ಸೇನೆ ಹೆಸರಿನಲ್ಲಿ ನಕಲಿ ನೇಮಕಾತಿ; ಹಣ ಪಡೆದು ಅಪಾಯಿಂಟ್ಮೆಂಟ್ ಆರ್ಡರ್ ನೀಡಿ ವಂಚನೆ
ದೇಶದ ಸೇನೆಗೆ ಸೇರಬೇಕು, ತಾಯಿ ಭಾರತ ಮಾತೆಯ ಸೇವೆ ಮಾಡ್ಬೇಕು ಅನ್ನೊದು ಸಾಕಷ್ಟು ಜನರ ಕನಸು. ಆದರೆ ಈ ಕನಸು ಹೊತ್ತು ಸೇನೆಗೆ ಸೇರಲು ಮುಂದಾಗಿದ್ದವರಿಗೆ ನಕಲಿ ನೇಮಕಾತಿ ಮಾಡಲಾಗಿದೆ. ಹಣ ಪಡೆದು ಅಪಾಯಿಂಟ್ಮೆಂಟ್ ಆರ್ಡರ್ ನೀಡಿ ವಂಚನೆ ಮಾಡಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು, ಡಿ.19: ಸೇನೆಗೆ (Indian Army) ಸೇರುವ ಆಸೆಯಲ್ಲಿ ದೇಶದ ವಿವಿಧ ಪ್ರದೇಶದಲ್ಲಿ ಅಗ್ನಿವೀರ್ ಯೋಜನೆ (Agniveer) ಹೆಸರಲ್ಲಿ ನೇಮಕಾತಿಗಳು ನಡೆದಿದೆ. ಇದಕ್ಕಾಗಿ ಒಂದಷ್ಟು ರ್ಯಾಲಿ ಹಾಗು ನೇಮಕಾತಿ ಪ್ರಕ್ರಿಯೆಗಳು ನಡೆದಿವೆ. ಇದೆಲ್ಲದಕ್ಕೆ ಭಾರತದ ಯುವ ಸಮೂಹ ಮುಂದೆ ಬಂದು ಸೇನೆ ಸೇರುತ್ತಿದ್ದಾರೆ. ಇದರ ನಡುವೆ ದೇಶದ ವಿವಿಧ ಪ್ರದೇಶದಲ್ಲಿ ಸೇನಾ ರ್ಯಾಲಿ ನಡೆದ ಸ್ಥಳದಲ್ಲೇ ಸೇನೆಗೆ ಸೇರಲು ಆಸೆ ಪಡುವವರನ್ನು ವಂಚಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಒಂದಷ್ಟು ಜನರು ಬೆಂಗಳೂರಿನ ಆಶೋಕ ನಗರದಲ್ಲಿರುವ ಭಾರತೀಯ ಸೇನೆಯ ಕಚೇರಿಗೆ ಆಗಮಿಸಿ ತಮಗೆ ಅಪಾಯಿಂಟ್ ಆಗಿದೆ ಎಂದು ಲೆಟರ್ ಸಹಿತ ಬಂದ ಘಟನೆ ನಡೆದಿದೆ.
ಫೆಬ್ರವರಿಯಲ್ಲಿ ಬಂದಿದ್ದ ಒಂದಷ್ಟು ಜನರಿಗೆ ಇದು ತಪ್ಪು, ನಾವು ಯಾವುದೇ ನೇಮಕಾತಿ ಮಾಡಿಲ್ಲ. ನಿಮಗೆ ಯಾರೋ ಮೋಸಾ ಮಾಡಿರಬಹುದು ನೋಡಿ ಎಂದು ಹೇಳಿ ಸೇನಾ ಅಧಿಕಾರಿಗಳು ವಾಪಸ್ಸು ಕಳಿಸಿದ್ದಾರೆ. ಆದರೆ ತಿಂಗಳು ಕಳೆದಂತೆ ಪದೇ ಪದೇ ಇದೇ ರೀತಿ ದೇಶದ ವಿವಿಧ ಸ್ಥಳದಿಂದ ಯುವಕರು ಆಫರ್ ಲೆಟರ್ ( ನೇಮಕಾತಿ ಪ್ರತಿ ) ಸಹಿತ ಆಗಮಿಸಿ ಕೆಲಸಕ್ಕೆ ಜಾಯಿನ್ ಆಗಲು ಮುಂದಾಗಿದ್ದಾರೆ. ಆಗ ಸೇನಾಧಿಕಾರಿಗಳು ಸಹ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅಸ್ಸಾಂ ಸೇರಿದಂತೆ ದೇಶದ ವಿವಿಧ ಕಡೆ ಸೇನಾ ರ್ಯಾಲಿ ನಡೆದ ಸಂದರ್ಭದಲ್ಲಿ ಓರ್ವ ವ್ಯಕ್ತಿ ಸೇನೆಯ ಸಮವಸ್ತ್ರ ಧರಿಸಿಕೊಂಡು ತನ್ನನ್ನು ತಾನು ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ಒಂದಷ್ಟು ಯುವಕರಿಗೆ ನಿಮಗೆಲ್ಲಾ ನೇರ ನೇಮಕಾತಿ ಮಾಡುತ್ತೆನೆ ಎಂದು ಸೇನೆಯ ಸೀಲು ಹಾಗು ಸಹಿ ಮಾಡಿ ಸೇನೆಯ ನೇಮಕಾತಿ ಪತ್ರದ ರೀತಿಯಲ್ಲಿ ನೇಮಕಾತಿ ಪತ್ರ ನೀಡಿರುವುದು ಗಮನಕ್ಕೆ ಬಂದಿದೆ. ಇಲ್ಲಿ ಕೇವಲ ಸೇನೆಗೆ ನಕಲಿ ನೇಮಕಾತಿ ಮಾಡಿ ತಲಾ ಇಪತ್ತರಿಂದ ಮೂವತ್ತು ಸಾವಿರ ಹಣ ಪಡೆದಿರುವುದು ಮಾತ್ರವಲ್ಲ. ಬದಲಾಗಿ ಭಾರತೀಯ ಸೇನೆಗೆ ಸಂಬಂಧ ಪಟ್ಟ ಸೀಲು ಹಾಗು ಸಹಿಯನ್ನು ನಕಲಿ ಮಾಡಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಬೆಳಗಾವಿ: ಅಗ್ನಿವೀರ್‌ವಾಯು 2ನೇ ಬ್ಯಾಚ್ ನಿರ್ಗಮನ ಪಥಸಂಚಲನ; 218 ಅಗ್ನಿವೀರರು ವಾಯುಪಡೆಗೆ ಸೇರ್ಪಡೆ
ಘಟನೆಯ ಗಂಭೀರತೆ ಪರಿಗಣಿಸಿ ಸೇನೆಯ ಅಧಿಕಾರಿಗಳು ಈಗ ಬೆಂಗಳೂರಿನ ಆಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ. ದೇಶದ ಬೇರೆ ಬೇರೆ ರಾಜ್ಯದಲ್ಲಿ ಈ ಕೃತ್ಯ ನಡೆಸಲಾಗಿತ್ತು. ಸಂಪೂರ್ಣ ತನಿಖೆ ಬಳಿಕ ಸತ್ಯ ಹೊರಬರಬೇಕಿದೆ. ಜೊತೆಗೆ ನಾಪತ್ತೆಯಾಗಿರುವ ನಕಲಿ ಲೆಫ್ಟಿನೆಂಟ್ ಕರ್ನಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