಬೆಂಗಳೂರು: ಧಾರವಾಡ, ರಾಮನಗರ, ಯಾದಗಿರಿ, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಹಳ್ಳಗಳು ಉಕ್ಕಿಹರಿಯುತ್ತಿದ್ದು, ಜನಜೀವನ ಅಸ್ತವ್ಯವಸ್ತಗೊಂಡಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಗ್ರಾಮದ ರಸ್ತೆ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಾದ್ಯಂತೆ ನಿನ್ನೆ (ಅ 11) ರಾತ್ರಿ ಭಾರಿ ಪ್ರಮಾಣದಲ್ಲಿ ಗಾಳಿಯೊಂದಿಗೆ ಮಳೆ ಬೀಸಿತು. ಗಾಳಿ ಮತ್ತು ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆನೆಕಟ್ಟುವ ಹಂತದಲ್ಲಿದ್ದ ಭತ್ತದ ಬೆಳೆ ನೆಲಕಚ್ಚಿದೆ.

ಕೆಲ ಗದ್ದೆಗಳಲ್ಲಿ ಬೆಳೆ ಸಂಪೂರ್ಣವಾಗಿ ಮಲಗಿದ್ದು, ಹಾಸಿಗೆ ಹಾಸಿದಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದೆ. ಇನ್ನು 20 ದಿನಗಳು ಕಳೆದರೆ ಭತ್ತ ಕಟಾವ್ ಆಗುತ್ತಿತ್ತು‌ ಎಂದು ರೈತರು ಪರಿತಪಿಸುತ್ತಿದ್ದಾರೆ.

ಬೆಣ್ಣೆಹಳ್ಳ ಅವಾಂತರ

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಬೆಣ್ಣೆಹಳ್ಳ ಉಕ್ಕಿ ಹರಿದಿದ್ದು, ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಫಲವತ್ತಾದ ಮೇಲ್ಮಣ್ಣು ನೀರಿನಲ್ಲಿ ಕೊಚ್ಚಿಹೋಗಿದೆ. ಬೆಣ್ಣೆಹಳ್ಳವು ಉಕ್ಕಿ ಹರಿಯುವ ಸಂದರ್ಭದಲ್ಲಿ ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತದೆ. ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ್ದು, ಹತ್ತಿ ಹೊಲಗಳಲ್ಲಿ ಇರುವ ಬೆಳೆ ನಾಶವಾಗುವ ಭೀತಿ ಎದುರಾಗಿದೆ.

ಬಂಗಾರಪೇಟೆ: ಮಲ್ಲಂಗೂರ್ಕಿ ಅಮಾನಿಕರೆಯಲ್ಲಿ ರಂಧ್ರ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮಲ್ಲಂಗೂರ್ಕಿ ಅಮಾನಿ ಕೆರೆಯಿಂದ ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಗ್ರಾಮಸ್ಥರಲ್ಲಿ ಆತಂಕ ಕಾಣಿಸಿಕೊಂಡಿದೆ. ಕೆರೆಯ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ಅಕ್ಕಪಕ್ಕದ ಮೂರ್ನಾಲ್ಕು ಗ್ರಾಮಗಳ ರೈತರ ಬೆಳೆ ಮುಳುಗುವ ಆತಂಕ ವ್ಯಕ್ತವಾಗಿದೆ. ಕೆರೆ ಕಟ್ಟೆಯ ನಿರ್ವಹಣೆಯನ್ನು ಬಹುಕಾಲದಿಂದ ನಿರ್ಲಕ್ಷಿಸಿದ್ದ ಪರಿಣಾಮ ಗಿಡಗಂಟಿಗಳು ಬೆಳೆದು ನಿಂತಿವೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾಳಜಿ ಕೇಂದ್ರ ತೆರೆಯಲು ಆಗ್ರಹ

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ಕೆರೆ ತುಂಬಿ ಗ್ರಾಮದ ಜನತಾ ಕಾಲೋನಿ ಮನೆಗಳು ಜಲಾವೃತಗೊಂಡಿವೆ. ಗ್ರಾಮದಲ್ಲಿ ಶೀಘ್ರ ಕಾಳಜಿ ಕೇಂದ್ರ ತೆರೆಯಬೇಕೆಂದು ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಕೆರೆಯ ನೀರು ಬಿಳಿಚೋಡು ಕೆರೆಗೆ ಹರಿದುಬರುತ್ತಿದೆ. ಕ್ಷಣಕ್ಷಣಕ್ಕೂ ನೀರು ಹೆಚ್ಚಾಗುತ್ತಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಾಯಕ್ಕೆ ಬರಬೇಕು ಎಂದು ಜನರು ಕೋರಿದ್ದಾರೆ.

ಮಳೆಯಿಂದಾಗಿ ಕೆರೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ದಾವಣಗೆರೆ ತಾಲ್ಲೂಕಿನ ಅನಗೋಡ ಹಾಗೂ ಅಣಜಿ ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹರಿಯುವ ನೀರಿನಲ್ಲಿ ವಾಹನ ದಾಟಿಸಲು ಕೆಲವರು ಹುಚ್ಚು ಸಾಹಸ ಮಾಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಗ್ರಾಮಗಳ‌ ನಡುವೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸುಮಾರು 40 ಕಿಮೀ ಸುತ್ತಿಕೊಂಡು ಮನೆಗಳಿಗೆ ತಲುಪಬೇಕಿದೆ. ಹೆಬ್ಬಾಳ, ಅನಗೋಡ ಸೇರಿದಂತೆ ಹಲವು ಕೆರೆಗಳು ಭರ್ತಿಯಾಗಿವೆ.

ರಾಮನಗರದಲ್ಲಿ ಜಿಟಿಜಿಟಿ ಮಳೆ

ರಾಮನಗರದಲ್ಲಿ ‌ಬೆಳ್ಳಂಬೆಳಿಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ಇತ್ತೀಚಿಗೆ ಕೆಲ ದಿನಗಳಿಂದ ಮಳೆ ಬಿಡುವು ಕೊಟ್ಟಿತ್ತು. ಆದರೆ ಮತ್ತೆ ಮಳೆ ಆರಂಭವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಳೆ.

ಹುಣಸೂರು: ಮುಂದುವರಿದ ಮಳೆ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಮಳೆ ಮುಂದುವರಿದಿದೆ. ಹುಣಸೂರಿನ ಮಂಜುನಾಥ ಬಡಾವಣೆ, ಸಾಕೇತ ಬಡಾವಣೆ, ಶಬ್ಬೀರ್ ನಗರ ಬನ್ನಿ ಬೀದಿಯಲ್ಲಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಜನರು ಕಷ್ಟಪಟ್ಟು ಮಳೆ ನೀರು ಹೊರ ಹಾಕಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಿರುವ ಜನರು, ದೂರು ನೀಡಿದರೂ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಲಬುರಗಿ: ಮತ್ತೆ ಮಳೆ, ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಜನ

ಕಲಬುರಗಿ ಜಿಲ್ಲೆಯ ಹಲವಡೆ ಮತ್ತೆ ಮಳೆ ಆರಂಭವಾಗಿದ್ದು, ಜನರು ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರುಣದೇವ ಬಿಡುವು ನೀಡಿದ್ದ. ಇಂದು ಮತ್ತೆ ಮಳೆ ಆರಂಭವಾಗಿರುವುದರಿಂದ ಜನರು ಕಂಗಾಲಾಗಿದ್ದಾರೆ. ತೊಗರಿ, ಕಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ಕಳೆದುಕೊಳ್ಳುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ.

Published On - 9:45 am, Wed, 12 October 22