ಒತ್ತುವರಿ ತೆರವು ನಿಲ್ಲಿಸದಿದ್ದರೆ ಆತ್ಮಹತ್ಯೆ: ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬಿಬಿಎಂಪಿಗೆ ಬೆದರಿಕೆ ಹಾಕಿದ್ದ ದಂಪತಿಯ ರಕ್ಷಣೆ
ಈ ದಂಪತಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡದಿಂದ 2 ಮೀಟರ್ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ.

ಬೆಂಗಳೂರು: ನಗರದ ವಿವಿಧೆಡೆ ರಾಜಕಾಲುವೆ ಒತ್ತುವರಿ ತೆರವು (Rajakaluve Encroachment Clearence) ಕಾರ್ಯ ಚುರುಕಾಗಿ ನಡೆಯುತ್ತಿದೆ. ತೆರವು ಕಾರ್ಯಾಚರಣೆ ವಿರೋಧಿಸಿ ಕೆ.ಆರ್.ಪುರಂನ ಗಾಯತ್ರಿ ಲೇಔಟ್ನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದ ದಂಪತಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು. ಈ ದಂಪತಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡದಿಂದ 2 ಮೀಟರ್ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿ ಆಗಿದೆ ಎಂದು ಗುರುತಿಸಿರುವ ಸ್ಥಳದಲ್ಲಿಯೇ ಕಟ್ಟಡದ ಕಂಬವೂ ಇರುವ ಕಾರಣ, ಒತ್ತುವರಿ ತೆರವು ವೇಳೆ ಇಡೀ ಕಟ್ಟಡ ಉರುಳುವ ಭೀತಿ ಎದುರಾಗಿತ್ತು.
15 ವರ್ಷಗಳ ಹಿಂದೆ ನಾವು ₹ 40 ಲಕ್ಷ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ ಎಂದು ಹೇಳಿರುವ ಸೋನಾ, ಸುನಿಲ್ ಸಿಂಗ್ ದಂಪತಿ ಅಳುತ್ತಿದ್ದಾರೆ. ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡು ಕಂಗಾಲಾಗಿದ್ದೆವು. ಈಗ ಪರಿಸ್ಥಿತಿ ಒಂದು ಹಂತಕ್ಕೆ ಬರುತ್ತಿದೆ. ಮನೆ ಕಳೆದುಕೊಂಡರೆ ಬದುಕುವುದು ಹೇಗೆ? ಮನೆ ಕೆಡವಲು ಬಿಡುವುದಿಲ್ಲ ಎಂದು ಪೆಟ್ರೋಲ್ ಕ್ಯಾನ್ ಹಿಡಿದು ಆತ್ಮಹತ್ಯೆಗೆ ದಂಪತಿ ಯತ್ನಿಸಿದರು.
ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ಸ್ಥಳದಿಂದ ಹೊರಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರ ಎದುರೇ ದಂಪತಿ ಬೆಂಕಿಕಡ್ಡಿ ಗೀರಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಕೈಹಿಡಿದು ತಡೆದರು. ‘ಈ ಮನೆ ಸದ್ಯಕ್ಕೆ ಬಿಟ್ಟು, ಬೇರೆ ಮನೆ ಡಿಮಾಲಿಷನ್’ ಮಾಡಿ ಎಂದು ಪೊಲೀಸರು ಬಿಬಿಎಂಪಿಗೆ ಸೂಚಿಸಿದಾಗ ಅದಕ್ಕೂ ದಂಪತಿ ವಿರೋಧ ವ್ಯಕ್ತಪಡಿಸಿದರು. ‘ಯಾರ ಮನೆಯನ್ನೂ ಕೆಡವುವಂತಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಇಲ್ಲಿಂದ ವಾಪಸ್ ಹೋಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಅಹವಾಲು ಆಲಿಸಬೇಕು. ನಾವು ಒಂದೊಮ್ಮೆ ಬೆಂಕಿ ಹಚ್ಚಿಕೊಂಡರೆ ಅದಕ್ಕೆ ಪೊಲೀಸರೇ ಕಾರಣ’ ಎಂದು ದಂಪತಿ ಆಕ್ರೋಶ ವ್ಯಕ್ತಪಡಿಸಿದರು.
