ಮುರುಘಾಶ್ರೀಗಳ ವಿರುದ್ಧ ಸುಳ್ಳು ಆರೋಪ; ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ: ಮಾಜಿ ಸಿಎಂ ಯಡಿಯೂರಪ್ಪ
ಪೋಕ್ಸೋ ಕೇಸ್ ಹಾಗೂ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ. ಪೊಲೀಸರು ಎರಡು ಪ್ರಕರಣಗಳನ್ನ ತನಿಖೆ ಮಾಡುತ್ತಿದ್ದಾರೆ. ತನಿಖೆ ದೃಷ್ಟಿಯಿಂದ ಈಗ ಮಾತನಾಡುವುದು ಸೂಕ್ತವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು: ಮುರುಘಾಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದರು. ಶ್ರೀಗಳು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ಇದೆ ಎಂದು ಹೇಳಿದರು. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪೋಕ್ಸೋ ಕೇಸ್ ಹಾಗೂ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ. ಪೊಲೀಸರು ಎರಡು ಪ್ರಕರಣಗಳನ್ನ ತನಿಖೆ ಮಾಡುತ್ತಿದ್ದಾರೆ. ತನಿಖೆ ದೃಷ್ಟಿಯಿಂದ ಈಗ ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದರು.
ಮುರುಘಾ ಶ್ರೀಗಳಿಗೆ ಸಂಕಷ್ಟ:
ಮುರುಘಾಶ್ರೀಗಳ ವಿರುದ್ಧ ಪೊಕ್ಸೋ ಕಾಯ್ದೆ, ಐಪಿಸಿಯಡಿ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದ್ದು, ಮಕ್ಕಳ ಹೇಳಿಕೆ ಮೇಲೆ ಮುರುಘಾ ಶ್ರೀಗಳ ಭವಿಷ್ಯ ನಿರ್ಧರವಾಗಲಿದೆ. ಪೊಕ್ಸೋ ಪ್ರಕರಣದಲ್ಲಿ ಮಕ್ಕಳ ಹೇಳಿಕೆಗೆ ಮಹತ್ವವಿದೆ. ನ್ಯಾಯಾಧೀಶರ ಸಮ್ಮುಖ ನೀಡಿದ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ. ಲೈಂಗಿಕ ದೌರ್ಜನ್ಯವಾಗಿದೆ ಎಂದು ಮಕ್ಕಳು ಹೇಳಿಕೆ ನೀಡಿದರೆ ಮುರುಘಾ ಶ್ರೀಗಳಿಗೆ ಸಂಕಷ್ಟ ಎದುರಾಗಲಿದೆ. ಪೊಕ್ಸೊ, ಅತ್ಯಾಚಾರ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿಲ್ಲ.
ಮುರುಘಾ ಶ್ರೀ ಗಳ ಬಂಧನದ ಸಾಧ್ಯತೆ ಹೆಚ್ಚಿದ್ದು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸಲಿದ್ದಾರೆ. ಎಸ್.ಕೆ.ಬಸವರಾಜನ್ ವಿರುದ್ಧ ಲೈಂಗಿಕ ದೌರ್ಜನ್ಯವೆಂದು ಮಹಿಳೆ ದೂರ ನೀಡಿದ್ದಾರೆ. ಸ್ವಾಮೀಜಿ ವಿರುದ್ದ ಅತ್ಯಾಚಾರದ ಆರೋಪವೂ ಇರುವುದರಿಂದ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಬಂಧಿಸಿ ವಿಚಾರಣೆಗೆ ಒಳಪಡಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು.
