RSS, BJP ನಾಯಕರಂತೆ ಮುಖವಾಡ ಧರಿಸಿ ಮೋಸ ಮಾಡಿದ ಚೈತ್ರಾ ಕುಂದಾಪುರ ಕೇಸ್​ ಹಿಸ್ಟರಿ

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವು ಹಲವು ರೋಚಕತೆಯಿಂದ ಕೂಡಿದ್ದು ಆರ್​ಎಸ್​ಎಸ್​, ಬಿಜೆಪಿ ಬಾಡಿಗೆ ನಾಯಕರನ್ನು ತಯಾರು ಮಾಡಿ ಅವರಿಂದ ಗೋವಿಂದಬಾಬು ಅವರನ್ನು ವಂಚಿಸಿದ ಕೇಸ್​ ಹಿಸ್ಟರಿ ಇಲ್ಲಿದೆ.

RSS, BJP ನಾಯಕರಂತೆ ಮುಖವಾಡ ಧರಿಸಿ ಮೋಸ ಮಾಡಿದ ಚೈತ್ರಾ ಕುಂದಾಪುರ ಕೇಸ್​ ಹಿಸ್ಟರಿ
ಚೈತ್ರಾ ಕುಂದಾಪುರ ವಂಚನೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 13, 2023 | 2:28 PM

ಬೆಂಗಳೂರು ಸೆ.13: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapur) ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು (Bainduru) ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೊಡಿಸುವುದಾಗಿ ಹೇಳಿ ಬಹು ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯ ಸಿಸಿಬಿ (CCB) ಪೊಲೀಸರು ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಶ್ರೀಕಾಂತ ನಾಯ್ಕ್​​​​ ಎಂಬುವರನ್ನು ಬಂಧಿಸಿ ಬೆಂಗಳೂರಿಗೆ (Bengaluru) ಕರೆತರುತ್ತಿದ್ದಾರೆ. ಇನ್ನು ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ವಶಕ್ಕೆ ಪಡೆಯುತ್ತಿರುವ ವೇಳೆ ಚೈತ್ರ ಕುಂದಾಪುರ ಕೈ ಬಳೆ ಒಡೆದುಕೊಂಡು ಬಳಿಕ ಉಂಗುರ ನುಂಗಲು ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಗೋವಿಂದಬಾಬು ಪೂಜಾರಿ ವಂಚನೆಗೆ ಒಳಗಾಗಿದ್ದು ಹೇಗೆ?

ಉಡುಪಿ ಜಿಲ್ಲೆಯ ಬೈಂದೂರ ತಾಲೂಕಿನ ಬಿಜೂರು ಗ್ರಾಮದವರಾದ ಗೋವಿಂದಬಾಬು ಪೂಜಾರಿ ಅವರು 9 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾರ್ಯಕರ್ತರಾಗಿದ್ದರು. ನಂತರ ಕಳೆದ 6 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವಾಗ ಬೈಂದೂರ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದರು.

ಹೀಗಿರುವಾಗಲೇ ಇವರಿಗೆ ಚೈತ್ರಾ ಕುಂದಾಪುರ ಮತ್ತು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಅವರ ಪರಿಚಯವಾಗಿತ್ತು. ಇವರು ಟಿಕೆಟ್​ ಕೊಡಿಸುವುದಾಗಿ ಗೋವಿಂದಬಾಬು ಅವರಿಗೆ ಹೇಳಿದ್ದರು. ಬಳಿಕ ಗಗನ್​ ಕಡೂರ್​, ಗೋವಿಂದಬಾಬು ಅವರಿಗೆ, ವಿಶ್ವನಾಥ್ ಜೀ ಎಂಬುವರನ್ನು ಪರಿಚಯಿಸಿದ್ದನು. ವಿಶ್ವನಾಥ್​ ಜೀ ಅವರು ಕಳೆದ 45 ವರ್ಷಗಳಿಂದ ಆರ್​ಎಸ್​ಎಸ್​ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಕೇಂದ್ರದ ಅಭ್ಯರ್ಥಿಯ ಸೆಲೆಕ್ಷನ್ ಕಮಿಟಿಯಲ್ಲಿ ಅವರು ಒಬ್ಬರಾಗಿದ್ದಾರೆ ಎಂದು ಗಗನ್​ ಕಡೂರು ಹೇಳಿದ್ದನು.