ದಂಪತಿ ರಕ್ಷಣೆ: ತೆರವು ಕಾರ್ಯಾಚರಣೆ ಆರಂಭ
ರಾಜಕಾಲುವೆ ತೆರವು ವಿರೋಧಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ದಂಪತಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದರು. ತಮ್ಮ ಕಟ್ಟಡವನ್ನು ಉಳಿಸಿಕೊಡಬೇಕು ಎಂದು ದಂಪತಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕಾಂಪೌಂಡ್ ಕಟ್ಟಡದ ಹಿಂಭಾಗದಿಂದ ಏಕಾಏಕಿ ಇಬ್ಬರನ್ನೂ ಪೊಲೀಸರು ಹಠಾತ್ ಮೇಲೆತ್ತಿದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಅದೇ ಸಂದರ್ಭದಲ್ಲಿ ಜೋರಾಗಿ ನೀರು ಹರಿಸಿ ಬೆಂಕಿಹೊತ್ತುವ ಅಪಾಯವನ್ನು ದೂರ ಮಾಡಿದ್ದರು. ನಂತರ, ಈ ದಂಪತಿಯ ಕಟ್ಟಡವೂ ಸೇರಿದಂತೆ ವಿವಿಧೆಡೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಿತು.
ಒತ್ತುವರಿ ತೆರವು ಮುಂದುವರಿಸುತ್ತೇವೆ: ಭೈರತಿ ಬಸವರಾಜ್
ಕೆ.ಆರ್.ಪುರಂನ ಗಾಯತ್ರಿ ಲೇಔಟ್ನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ. ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ನೀರಿನಲ್ಲಿ ಮುಳುಗುವ ಪರಿಸ್ಥಿತಿ ಇದೆ. ಹೀಗಾಗಿ ತೆರವು ಕಾರ್ಯವನ್ನು ಮುಂದುವರಿಸುವ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು. ಬೆಂಗಳೂರಿನ ದಂಪತಿಯ ಆತ್ಮಹತ್ಯೆ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೆ ಇರಲಿ ಎಷ್ಟೆ ದೊಡ್ಡವರೇ ಇರಲಿ ತೆರವು ಮುಂದುವರಿಸುತ್ತೇವೆ. ಪೊಲೀಸ್ ಅಧಿಕಾರಿಗೊಳೊಂದಿಗೆ ಮಾತಾಡಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಹೇಳುತ್ತೇನೆ ಎಂದರು.
ಅಡ್ಡಿಪಡಿಸುವುದು ಸರಿಯಲ್ಲ: ಬಿಬಿಎಂಪಿ
ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಲ್ಲಿ ಈ ಹಿಂದೆ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದರು. ಈ ಮನೆಯವರಿಗೆ ನಾವು ನೊಟೀಸ್ ಸಹ ಜಾರಿ ಮಾಡಿದ್ದೇವೆ. ಆದರೂ ಈಗ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಬಿಬಿಎಂಪಿ ಮಹಾದೇವಪುರ ವಲಯದ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ‘ಟಿವಿ9’ಗೆ ಪ್ರತಿಕ್ರಿಯಿಸಿದರು. ಇವರ ಮನೆ ಪೂರ್ತಿಯಾಗಿ ಹೋಗುವುದಿಲ್ಲ. ಒಟ್ಟು ಕಟ್ಟಡದಲ್ಲಿ ಕೇವಲ ಐದು ಅಡಿಯಷ್ಟು ಮಾತ್ರ ತೆರವು ಆಗುತ್ತದೆ ಎಂದು ಅವರು ಹೇಳಿದರು.
Published On - 11:25 am, Wed, 12 October 22




