Kannada News Karnataka Bengaluru CM Basavaraj Bommai Clarifies for Allegations on Text Book Review Committee by Rohith Chakrathirtha
Tv9 Special: ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ; 11 ಆಕ್ಷೇಪಗಳಿಗೆ ಸ್ಪಷ್ಟನೆ, ಬೊಮ್ಮಾಯಿ ಸರ್ಕಾರದ ಮಾಸ್ಟರ್ ಸ್ಟ್ರೋಕ್
ಆಕ್ಷೇಪಗಳಿಗೆ ಸೂಕ್ತ ಸ್ಪಷ್ಟನೆ ನೀಡುವುದರೊಂದಿಗೆ ಈ ವಿವಾದಕ್ಕೆ ಮಂಗಳ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. 11 ಆರೋಪಗಳಿಗೆ ಸರ್ಕಾರ ನೀಡಿರುವ ಸ್ಪಷ್ಟನೆ ಹೀಗಿದೆ.
ರೋಹಿತ್ ಚಕ್ರತೀರ್ಥ (ಎಡಚಿತ್ರ)
Follow us on
ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ (Text Book Revision Committee) ಕುರಿತ ಆರೋಪ, ಆಕ್ಷೇಪಗಳಿಗೆ ಸೂಕ್ತ ಸ್ಪಷ್ಟನೆ ನೀಡುವುದರೊಂದಿಗೆ ಈ ವಿವಾದಕ್ಕೆ ಮಂಗಳ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆದ ಮಹತ್ವದ ಸಭೆಯಲ್ಲಿ ಸುದೀರ್ಘ ಚಿಂತನ-ಮಂಥನ ನಡೆಯಿತು. ಸಭೆಯಲ್ಲಿ ನಡೆದ ಚರ್ಚೆ ಮತ್ತು ತೆಗೆದುಕೊಂಡ ತೀರ್ಮಾನಗಳ ವಿವರ ಇಲ್ಲಿದೆ.
ವರದಿ: ಶಿವಪ್ರಸಾದ್
ಪಠ್ಯ ಪರಿಷ್ಕರಣೆ ಚರ್ಚೆಗಾಗಿ ಕರೆದಿದ್ದ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್, ಮಾಜಿ ಸಚಿವ ಸಿ.ಟಿ.ರವಿ ಹಾಗೂ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಪಠ್ಯ ಪರಿಷ್ಕರಣೆ ಕುರಿತು ನಡೆದಿರುವ ಬೆಳವಣಿಗೆಗಳ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡರು. ಸಾರ್ವಜನಿಕ ಚರ್ಚೆಯ ಸಂದರ್ಭದಲ್ಲಿ ಕೇಳಿ ಬಂದ ಆರೋಪಗಳು ಮತ್ತು ಅದಕ್ಕೆ ಸರ್ಕಾರ ಕೊಟ್ಟಿರುವ ಸ್ಪಷ್ಟನೆ ಹೀಗಿದೆ…
ಆರೋಪ: ಕುವೆಂಪು ವ್ಯಕ್ತಿತ್ವಕ್ಕೆ ಅವಮಾನ
ಸ್ಪಷ್ಟನೆ: 2014-15ರ ಪ್ರೊ ಮುಡಂಬಡಿತ್ತಾಯ ಸಮಿತಿ ಪಠ್ಯ ರಚಿಸಿದಂತೆಯೇ, ಬರಗೂರು ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದಂತೆಯೇ ಮುಂದುವರೆಸಲಾಗಿದೆ. ಹಾಗಿದ್ದೂ 2014-15 ರಿಂದ ಪಠ್ಯ ಜಾರಿಯಲ್ಲಿದ್ದರೂ ಯಾವುದೇ ವಿವಾದ ಆಗಿರಲಿಲ್ಲ.
ಆರೋಪ: ಕುವೆಂಪು ಅವರ ಬರಹ ಕೈಬಿಡಲಾಗಿದೆ
ಸ್ಪಷ್ಟನೆ: ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಕನ್ನಡ ಭಾಷಾ ಪಠ್ಯ ಪುಸ್ತಕಗಳಲ್ಲಿ ಕುವೆಂಪು ಅವರ 3 ಹೊಸ ಪದ್ಯ/ಪಾಠಗಳನ್ನು ಸೇರಿಸಿದೆ. ಒಟ್ಟು 10 ಪಾಠ / ಪದ್ಯಗಳನ್ನು ಅಳವಡಿಸಲಾಗಿದೆ.