2022 ರ ಜುಲೈ 7 ರಂದು ಗೋವಿಂದಬಾಬು ಪೂಜಾರಿಯನ್ನು ಚೈತ್ರಾ ಕುಂದಾಪುರ ಬೆಂಗಳೂರಿನ ಸರ್ಕಾರಿ ಅತಿಥಿ ಗೃಹಕ್ಕೆ ಕರೆಸಿಕೊಂಡು ವಿಶ್ವನಾಥ್​ ಜೀ ಅವರನ್ನು ಭೇಟಿ ಮಾಡಿಸಿದ್ದರು. ಈ ವೇಳೆ ವಿಶ್ವನಾಥ್​ ಜಿ “ನಾನು ಹೇಳಿದರೇ ಮಾತ್ರ ಟಿಕೆಟ್​ ಅಂತಿಮವಾಗುತ್ತದೆ. ಇದಕ್ಕೆ ಸಾಕಷ್ಟು ಹಣ ನೀಡಿಬೇಕು” ಎಂದು ಗೋವಿಂದಬಾಬು ಅವರಿಗೆ ಹೇಳಿದ್ದರು. ಅಲ್ಲದೇ “ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ 50 ಲಕ್ಷ ರೂ. ಗಗನ್ ಕಡೂರ್​ಗೆ ನೀವು ನೀಡಬೇಕು. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ 3 ಕೋಟಿ ರೂ. ನೀಡಬೇಕು”. ಎಂದು ವಿಶ್ವನಾಥ್​ ಜೀ, ಗೋವಿಂದಬಾಬುಗೆ ಹೇಳಿದ್ದರು.

ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸುವುದಾಗಿಯೂ  ವಿಶ್ವನಾಥ್ ಜೀ ಭರವಸೆ ನೀಡಿದ್ದರು. ಇದಕ್ಕೆ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು  “ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ” ಎಂದು ಭರವಸೆ ನೀಡಿದ್ದರು. ಅದರಂತೆ ಗೋವಿಂದಬಾಬು ಪೂಜಾರಿ ಅವರು 2022 ಜುಲೈ 7 ರಂದು ಶಿವಮೊಗ್ಗದ ಆರ್​ಎಸ್​ಎಸ್​ ಕಚೇರಿ ಎದುರು 50 ಲಕ್ಷ ರೂ. ಹಣವನ್ನು ಪ್ರಸಾದ್‌ ಬೈಂದೂರು‌ ಮುಖಾಂತರ ಗಗನ್ ಕಡೂರ್​ಗೆ ನೀಡಿದ್ದರು.

ವಿಶ್ವನಾಥ್ ಜಿ, ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಕಾನ್ಫರೆನ್ಸ್​ ಕರೆ ಮಾಡಿ “ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ. 2023ರ ಚುನಾವಣೆಯಲ್ಲಿ, ಬೈಂದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು” ಗೋವಿಂದಬಾಬು ಅವರಿಗೆ ಹೇಳಿದ್ದರು. 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಮತ್ತೆ ಗೋವಿಂದಬಾಬು ಪೂಜಾರಿ ಅವರಿಗೆ ಕಾನ್ಫರೆನ್ಸ್​ ಕರೆ ಮಾಡಿ “ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿದೆ, ಹಾಗಾಗಿ ಅವರನ್ನು ಭೇಟಿಯಾಗಿ” ಎಂದು ಹೇಳಿದ್ದರು.

ಅದರಂತೆ ಗೋವಿಂಬಾಬು ಪೂಜಾರಿ ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಭೇಟಿಯಾಗಿದ್ದರು. ಅಲ್ಲಿ ಸ್ವಾಮಿಜಿ “ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಮುಂದಿನ ಪ್ರಕ್ರಿಯೆಗೆ ರೂ.1.5 ಕೋಟಿ ರೂ. ನೀಡುವಂತೆ” ಹೇಳಿದ್ದರು. ಅದರಂತೆ ಗೋವಿಂದಬಾಬು 2022ರ ಜನವರಿ 16 ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಹಣ ನೀಡಿದ್ದರು. ಇದಕ್ಕೂ ಮುಂಚೆ 2022ರ ಡಿಸೆಂಬರ್​ 23ರಂದು ವಿಶ್ವನಾಥ್ ಜೀ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಅವರಿಗೆ ಕಾನ್ಫರೆನ್ಸ್​ ಕರೆ ಮಾಡಿ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಿದ್ದು ಅವರನ್ನು ಭೇಟಿ ಆಗಿ ಎಂದು ಹೇಳಿದ್ದರು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಬಿಜೆಪಿ ಯುವ ಮೂರ್ಚಾ ಕಾರ್ಯಕರ್ತನ ಬಂಧನ

