ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ನಾಗರಿಕ ಒಕ್ಕೂಟ ಪಟ್ಟು: ಕೋರ್ಟ್ಗೆ ಸರ್ಕಾರದಿಂದ ಮೇಲ್ಮನವಿ ಸಾಧ್ಯತೆ
ರಾಜ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ ಜತೆಗೂಡಿ ಆಚರಿಸಲು ಕಂದಾಯ ಸಚಿವರು ಸಲಹೆ ನೀಡಿದ್ದಾರೆ ಎಂದು ನಾಗರಿಕ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ (Chamarajpet Maidan) ಸ್ವಾತಂತ್ರ್ಯ ದಿನಾಚರಣೆ ಮಾದರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನೂ (Kannada Rajyotsava) ಆಚರಿಸಬೇಕೆಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಒತ್ತಾಯಿಸಿದ್ದಾರೆ. ಕೋರ್ಟ್ ಆದೇಶದ ಪ್ರಕಾರ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಕ್ಕೆ ಅನುಮತಿ ಇದೆ. ಹೀಗಾಗಿ ಸರ್ಕಾರವು ರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿ ಮೇಲ್ಮನವಿ ಸಲ್ಲಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಕಂದಾಯ ಸಚಿವ ಆರ್.ಅಶೋಕ್ ಜೊತೆ ಮಾತನಾಡಿದ್ದೇವೆ. ರಾಜ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ನಿಂದ ಆಚರಿಸಲು ಸಲಹೆ ನೀಡಿದ್ದಾರೆ. ನಾಗರಿಕರ ಒಕ್ಕೂಟಕ್ಕೂ ಈ ಸಲಹೆಯು ಸಮ್ಮತವಾದುದಾಗಿದೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆಗೂ ಚರ್ಚಿಸಿದ್ದೇವೆ. ನಾಡಹಬ್ಬದ ರೀತಿ ಆಚರಣೆಗೆ ಸರ್ಕಾರ ಸಲಹೆ ನೀಡಬಹುದು. ಕಂದಾಯ ಇಲಾಖೆಯೇ ಕೋರ್ಟ್ ಮೊರೆ ಹೋಗಿ ಅನುಮತಿ ಕೇಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಗಣೇಶೋತ್ಸವಕ್ಕೆ ಚಾಮರಾಜಪೇಟೆ ಮೈದಾನದಲ್ಲಿ ಅನುಮತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿದ್ದವು. ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ನಾಡಧ್ವಜ ಹಾರಿಸುವಂತೆ ಮನವಿ ಮಾಡಲಾಗಿತ್ತು. ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನವನ್ನೂ ಸೆಳೆಯಲಾಗಿದೆ.
ಒಕ್ಕೂಟ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ್ದ ಒಕ್ಕೂಟದ ಖಜಾಂಚಿ ಯಶವಂತ್, ಚಾಮರಾಜಪೇಟೆ ನಾಗರೀಕರ ಒಕ್ಕೂಟವೇ ಅಂತಲ್ಲ, ಶಾಸಕ ಜಮೀರ್ ಅಹಮದ್ ಖಾನ್ ಅವರೇ ಕನ್ನಡ ಬಾವುಟ ಹಾರಿಸಲಿ. 2006ರಲ್ಲೇ ಮೈದಾನದಲ್ಲಿ ನಾಡ ಧ್ವಜ ಹಾರಿಸುವುದಾಗಿ ಹೇಳಿದ್ದರು. ಮೈದಾನವು ಸರ್ಕಾರದ ಸ್ವತ್ತು ಎಂದು ಘೋಷಣೆ ಆದ ಮೇಲೆ ಕನ್ನಡ ಧ್ವಜ ಹಾರಿಸಬೇಕು ಎಂದು ಹೇಳಿದ್ದರು.
Published On - 11:09 am, Sun, 16 October 22