ಆರೋಪ: ಭಗತ್ ಸಿಂಗ್ ಪಾಠವನ್ನು ಕೈಬಿಡಲಾಗಿದೆ
ಸ್ಪಷ್ಟನೆ: 2021-22 ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯ ಪುಸ್ತಕದಲ್ಲಿ ಇದ್ದ ಭಗತ್ ಸಿಂಗ್ ಪಾಠವು (ಲೇಖಕರು.ಜಿ.ರಾಮಕೃಷ್ಣ) ಪರಿಷ್ಕೃತ ಪಠ್ಯ ಪುಸ್ತಕದಲ್ಲಿಯೂ ಮುಂದುವರೆದಿದೆ.
ಆರೋಪ: ಶ್ರೀ ನಾರಾಯಣ ಗುರು ಹಾಗೂ ಪೆರಿಯಾರ್ ಪಠ್ಯ ಪುಸ್ತಕದಿಂದ ತೆಗೆದುಹಾಕಲಾಗಿದೆ
ಸ್ಪಷ್ಟನೆ: ಪರಿಷ್ಕರಣೆ ಸಂದರ್ಭದಲ್ಲಿ 10ನೇ ತರಗತಿ ಸಮಾಜ ವಿಜ್ಙಾನ ವಿಷಯದಲ್ಲಿ ವಿಷಯಾಂಶಗಳ ಹೊರೆ ಎಂಬ ದೂರುಗಳು ಇದ್ದುದರಿಂದ ಕೆಲವು ಘಟಕಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು. ಕೆಲವನ್ನು ಸಂಕ್ಷಿಪ್ತಗೊಳಿಸಿ, ಮತ್ತೆ ಕೆಲವನ್ನು ಬೇರೆ ವಿಷಯಗಳಿಗೆ ವರ್ಗಾಯಿಸಲಾಗಿದೆ. 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಶ್ರೀ ನಾರಾಯಣ ಗುರು ಹಾಗೂ ಪೆರಿಯಾರ್ ವಿಷಯಾಂಶಗಳನ್ನು ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು ಎಂಬ ಪಾಠದಲ್ಲಿ ನೀಡಲಾಗಿದೆ.
ಆರೋಪ: ಟಿಪ್ಪುಸುಲ್ತಾನ್ ಕುರಿತ ಪಾಠ ತೆಗೆಯಲಾಗಿದೆ
ಸ್ಪಷ್ಟನೆ: ಕಳೆದ ಸಾಲಿನಲ್ಲಿ 6, 7 ಮತ್ತು 10ನೇ ತರಗತಿಯ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತು ಪಠ್ಯಗಳನ್ನು ನೀಡಲಾಗಿತ್ತು. ಪರಿಷ್ಕೃತ 6, 7 ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತು ಪಾಠಗಳನ್ನು ಉಳಿಸಿಕೊಳ್ಳಲಾಗಿದೆ.
ಆರೋಪ: ಬಸವಣ್ಣನ ಕುರಿತು ನೀಡಿರುವ ಪಾಠದಲ್ಲಿ ವಿವಾದಾತ್ಮಕ ಅಂಶಗಳಿವೆ
ಸ್ಪಷ್ಟನೆ: ಹಿಂದಿನ ಪಠ್ಯಪುಸ್ತಕದಲ್ಲಿದ್ದ ಬಸವೇಶ್ವರರ ಪಾಠ ಹಾಗೂ ಈಗ ಅಳವಡಿಸಿರುವ ಪಾಠ ಎರಡರಲ್ಲಿಯೂ ‘ವೀರಶೈವ ಧರ್ಮ’ ಎಂಬ ಉಲ್ಲೇಖವಿದೆ. ಎರಡೂ ಪಠ್ಯ ಪುಸ್ತಕಗಳಲ್ಲಿಯೂ ‘ಬಸವಣ್ಣನವರು ಲಿಂಗದೀಕ್ಷೆ ಪಡೆದರು’ ಎಂಬ ಉಲ್ಲೇಖವಿದೆ.
