ಬೆಳಗಾವಿ: ಅಗ್ನಿವೀರ್‌ವಾಯು 2ನೇ ಬ್ಯಾಚ್ ನಿರ್ಗಮನ ಪಥಸಂಚಲನ; 218 ಅಗ್ನಿವೀರರು ವಾಯುಪಡೆಗೆ ಸೇರ್ಪಡೆ
ಅಗ್ನಿವೀರ ವಾಯುವಿಗೆ ಬೆಳಗಾವಿಯ ಏರ್ಮನ್ ಟ್ರೈನಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದ ಎರಡನೇ ಬ್ಯಾಚ್ ನಿರ್ಗಮನ ಪಥಸಂಚಲನ ನಡೆದಿದ್ದು ಒಟ್ಟು 218 ಅಗ್ನಿವೀರ್‌ವಾಯು ಯುದ್ಧೇತರ ಪ್ರಶಿಕ್ಷಣಾರ್ಥಿಗಳು ಅಗ್ನಿಪಥ್ ಯೋಜನೆಯಡಿಯಲ್ಲಿ ಜೂನ್ 30, 2023 ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದಾರೆ.
ಬೆಳಗಾವಿ, ಡಿ.18: ಹೌಸ್ ಕೀಪಿಂಗ್, ಹಾಸ್ಪಿಟಾಲಿಟಿ ಸ್ಟ್ರೀಮ್‌ಗಳ ಅಗ್ನಿವೀರ್‌ವಾಯು (Agniveervayu) ಎರಡನೇ ಬ್ಯಾಚ್ ನಿರ್ಗಮನ ಪಥಸಂಚಲನ ಪರೇಡ್ ಶನಿವಾರ ಬೆಳಗಾವಿಯ ಏರ್ಮನ್ ಟ್ರೈನಿಂಗ್ ಸೆಂಟರ್ನಲ್ಲಿ (AIS) ನಲ್ಲಿ ನಡೆಯಿತು. ಏರ್ಮನ್ ಟ್ರೈನಿಂಗ್ ಸೆಂಟರ್ನಲ್ಲಿ 24 ವಾರಗಳ ತರಬೇತಿ ಪಡೆದ ಒಟ್ಟು 218 ಅಗ್ನಿವೀರ್‌ವಾಯು ಯುದ್ಧೇತರ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿದ್ದು ಈ ಪ್ರಶಿಕ್ಷಣಾರ್ಥಿಗಳನ್ನು ಅಗ್ನಿಪಥ್ ಯೋಜನೆಯಡಿಯಲ್ಲಿ ಜೂನ್ 30, 2023 ರಂದು ಭಾರತೀಯ ವಾಯುಪಡೆಗೆ ಸೇರಿಸಲಾಗಿದೆ.
ಬೆಳಗಾವಿ ಎಟಿಎಸ್ನ ಏರ್ ಕಮಾಂಡಿಂಗ್ ಆಫೀಸರ್ ಎಸ್ ಶ್ರೀಧರ್ ವಿಎಂ ಅವರು ನಿರ್ಗಮನ ಪಥಸಂಚಲನ ಪರೇಡ್ನ ಪರಿಶೀಲನಾ ಅಧಿಕಾರಿಯಾಗಿದ್ದು ಉತ್ತಮ ಗುಣಮಟ್ಟದ ಡ್ರಿಲ್‌ಗಾಗಿ ಪ್ರಶಿಕ್ಷಣಾರ್ಥಿಗಳನ್ನು ಅಭಿನಂದಿಸಿದರು. ಹಾಗೂ ಆರು ತಿಂಗಳ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಈ ಹಿಂದೆ ಭಾರತೀಯ ವಾಯುಪಡೆಯ ಅಗ್ನಿವೀರ ವಾಯುವಿಗೆ ಬೆಳಗಾವಿಯ ಏರ್ಮನ್ ಟ್ರೈನಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದ 153 ಜನ ಯುವತಿಯರ ಮೊದಲ ಬ್ಯಾಚ್ ಡಿ.02ರಂದು ನಿರ್ಗಮನ ಪಥಸಂಚಲನ ನಡೆಸಿತ್ತು. 2280 ಯುವಕರು, 153 ಜನ ಯುವತಿಯರು 22 ವಾರಗಳ ಕಾಲ ಕಠಿಣ ತರಬೇತಿ ಪಡೆದು, ನಿರ್ಗಮನ ಪಥಸಂಚಲನದ ಮೂಲಕ ವಾಯುಸೇನೆಗೆ ಸೇರ್ಪಡೆಯಾಗಿದ್ದರು. ಈಗ ಎರಡನೇ ಬ್ಯಾಚ್ ನಿರ್ಗಮನ ಪಥಸಂಚಲನ ನಡೆಸಿದ್ದು 218 ಅಗ್ನಿವೀರ್‌ವಾಯು ಜನ ವಾಯು ಸೇನೆಗೆ ಸೇರಿದ್ದಾರೆ.
ಇದನ್ನೂ ಓದಿ: Mumbai: ನೌಕಾಪಡೆ ಹಾಸ್ಟೆಲ್‌ನಲ್ಲಿ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಆತ್ಮಹತ್ಯೆ
ಏನಿದು ಅಗ್ನಿವೀರ್?
ಭಾರತೀಯ ಸೇನೆಯ 3 ವಿಭಾಗಗಳಲ್ಲಿ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ)ಯಲ್ಲಿ ಸೇವೆ ಸಲ್ಲಿಸುವ ನವ ಯುವಕ-ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿಯೇ ಈ ‘ಅಗ್ನಿಪಥ್’ ಯೋಜನೆ. ಈ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2022ರ ಜೂನ್ 14 ರಂದು ಉದ್ಘಾಟನೆ ಮಾಡಿದ್ದರು. ಈ ಅಗ್ನಿಪಥ್ ಯೋಜೆನೆಯಲ್ಲಿ ನೇಮಕಗೊಂಡವರೇ ಅಗ್ನಿವೀರರು.
ಅಗ್ನಿಪಥ್ ಪ್ರವೇಶವನ್ನು ಆರಂಭದಲ್ಲಿ 4 ವರ್ಷಗಳ ಅವಧಿಗೆ ನಿಗದಿಪಡಿಸಲಾಗುತ್ತದೆ. ಈ 4 ವರ್ಷಗಳಲ್ಲಿ, ನೇಮಕಗೊಂಡವರಿಗೆ ಅಗತ್ಯವಿರುವ ಕೌಶಲ್ಯಗಳಲ್ಲಿ ಸಶಸ್ತ್ರ ಪಡೆಗಳಿಂದ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