ಬೆಂಗಳೂರು: ಚಾಮರಾಜಪೇಟೆಯ ಮೈದಾನ (Chamrajpet Ground) ವಿವಾದ ಅಂತ್ಯಗೊಂಡಿದ್ದು, ಅದಿನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಆಸ್ತಿ (Revenue Department) ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ BBMP) ಆದೇಶ ಹೊರಡಿಸಿದೆ. ಇದರೊಂದಿಗೆ ಚಾಮರಾಜಪೇಟೆಯ ಮೈದಾನದಲ್ಲಿ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ತಿರಂಗಾ ಹಾರಾಡೋದು ಖಚಿತವಾಗಿದೆ.
75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಜಂಟಿ ಆಯುಕ್ತ ಶ್ರೀನಿವಾಸ್ ಅವರಿಂದ ಐತಿಹಾಸಿಕ ಆದೇಶ ಪ್ರಕಟ
ಮೈದಾನವನ್ನು ತಮ್ಮ ಹೆಸರಿಗೆ ಖಾತಾ ಇಂಡೀಕರಣಕ್ಕೆ ವಕ್ಫ್ ಬೋರ್ಡ್ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ವಕ್ಫ್ ಬೋರ್ಡ್ ಅರ್ಜಿ ವಜಾಗೊಳಿಸಿದ ಬಿಬಿಎಂಪಿ ಚಾಮರಾಜಪೇಟೆ ಮೈದಾನ ರಾಜ್ಯ ಸರ್ಕಾರದ್ದು ಎಂದು ಆದೇಶ ಹೊರಡಿಸಿದೆ. ಇದರೊಂದಿಗೆ ಚಾಮರಾಜಪೇಟೆ ಜನರ 60 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಈ ಐತಿಹಾಸಿಕ ಆದೇಶ ಪ್ರಕಟಿಸಿದ್ದಾರೆ.
ಎರಡು ತಿಂಗಳ ಕಾಲಾವಕಾಶ ನೀಡಿದರೂ ದಾಖಲೆಗಳನ್ನ ಸಲ್ಲಿಸದ ವಕ್ಪ್ ಬೋರ್ಡ್
ವಕ್ಫ್ ಬೋರ್ಡ್ ಎನ್ನುವುದಕ್ಕೆ ದಾಖಲೆ ಕೇಳಿ ವಕ್ಪ್ ಬೋರ್ಡ್ ಗೆ ಜಂಟಿ ಆಯುಕ್ತ ಶ್ರೀನಿವಾಸ್ ನೋಟಿಸ್ ನೀಡಿದ್ದರು. ಆದರೆ ಎರಡು ತಿಂಗಳ ಕಾಲಾವಕಾಶ ನೀಡಿದರೂ ಸಹ ವಕ್ಪ್ ಬೋರ್ಡ್ ದಾಖಲೆಗಳನ್ನ ಬಿಬಿಎಂಪಿಗೆ ಸಲ್ಲಿಕೆ ಮಾಡಿಲ್ಲ. ಅದಾದ ಮೇಲೂ, ಕೆಲ ಮುಸ್ಲಿಂ ವಕೀಲರು ಕೂಡಾ 15 ದಿನ ಕಾಲಾವಕಾಶ ಪಡೆದಿದ್ದರು. ಆದರೆ ಯಾರು ಕೂಡಾ ಮೈದಾನದ ಬಗ್ಗೆ ಸೂಕ್ತ ದಾಖಲೆಗಳನ್ನ ನೀಡದ ಕಾರಣ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡು ಬಿಬಿಎಂಪಿ ಜಂಟಿ ಆಯುಕ್ತರು ಇಂದು ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸ್ತೇವೆ
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಆಸ್ತಿ ಎಂದು ಬಿಬಿಎಂಪಿ ನೀಡಿರುವ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸ್ತೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದ್ದಾರೆ.