BBMP Election: ಬಿಬಿಎಂಪಿ ಚುನಾವಣೆ ಘೋಷಣೆಗೆ ಆಯೋಗದಿಂದ ಅಂತಿಮ ಸಿದ್ಧತೆ, ಎಪಿಕ್-ಆಧಾರ್ ಲಿಂಕ್ ಮಾಡುವಂತೆ ಪಾಲಿಕೆ ಸುತ್ತೋಲೆ
ಎಲ್ಲರೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ (Karnataka State Election Commission) ಸಿದ್ಧತೆ ತೀವ್ರಗೊಳಿಸಿದೆ. ಆಗಸ್ಟ್ 25ರಂದು ಎಲ್ಲ 243 ಬಿಬಿಎಂಪಿ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಅಂದು ಚುನಾವಣಾ ಆಯೋಗ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದ್ದು, ಸೆಪ್ಟೆಂಬರ್ 22ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
ಎಲೆಕ್ಷನ್ ಕಾರ್ಡ್-ಆಧಾರ್ ನಂಬರ್ ಲಿಂಕ್ ಮಾಡಲು ಸೂಚನೆ
ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಮತದಾರರೂ ತಮ್ಮ ಚುನಾವಣಾ ಗುರುತಿನ ಚೀಟಿಯನ್ನು (Electors Photo Identity Card – EPIC) ಆಧಾರ್ ಕಾರ್ಡ್ (Aadhaar Card) ಸಂಖ್ಯೆಗೆ ಲಿಂಕ್ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸುತ್ತೋಲೆ ಹೊರಡಿಸಿದೆ. ‘ಭಾರತ ಚುನಾವಣಾ ಆಯೋಗದ ಸುತ್ತೋಲೆ ಮತ್ತು ಆದೇಶದಂತೆ ಎಲ್ಲರೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ’ ಎಂದು ಬಿಬಿಎಂಪಿ ಹೇಳಿದೆ.
‘ಒಂದು ವೇಳೆ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಿಕೊಳ್ಳದಿದ್ದರೆ ಮತದಾರರ ಗುರುತಿನ ಚೀಟಿ ರದ್ದಾಗುವ ಸಾಧ್ಯತೆಯಿರುತ್ತದೆ. ಎಲ್ಲ ಮತದಾರರು ತಮ್ಮ ಕುಟುಂಬದ ಎಲ್ಲ ಮತದಾರರ ಗುರುತಿನ ಚೀಟಿಗಳಿಗೆ ಆ್ಯಪ್ ಮೂಲಕ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು’ ಎಂದು ಸಲಹೆ ಮಾಡಿದೆ. ಆಧಾರ್ ಸಂಖ್ಯೆ ಮತ್ತು ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಲಿಂಕ್ ಮಾಡುವ ವಿಧಾನವನ್ನೂ ಬಿಬಿಎಂಪಿ ಸುತ್ತೋಲೆ ವಿವರಿಸಿದೆ. ಮತದಾರರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಹಾಗೂ ತಮ್ಮ ಸಂಬಂಧಿಕರ ಮತದಾರರ ಗುರುತಿನ ಚೀಟಿಗಳನ್ನು ಲಿಂಕ್ ಮಾಡಬಹುದು.
ಎಪಿಕ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ
1) Play Storeಗೆ ಹೋಗೆ Vote Helpline App ಇನ್ಸ್ಟಾಲ್ ಮಾಡಿಕೊಳ್ಳಿ 2) ಇನ್ಸ್ಟಾಲ್ ಮಾಡುವಾಗ ವಿವಿಧ ಪರ್ಮಿಷನ್ಗಳನ್ನು ಅಲೊ ಮಾಡಿ 3) ಆ್ಯಪ್ನ ಕೆಳ-ಎಡ ತುದಿಯಲ್ಲಿರುವ Explore ಆಯ್ಕೆ ಕ್ಲಿಕ್ ಮಾಡಿ 4) Electroral Authentication Form-6B ಆಯ್ಕೆ ಮಾಡಿ, ಮೊಬೈಲ್ ನಂಬರ್ ಕೊಡಿ. 5) ಮೊಬೈಲ್ ನಂಬರ್ಗೆ ಬರುವ ಒಟಿಪಿ ನಮೂದಿಸಿ, Verify ಕ್ಲಿಕ್ ಮಾಡಿ 6) ನಿಮ್ಮ ಚುನಾವಣಾ ಗುರುತಿನ ಚೀಟಿಯ ನಂಬರ್ ನಮೂದಿಸಿ, ರಾಜ್ಯ ಯಾವುದು ಎಂದು ಆಯ್ಕೆ ಮಾಡಿ 7) ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್, ಇಮೇಲ್ ಐಡಿ, ಗ್ರಾಮದ ಹೆಸರು ನಮೂದಿಸಿ 8) Proceed ಆಯ್ಕೆ ಕ್ಲಿಕ್ ಮಾಡಿ 9) ಎಲ್ಲವೂ ಸರಿಯಿದೆಯೇ ಎಂದು ಪರಿಶೀಲಿಸಿದ ನಂತರ Confirm ಆಯ್ಕೆ ಕ್ಲಿಕ್ ಮಾಡಿ. 10) ಕೊನೆಯಲ್ಲಿ Successful ಎಂಬ ಸಂದೇಶದೊಂದಿಗೆ ರೆಫರೆನ್ಸ್ ನಂಬರ್ ಬರುತ್ತದೆ.