ಸ್ವಾಮೀಜಿ ಮುಂದಿರುವ ಆಯ್ಕೆಗಳು
ಮಕ್ಕಳ ಹೇಳಿಕೆಯಲ್ಲಿ ಲೈಂಗಿಕ ದೌರ್ಜನ್ಯದ ಅಂಶಗಳಿಲ್ಲದಿದ್ದರೆ ಮುರುಘಾ ಶ್ರೀ ಸೇಫ್ ಆಗುತ್ತಾರೆ. ಪ್ರಕರಣ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದು. ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಬಹುದು. ಕೇಸ್ ಸುಳ್ಳೆಂದು ಸಾಬೀತುಪಡಿಸುವ ಸವಾಲು ಮುರುಘಾಶ್ರೀ ಮೇಲಿದೆ. ಪೊಕ್ಸೋ ಪ್ರಕರಣವಾಗಿರುವುದರಿಂದ ಶ್ರೀಗಳಿಗೆ ಸಂಕಷ್ಟ ಎನ್ನಲಾಗುತ್ತಿದೆ.
ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದ ಮುರುಘಾಶ್ರೀ
ಮುರುಘಾ ಶ್ರೀಗಳ ಮೇಲೆ ಆರೋಪ ಕೇಳಿ ಬಂದಿದ್ದೇ ತಡ, ಚಿತ್ರದುರ್ಗದ ಮುರುಘಾ ಮಠದಲ್ಲಿ ಶ್ರೀಗಳು ಸಲಹಾ ಸಮಿತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುರುಘಾಶ್ರೀ, ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದು ಆಪ್ತರೆದುರು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ಸಲಹಾ ಸಮಿತಿ ಸಭೆಯಲ್ಲಿ ಭಕ್ತರು, ವಕೀಲರು, ವಿವಿಧ ಸಮಾಜಗಳ ಮುಖಂಡರು ಸೇರಿ ಹಲವರು ಭಾಗಿಯಾಗಿದ್ರು. ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಮುಖಂಡರು, ನೇರವಾಗಿ ಮಾಜಿ ಶಾಸಕ ಬಸವರಾಜನ್ ವಿರುದ್ಧ ಷಡ್ಯಂತ್ರದ ಆರೋಪ ಮಾಡಿದ್ದಾರೆ.
ಆದ್ರೆ ಮುರುಘಾಶ್ರೀ, ಸಭೆಯಲ್ಲಿ ತಮ್ಮ ಆಪ್ತರೆದುರು ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದಿದ್ದಾರೆ. ಸಭೆ ನಡೆಸಿ ತಮ್ಮ ಆಪ್ತರೆದುರು ಪ್ರಕರಣದ ಬಗ್ಗೆ ಮುರುಘಾಶ್ರೀಗಳು ಮಾತನಾಡಿದ್ದಾರೆ. ತಪ್ಪು ಒಪ್ಪಿಕೊಂಡು ಬಂದರೆ ಕ್ಷಮಿಸಿ ಸಂಧಾನ ಮಾಡೋಣ. ಕಾನೂನು ಸಮರಕ್ಕೆ ಸೈ ಅಂದ್ರೆ ಕಾನೂನು ಮೂಲಕವೇ ಹೋರಾಟ ಮಾಡೋಣಾ ಎಂದು ಆಪ್ತರೆದುರು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೆಲ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ಮುರುಘಾಮಠದ ಮುರುಘಾಶ್ರೀ ಮಾತುಕತೆ ನಡೆಸಿದ್ದಾರೆ. ಬಂಧನದ ಭೀತಿ ನಡುವೆ ಎದೆಗುಂದದೆ ಮಾತುಕತೆ ನಡೆಸಿದ್ದಾರೆ. ಇನ್ನು ಆರೋಪ ಕೇಳಿ ಬಂದ ಬಳಿಕ ಬೆಳಗ್ಗೆಯಿಂದ ವಿವಿಧ ಮುಖಂಡರು, ಮಠಾಧೀಶರು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿ ಮುರುಘಾಶ್ರೀಗಳ ಜೊತೆ ಚರ್ಚೆ ನಡೆಸಿದ್ದಾರೆ. ಆದ್ರೆ ಇದೀಗ ಮುರುಘಾ ಶರಣರು ತಮ್ಮ ವೈಯಕ್ತಿಕ ಕೊಠಡಿಗೆ ವಿಶ್ರಾಂತಿಗೆ ತೆರಳಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:54 am, Sun, 28 August 22