ಈ ಮಾತಿನಂತೆ ಗಗನ್ ಕಡೂರು, ಗೋವಿಂದಬಾಬು ಪೂಜಾರಿ ಅವರನ್ನು ಕರೆದುಕೊಂಡು ಕುಮಾರ ಕೃಪಾ ಸರ್ಕಾರಿ ಅತಿಥಿ ಗೃಹಕ್ಕೆ ಹೋದನು. ಅಲ್ಲಿ ಇಬ್ಬರೂ ಶ್ರೀಕಾಂತ್​ ನಾಯ್ಕ್​ ಎಂಬವರನ್ನು ಭೇಟಿ ಆಗಿದ್ದರು. ಈ ವೇಳೆ ಗಗನ್ ಕಡೂರು, ಶ್ರೀಕಾಂತ ನಾಯ್ಕ್​ ಅವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಗೋವಿಂದಬಾಬು ಅವರಿಗೆ ಪರಿಚಯಿಸಿದ್ದನು. ಈ ವೇಳೆ ಶ್ರೀಕಾಂತ ನಾಯ್ಕ್​, ಕೇಂದ್ರಿಯ ಚುನಾವಣಾ ಸಮಿತಿ ನಿಮ್ಮ ಹೆಸರು ಅಂತಿಮಗೊಳಿಸಿದೆ ಎಂದು ಗೋವಿಂದಬಾಬು ಪೂಜಾರಿಗೆ ಹೇಳಿದ್ದರು. ನಂತರ ಬಾಕಿ ಮೊತ್ತ 3 ಮೂರು ಕೋಟಿ ರೂ. ಗಗನ್ ಕಡೂರ್​ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಹೇಳಿದ್ದರು.

ಶ್ರೀಕಾಂತ್​ ನಾಯ್ಕ್​​ ಮತ್ತು ವಿಶ್ವನಾಥ್ ಜಿ ಸೂಚನೆಯಂತೆ 3 ಕೋಟಿ ರೂ. ಮೊತ್ತವನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ ಗೋವಿಂದಬಾಬು 2022ರ ಡಿಸೆಂಬರ್​ 29 ರಂದು ಮಂಗಳೂರಿನಲ್ಲಿ ನೀಡಿದ್ದರು. ಇದಾದ ಎರಡು ತಿಂಗಳ ಬಳಿಕ ಗಗನ್ ಕಡೂರ್, ಗೋವಿಂದಬಾಬು ಪೂಜಾರಿಗೆ ಕರೆ ಮಾಡಿ “ವಿಶ್ವನಾಥ್ ಜಿ ಅವರು 2022ರ  ಮಾರ್ಚ್​ 3 ರಂದು ಬೆಳಿಗ್ಗೆ 11.30ರ ಸುಮಾರಿಗೆ ಉಸಿರಾಟದ ಸಮಸ್ಯೆಯಿಂದ ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದನು.

ಇದರಿಂದ ಅನುಮಾನಗೊಂಡ ಗೋವಿಂದಬಾಬು ಪೂಜಾರಿ, ವಿಶ್ವನಾಥ್ ಜೀ ಸಾವಿನ ಸುದ್ದಿ ಬಗ್ಗೆ ಖಚಿತತೆ ಬಗ್ಗೆ ಕಾಶ್ಮೀರದಲ್ಲಿರುವ ತಮ್ಮ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬುವವರನ್ನು ವಿಚಾರಿಸಿದಾಗ ವಿಶ್ವನಾಥ್ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎಂದು ತಿಳಿಸಿದ್ದರು. ಇದರಿಂದ ಅನುಮಾನ ದಟ್ಟವಾಗಿದೆ. ಕೂಡಲೇ ಗೋವಿಂದಬಾಬು, ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಈ ಬಗ್ಗೆ ಚರ್ಚಿಸಿದಾಗ ತಾವು ಪಡೆದ ಹಣ ವಿಶ್ವನಾಥ ಜೀ ಬಳಿ ಇದ್ದು, ಅವರು ಈಗ ವಿಧಿವಶರಾಗಿದ್ದಾರೆ ಎಂದು ಹೇಳಿದ್ದರು.

