ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ ಮೂರು ದಿನವಷ್ಟೆ ಬಾಕಿಯಿದೆ. ಚಾಮರಾಜಪೇಟೆ ಜನರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದ್ದು, ಹೈಕೋರ್ಟ್ ಗ್ರೀನ್ ಸಿಗ್ನಲ್ ಇದ್ರೂ ಸರ್ಕಾರದಿಂದ ಅವಕಾಶ ಕೊಡದೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನದ ಗಣೇಶೋತ್ಸವ ವಿವಾದ ಬಗೆಹರಿಯುತ್ತಿಲ್ಲ. ಹೈಕೋರ್ಟ್ ನಿರ್ದೇಶನದ ಬಳಿಕ ಸರ್ಕಾರ ಘಂಟಾಘೋಷವಾಗಿ ಘೋಷಿಸುತ್ತೆ ಎಂದು ಜನರು ಅಂದುಕೊಂಡಿದ್ದರು. ಸರ್ಕಾರದ ಆಮೆ ವೇಗದಿಂದ ಚಾಮರಾಜಪೇಟೆ ನಾಗರಿಕರು ಒಳಗೊಳಗೇ ಬೇಸರಗೊಂಡಿದ್ದಾರೆ. ಈದ್ಗಾ ಮೈದಾನದ ಗಣೇಶೋತ್ಸವದ ಬಗ್ಗೆ ಸರ್ಕಾರ ಕಾದು ನೋಡುವ ತಂತ್ರಗಾರಿಕೆಗೆ ಮೊರೆ ಹೋಗಿದ್ದು, ಸಭೆ ಮೇಲೆ ಸಭೆ ನಡೆಸಿದ್ರೂ ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಅತ್ತ ಕಂದಾಯ ಸಚಿವ ಆರ್.ಅಶೋಕ್ ಅಡ್ಡಗೋಡೆ ಮೇಲೆ ದೀಪವಿಟ್ಟಂತ ಹೇಳಿಕೆ ನೀಡುತ್ತಿದ್ದಾರೆ.
ಇತ್ತ ಸೋಮವಾರ ವಕ್ಪ್ ಬೋರ್ಡ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆಯಿದ್ದು, ಮೊನ್ನೆ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಮತ್ತು ವಕ್ಫ್ ಬೋರ್ಡ್ ಗೌಪ್ಯ ಸಭೆ ಮಾಡಲಾಗಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ಗೆ ಅಪೀಲು ಹಾಕುವ ಕುರಿತು ವಕ್ಫ್ ಬೋರ್ಡ್ ಚಿಂತನೆ ನಡೆಸಿದೆ. ಅಷ್ಟಕ್ಕೂ ಹೈಕೋರ್ಟ್ ನಿರ್ದೇಶನ ಇದ್ದರೂ ಸರ್ಕಾರ ಇಷ್ಟೊಂದು ತಡ ಮಾಡ್ತಿರೋದು ಯಾಕೆ? ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ರೆ ಹಿನ್ನೆಡೆಯಾಗುವ ಭೀತಿ ಸರ್ಕಾರವನ್ನ ಕಾಡ್ತಿದ್ಯಾ? ಹೀಗಾಗಿ ಮಂಗಳವಾರದವಗೆಗೂ ಕಾದು ನೋಡುವ ತಂತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಗಣೇಶೋತ್ಸವಕ್ಕೆ ಸರ್ಕಾರದಿಂದ ತಡ ಯಾಕೆ?
– ಹೈಕೋರ್ಟ್ ನಿರ್ದೇಶನ ಇದ್ದರೂ ಸರ್ಕಾರದಿಂದ ಕಾದು ನೋಡುವ ತಂತ್ರ.
– ಬಿಬಿಎಂಪಿ, ಪೊಲೀಸ್ ಇಲಾಖೆ ಸಿದ್ಧತೆಗಳೊಂದಿಗೆ ಸನ್ನದ್ಧವಾಗಿದೆ.
– ಆದರೂ ಸರ್ಕಾರದಿಂದ ಮೈದಾನದಲ್ಲಿ ಗಣೇಶೋತ್ಸವ ಘೋಷಣೆಗೆ ತಡ.
– ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ಗೆ ಹೋಗ್ತಿದೆ ಎಂಬ ಸುದ್ದಿ.
– ಮುಕ್ತವಾಗಿ ಅವಕಾಶ ಕೊಡದೆ ಕಾದು ನೋಡುವ ತಂತ್ರದ ಮೊರೆ ಹೋದ ಸರ್ಕಾರ.
– ಒಕ್ಕೂಟ, ಸಮಿತಿ ನಡುವೆ ಒಮ್ಮತ ಮಾಡುತ್ತಿಲ್ಲ ಅನ್ನೊ ಉತ್ತರ.
– ಅಕಸ್ಮಾತ್ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದರೆ ಹಿನ್ನಡೆ ಭಯ ಸರ್ಕಾರಕ್ಕೆ.
– ಹೀಗಾಗಿ ಅರ್ಜಿ ಸಲ್ಲಿಸಿರುವ 5 ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಯಾರಿ.
– ಕೊನೆ ಕ್ಷಣದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಘೋಷಿಸುವ ಚಿಂತನೆ.
– ಆವರೆಗೂ ಸಭೆ, ಭೇಟಿ, ಪರಿಶೀಲನೆ ನಡೆಸಿ ಕಾಲಹರಣ ಮಾಡಲು ನಿರ್ಧಾರ.
ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸ್ ಬಂದೋಬಸ್ತ್
ಚಾಮರಾಜಪೇಟೆ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಇಬ್ಬರು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಮೈದಾನಕ್ಕೆ ಭದ್ರತೆ ನೀಡಲಾಗುತ್ತಿದೆ. 2 ಕೆಎಸ್ಆರ್ಪಿ ತುಕಡಿ ಸೇರಿ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದು, ಈದ್ಗಾದಲ್ಲಿ ಗಣೇಶ ಕೂರಿಸುವ ನಿರ್ಧಾರವನ್ನ ಸರ್ಕಾರ ಇನ್ನೂ ಪ್ರಕಟ ಮಾಡಿಲ್ಲ. ಆ.30ನೇ ತಾರೀಖು ಸರ್ಕಾರದ ತೀರ್ಮಾನ ಹೊರ ಬೀಳಲಿದೆ. ಸೂಕ್ಷ್ಮ ಪ್ರದೇಶ ಆಗಿರೋದ್ರಿಂದ ಹೆಚ್ಚಿನ ಪೊಲೀಸರ ಭದ್ರತೆ ಒದಗಿಸಲಾಗುತ್ತಿದೆ. ಪೊಲೀಸ್ ಭದ್ರತೆ ಮಧ್ಯೆ ಚಾಮರಾಜಪೇಟೆಯ ಸುತ್ತಮುತ್ತಲಿನ ಮಕ್ಕಳು ಭಾನುವಾರ ಹಿನ್ನೆಲೆ ಬೆಳಗ್ಗೆಯೇ ಆಟವಾಡಲು ತೊಡಗಿದ್ದಾರೆ. ಎಂದಿನಂತೆ ಮೈದಾನದಲ್ಲಿ ಸಾರ್ವಜನಿಕರು ವಾಕಿಂಗ್ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:05 am, Sun, 28 August 22