Chamarajpet Ganeshotsav: ಚಾಮರಾಜಪೇಟೆ ಗಣೇಶೋತ್ಸವ: ವಿಎಚ್​ಪಿ ಮಹತ್ವದ ಸಭೆ, ನಾಗರಿಕ ಒಕ್ಕೂಟದಲ್ಲಿ ಬಿರುಕು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 21, 2022 | 2:16 PM

VHP: ವಿಎಚ್​​ಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಹಲವು ಹಿಂದುತ್ವಪರ ಸಂಘಟನೆಗಳೊಂದಿಗೆ ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆಗೂ ಆಹ್ವಾನ ನೀಡಲಾಗಿದೆ.

Chamarajpet Ganeshotsav: ಚಾಮರಾಜಪೇಟೆ ಗಣೇಶೋತ್ಸವ: ವಿಎಚ್​ಪಿ ಮಹತ್ವದ ಸಭೆ, ನಾಗರಿಕ ಒಕ್ಕೂಟದಲ್ಲಿ ಬಿರುಕು
ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸ್ ಪಹರೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ (Chamarajpet Ganeshotsav) ಆಚರಿಸಲು ನಿರ್ಧರಿಸಿರುವ ಹಿಂದುತ್ವ ಸಂಘಟನೆಗಳಿಗೆ ಸಂಘ ಪರಿವಾರ ಸಹ ಬೆಂಬಲವಾಗಿ ನಿಂತಿದೆ. ಈ ಸಂಬಂಧ ಚರ್ಚಿಸಲು ಇಂದು (ಆಗಸ್ಟ್ 21) ಸಂಜೆ 4 ಗಂಟೆಗೆ ವಿಶ್ವ ಹಿಂದೂ ಪರಿಷತ್ (Vishwa Hindu Parishad – VHP) ಮಹತ್ವದ ಸಭೆ ಕರೆದಿದೆ. ಶಂಕರಪುರಂನಲ್ಲಿರುವ ವಿಎಚ್​​ಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಹಲವು ಹಿಂದುತ್ವಪರ ಸಂಘಟನೆಗಳೊಂದಿಗೆ ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆಗೂ ಆಹ್ವಾನ ನೀಡಲಾಗಿದೆ.

ಒಕ್ಕೂಟದಲ್ಲಿ ಬಿರುಕು

ಚಾಮರಾಜಪೇಟೆ ಗಣೇಶೋತ್ಸವ ಗದ್ದಲದಲ್ಲಿ ಶಾಸಕ ಜಮೀರ್ ಹೆಸರು ಮತ್ತೆಮತ್ತೆ ಪ್ರಸ್ತಾಪವಾಗುತ್ತಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಮಧ್ಯೆ ಇದೇ ಕಾರಣಕ್ಕೆ ಬಿರುಕು ಮೂಡಿದೆ. ಒಕ್ಕೂಟದ ಅಧ್ಯಕ್ಷ ರಾಮೇಗೌಡ ಮತ್ತು ಕಾರ್ಯದರ್ಶಿ ರುಕ್ಮಾಂಗದ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ.

ಶಾಸಕ ಜಮೀರ್ ಹಾಗೂ ಅಲ್ತಾಫ್ ಕಡೆಯವರಾದ ರಾಮೇಗೌಡರು ನಮ್ಮ ಹೋರಾಟ ಆರಂಭವಾದ ಮೇಲೆ ಒಕ್ಕೂಟಕ್ಕೆ ಬಂದರು. ಈಗ ಒಂದಲ್ಲ ಒಂದು ರಾಜಕೀಯ ಮಾಡುತ್ತಿದ್ದಾರೆ. ಜಮೀರ್, ಅಲ್ತಾಪ್ ಮನೆಗೆಳಿಗೆ ಇವರು ಹೋಗಿದ್ದಾರೆ ಎಂದು ಒಕ್ಕೂಟದ ಕಾರ್ಯದರ್ಶಿ ರುಕ್ಮಾಂಗದ ಕಿಡಿಕಾರಿದ್ದಾರೆ.

ರುಕ್ಮಾಂಗದ ಮಾಡಿರುವ ಆರೋಪಗಳನ್ನು ಒಕ್ಕೂಟದ ಅಧ್ಯಕ್ಷ ರಾಮೇಗೌಡ ತಳ್ಳಿಹಾಕಿದ್ದಾರೆ. ನಾನು ಜಮೀರ್ ಜೊತೆ ಶಾಮೀಲಾಗಿಲ್ಲ. ಕಾಂಗ್ರೆಸ್​ ಪಕ್ಷದಿಂದ ನಾನು ಡೆಪ್ಯುಟಿ ಮೇಯರ್ ಆಗಿದ್ದವನು. ಜಮೀರ್ ಸಹ ಕಾಂಗ್ರೆಸ್​ನವರೇ. ಆದರೆ ಮೈದಾನದ ಹೋರಾಟಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

ಯಾವ ಆಧಾರದ ಮೇಲೆ ರುಕ್ಮಾಂಗದ ನನ್ನ ವಿರುದ್ಧ ಆರೋಪ ಮಾಡ್ತಾರೆ? ರುಕ್ಮಾಂಗದ ಅವರೇ ನನ್ನ ಫೋನ್ ರಿಸೀವ್ ಮಾಡೊಲ್ಲ. ಅವರೇ ಜಮೀರ್ ಜೊತೆ ಶಾಮೀಲಾಗಿದ್ದಾರೆ. ಮೊದಲಿಂದಲೂ ನಾವು ಹೋರಾಟ ಮಾಡುತ್ತಿದ್ದವರು. ಈಗ ಬೇರೆಯವರ ಜೊತೆ ರುಕ್ಮಾಂಗದ ಸೇರಿಕೊಂಡಿದ್ದಾರೆ. ಒಕ್ಕೂಟದ ಸದಸ್ಯರ ಸಭೆ ನಡೆಸಿ ರುಕ್ಮಾಂಗದ ಅವರನ್ನು ಉಚ್ಚಾಟಿಸುತ್ತೇವೆ ಎಂದು ಎಚ್ಚರಿಸಿದರು.