ಇದನ್ನು ನಂಬದ ಗೋವಿಂದಬಾಬು ಅವರು ಎಲ್ಲ ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್‌ ನೀಡಿ, ಇಲ್ಲ ದೂರು ನೀಡುತ್ತೇನೆ ಎಂದಿದ್ದರು. ಅದಕ್ಕೆ ಚೈತ್ರಾ ಕುಂದಾಪುರ ಕೂಡಲೇ ವಿಷದ ಬಾಟಲಿ ತೋರಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿ,  “ನಮಗೆ ಬಳಿಕ ಸ್ವಲ್ಪ ಕಾಲಾವಕಾಶ ನೀಡಿ” ಎಂದು ಇಬ್ಬರೂ ಹೇಳಿದ್ದಾರೆ. ಆನಂತರ ಇಬ್ಬರೂ ಫೋನ್ ಕರೆ ಸ್ವೀಕರಿಸದೆ ತಲೆ ಮರೆಸಿಕೊಂಡಿದ್ದರು.

ಇದಾದ ಬಳಿಕ ಗೋವಿಂದಬಾಬು ಅಭಿನವ ಪಾಲಶ್ರೀ ಸ್ವಾಮೀಜಿ ಅವರನ್ನು ಭೇಟಿಯಾಗಿ 1.5 ಕೋಟಿ ರೂ. ಹಣ ನೀಡುವಂತೆ ಹೇಳಿದ್ದಾರೆ. ಆಗ ಸ್ವಾಮೀಜಿ ಒಂದು ತಿಂಗಳೊಳಗೆ ವಾಪಸ್‌ ನೀಡುತ್ತೇನೆ ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ ಎಂದು ಹೇಳಿದ್ದರು.

ಅಷ್ಟಕ್ಕೂ ಯಾರು ಈ ವಿಶ್ವನಾಥ್​​ ಜಿ?

ವಿಶ್ವನಾಥ್ ಜೀ ಬಗ್ಗೆ ಚಿಕ್ಕಮಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಮಂಜು ಬಳಿ ಗೋವಿಂದಬಾಬು ಕೇಳಿದಾಗ ಮಂಜು ತಾನು ಕೆಲ ದಿನಗಳ ಹಿಂದೆ ಸಲೂನ್‌ ಒಂದಕ್ಕೆ ಭೇಟಿ ನೀಡಿದ ವೇಳೆ ನಡೆದ ಸನ್ನಿವೇಶಕ್ಕೂ ಈತನಿಗೂ ಸಾಮ್ಯತೆ ಇದೆ ಎಂದು ಹೇಳಿದ್ದರು. ಕಡೂರಿನ ಸಲೂನ್​ಗೆ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು ಆರ್​ಎಸ್​ಎಸ್​ ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು ಎಂದು ಮಂಜು, ಗೋವಿಂದಬಾಬುಗೆ ಹೇಳಿದ್ದನು.

ಈ ಬಗ್ಗೆ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್‌ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ ಆರ್​ಎಸ್​ಎಸ್​ ಪ್ರಚಾರಕ ವಿಶ್ವನಾಥ್ ಜೀ ಎಂದು ತಿಳಿದಿದೆ. ಈ ರಮೇಶ್​​ ವಿಶ್ವನಾಥ್​ ಜೀ ರೀತಿ ನಟಿಸಿರುವ ಸಂಗತಿ ಗೋವಿಂದಬಾಬುಗೆ ತಿಳಿದಿತ್ತು. ಆರ್​ಎಸ್​ಎಸ್​ ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರಮೇಶನಿಗೆ ತರಬೇತಿ ನೀಡಿ 1.20 ಲಕ್ಷ ರೂ. ಕೊಟ್ಟಿದ್ದರು. ಈ ನಾಟಕ ಆಡುವಾಗ ಆರ್​ಎಸ್​​ಎಸ್​​ ವಾಹನ ಬಳಸಲು 2.5 ಲಕ್ಷ ರೂ. ನೀಡಿದ್ದಾರೆ ಎಂದು ಧನರಾಜ್ ಹೇಳಿದ್ದರು.

ಇದೇ ವೇಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ಶ್ರೀಕಾಂತ್​ ನಾಯ್ಕ್​ ಎಂಬ ವ್ಯಕ್ತಿ ಬಗ್ಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಗಿದೆ. ಶ್ರೀಕಾಂತ್​ ನಾಯ್ಕ್​​ರನ್ನು ಭೇಟಿಯಾಗಿ ವಿಚಾರಿಸಿದಾಗ ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93 ಸಾವಿರ ರೂ. ನೀಡಿದ್ದರು. ಅಲ್ಲದೇ ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ತನಗೆ ಜೀವ ಬೆದರಿಕೆ ಹಾಕಿದ್ದರು ಎಂದು ಶ್ರೀಕಾಂತ್​​ ಹೇಳಿದ್ದಾನೆ ಎಂದು ಎಫ್​ಐಆರ್​ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:29 am, Wed, 13 September 23