ಅಂಗಡಿಗಳ ತೆರವು; ಸಿಡಿದೆದ್ದ ಬೀದಿ ಬದಿ ವ್ಯಾಪಾರಿಗಳಿಂದ ಬಿಬಿಎಂಪಿಗೆ ಮುತ್ತಿಗೆ
ಬಿಬಿಎಂಪಿ ತನ್ನ ವ್ಯಾಪ್ತಿಯ ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡುವ ಕಾರ್ಯ ಮಾಡುತ್ತಿದೆ. ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಬೀದಿಬದಿ ವ್ಯಾಪಾರಿಗಳು ಇಂದು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಸ್ಥಳದಲ್ಲಿ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಬೆಂಗಳೂರು, ಡಿ.19: ನಗರದಲ್ಲಿರುವ ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ಬೀದಿ ಬದಿ ವ್ಯಾಪಾರಿಗಳು ಬಿಬಿಎಂಪಿ (BBMP) ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ನೂರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು ಕಚೇರಿ ಮುಂದೆ ಜಮಾಯಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೀದಿ ಬದಿ ಇರುವ ಅಂಗಡಿಗಳನ್ನು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರವಾನಗಿ ನವೀಕರಣ ಹಾಗೂ ಹೊಸ ಪರವಾನಗಿಗೆ ಬೀದಿ ಬದಿ ವ್ಯಾಪಾರಿಗಳು ಸಾಮೂಹಿಕ ಅರ್ಜಿಸಲ್ಲಿದ್ದರೂ ಹೊಸ ಲೈಸೆನ್ಸ್ ಹಾಗೂ ಹಳೆ ಲೈಸೆನ್ಸ್ ರಿನೀವಲ್ಗೆ ಪಾಲಿಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸದ್ಯ, ಸ್ಥಳದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಕಾಮಗಾರಿ ತನಿಖೆಗೆ ರಚಿಸಿದ್ದ ಎಸ್ಐಟಿ ಹಿಂಪಡೆದ ರಾಜ್ಯ ಸರ್ಕಾರ
ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಲಯಗಳಲ್ಲಿ ಇರುವ ಅನಧಿಕೃತ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರಹಾಕುತ್ತಿದ್ದು, ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಇದೀಗ ದಿಢೀರ್ ಬಂದು ಅಂಗಡಿಗಳನ್ನ ತೆರವು ಮಾಡುತ್ತಿದ್ದಾರೆ. ಇದೇ ವ್ಯಾಪರವನ್ನ ನಂಬಿಕೊಂಡು ನಮ್ಮ ಜೀವನ ನಡೆಯುತ್ತಿದೆ. ದಿಢೀರ್ ಅಂಗಡಿ ತೆರವು ಮಾಡಿದರೆ ಜೀವನ ನಡೆಯೋದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