ಪೊಲೀಸ್ ಇಲಾಖೆಗೆ ಬಿಸಿತುಪ್ಪವಾದ ಗಣೇಶೋತ್ಸವ

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯ ನಿರ್ವಹಣೆಯು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಬಿಸಿತುಪ್ಪವಾಗಿದೆ. ಪೊಲೀಸ್ ಇಲಾಖೆಯು ಗಣೇಶೋತ್ಸವದ ಸಾಧಕ-ಬಾಧಕ ಕುರಿತಂತೆ ಚರ್ಚೆ ನಡೆಸುತ್ತಿದೆ. ಚಾಮರಾಜಪೇಟೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದರೆ ವಿವಾದದ ಪರಿಣಾಮಗಳು ಇಡೀ ರಾಜ್ಯಕ್ಕೆ ಹರಡುವ ಸಾಧ್ಯತೆಯಿದೆ. ಪ್ರತಿ ವಿವಾದಿತ ಜಾಗದಲ್ಲೂ ಉತ್ಸವಕ್ಕೆ ಅನುಮತಿ ಕೇಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ ಎಂದು ಪೊಲೀಸ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಗಣೇಶೋತ್ಸವ ಸಂಬಂಧ ಮಾಹಿತಿ ಕಲೆಹಾಕಲು ವಿವಿಧ ಠಾಣೆಗಳ ಸಬ್​ಇನ್​ಸ್ಪೆಕ್ಟರ್​ಗಳಿಗೆ ಉನ್ನತ ಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುತ್ತಿರುವವರು ಯಾರು? ಎಲ್ಲಿ ಆಚರಣೆ ಮಾಡುತ್ತಿದ್ದಾರೆ? ಬಿಬಿಎಂಪಿಯಿಂದ ಅನುಮತಿ ಸಿಕ್ಕಿದೆಯೇ? ಸ್ಥಳ ಖಾಸಗಿಯವರಿಗೆ ಸೇರಿದ್ದೆ ಅಥವಾ ಬಿಬಿಎಂಪಿ ಜಾಗನಾ? ರಸ್ತೆನಾ? ಏನೆಲ್ಲಾ ವ್ಯವಸ್ಥೆ ಮಾಡಿದ್ದಾರೆ? ಗಣೇಶನನ್ನು ಕೂರಿಸುವ ಸ್ಥಳದಲ್ಲಿ ಯಾವುದಾದರೂ ವಿವಾದಗಳಿವೆಯೇ? ಗಣೇಶೋತ್ಸವಕ್ಕೆ ಎಷ್ಟು ಜನ ಸೇರಬಹುದು? ಸ್ಥಳಾವಕಾಶ ಹೇಗಿದೆ? ಮೈಕ್ ಸೆಟ್, ಆರ್ಕೆಸ್ಟ್ರಾ ಬಳಕೆ ಮಾಡ್ತಾರಾ? ಹೀಗೆ ಹಲವು ಮಾಹಿತಿಗಳನನ್ನು ಕಲೆ ಹಾಕಲು ಠಾಣಾವಾರು ಇನ್ಸ್‌ಪೆಕ್ಟರ್ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ.

ಕಾರ್ಯಕ್ರಮಕ್ಕೆ ಒಪ್ಪಬಹುದೇ ಕಂದಾಯ ಇಲಾಖೆ

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಸದ್ಯ ಗಣೇಶೋತ್ಸವ ಮೆರವಣಿಗೆಗೆ ದಾರಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ. ಪಾದರಾಯನಪುರದಿಂದ ಗಣೇಶೋತ್ಸವ ಱಲಿ ಆರಂಭವಾಗಲಿದ್ದು, ಪಾದರಾಯನಪುರದಿಂದ ಟೌನ್​ಹಾಲ್​ ಮಾರ್ಗವಾಗಿ ಮೈಸೂರು ಬ್ಯಾಂಕ್ ಸರ್ಕಲ್​ವರೆಗೆ ಱಲಿ ನಡೆಸಲು ನಿರ್ಧರಿಸಲಲಾಗಿದೆ. ಮೈದಾನದಲ್ಲಿ ಒಟ್ಟು 11 ದಿನದ ಗಣೇಶೋತ್ಸವಕ್ಕೆ ನಿರ್ಧರಿಸಲಾಗಿದೆ ಎಂದು ಬೆಂಗಳೂರು ಗಣೇಶ ಉತ್ಸವ ಸಮಿತಿಯ ಕಾರ್ಯದರ್ಶಿ ಕಾರ್ಯದರ್ಶಿ ಪ್ರಕಾಶ್ ರಾಜು ಹೇಳಿದ್ದಾರೆ.

Published On - 2:16 pm, Sun, 21 August 22