ಆರೋಪ: ಕನ್ನಡ ಭಾಷಾ ಪಠ್ಯ ಪುಸ್ತಕದಲ್ಲಿದ್ದ ಕೆಲವು ಲೇಖಕರ ಪಾಠ / ಪದ್ಯಗಳನ್ನು ಕೈಬಿಡಲಾಗಿದೆ
ಸ್ಪಷ್ಟನೆ: ಒಂದರಿಂದ ಹತ್ತನೇ ತರಗತಿ ಭಾಷಾ ಪಠ್ಯಪುಸ್ತಕದಲ್ಲಿ 45 ಪಠ್ಯಗಳನ್ನು ಪರಿಷ್ಕರಿಸಲಾಗಿದೆ. ಪ್ರಥಮ ಭಾಷೆಯಲ್ಲಿ 33 ಪಾಠ / ಪದ್ಯ, ದ್ವೀತಿಯ ಭಾಷೆಯಲ್ಲಿ 8 ಪಾಠ / ಪದ್ಯ, ತೃತೀಯ ಭಾಷೆ 4 ಪಾಠ / ಪದ್ಯ ಬದಲಾವಣೆ ಮಾಡಲಾಗಿದೆ. ಯಥಾವತ್ತಾಗಿ ಉಳಿಸಿಕೊಂಡಿರುವ ಪಠ್ಯಗಳು. ಪ್ರಥಮ ಭಾಷೆ-165, ದ್ವೀತಿಯ ಭಾಷೆ-162, ತೃತೀಯ ಭಾಷೆ-94
ಆರೋಪ: ಪರಿಷ್ಕೃತ ಕನ್ನಡ ಪಠ್ಯ ಪುಸ್ತಕಗಳಲ್ಲಿರುವ ಕೆಲವು ಪದ್ಯ / ಗದ್ಯಗಳಿಗೆ ನೀಡಿದ ಅನುಮತಿ ಹಿಂಪಡೆಯಲಾಗಿದೆ
ಸ್ಪಷ್ಟನೆ: 1ನೇ ತರಗತಿಯಿಂದ 10ನೇ ತರಗತಿವರೆಗೆ ಪರಿಷ್ಕೃತ ಕನ್ನಡ ಭಾಷೆ ಪಠ್ಯ ಪುಸ್ತಕಗಳಲ್ಲಿರುವ ಕೆಲವು ಪದ್ಯ / ಗದ್ಯಗಳಿಗೆ ನೀಡಿದ ಅನುಮತಿ ಹಿಂಪಡೆಯುವುದಾಗಿ ಇದುವರೆಗೆ 7 ಲೇಖಕರು ಹೇಳಿದ್ದಾರೆ.
ಆರೋಪ: ಹೆಡಗೆವಾರ್ ಪಾಠವನ್ನು 10ನೇ ತರಗತಿ ಕನ್ನಡ ಭಾಷಾ ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದೆ
ಸ್ಪಷ್ಟನೆ: ‘ನಿಜವಾದ ಆದರ್ಶ ಪುರುಷ ಯಾರಾಗಬೇಕು ಎಂಬ ಸದರಿ ಪಾಠವು’ ವ್ಯಕ್ತಿಗಳ ಬದಲು ತತ್ವವನ್ನ ಗೌರವಿಸಿ ಎಂಬ ಸಂದೇಶವನ್ನ ಪಠ್ಯ ನೀಡುತ್ತಿದೆ. ಈ ಕಾರಣಕ್ಕಾಗಿ ಬರಹದ ಮೌಲ್ಯವನ್ನ ಆಧಾರಿಸಿ ಪಠ್ಯಕ್ಕೆ ಅಳವಡಿಸಲಾಗಿದೆ.
ಆರೋಪ: ಸೂಲಿಬೆಲೆ ಚಕ್ರವರ್ತಿಯ ‘ತಾಯಿ ಭಾರತೀಯ ಅಮರ ಪುತ್ರರು’ ಎಂಬ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ
ಸ್ಪಷ್ಟನೆ: ಸದರಿ ಪಾಠವು ಹುತಾತ್ಮರಾದ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಬಗ್ಗೆ ಇದೆ. ಇವರ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ ಕಥೆಯನ್ನು ಹೊಂದಿದೆ. ವಿಷಯದ ಮೌಲ್ಯದ ಕಾರಣ ಆಯ್ಕೆ ಮಾಡಿ ಅಳವಡಿಸಲಾಗಿದೆ.
ಆರೋಪ: ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದಾರೆ
ಸ್ಪಷ್ಟನೆ: 2017ರಲ್ಲಿ ನಡೆದ ಘಟನೆ ಇದಾಗಿದ್ದು, ಯಾರೋ ಅಪರಿಚಿತ ವ್ಯಕ್ತಿ ಕುವೆಂಪುರವರ ಪದ್ಯದ ದಾಟಿಯಲ್ಲಿ ಕವನವನ್ನು ಬರೆದಿದ್ದ. ಅದನ್ನು ರೋಹಿತ್ ಚಕ್ರತೀರ್ಥ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರು. ಅದು ಅವರು ಬರೆದದ್ದಲ್ಲ. ಈ ಕುರಿತು ಪೊಲೀಸ್ ತನಿಖೆ ನಡೆದು ‘ಬಿ’ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಠ್ಯಪರಿಷ್ಕರಣೆ ಸಮಿತಿ ವಿಸರ್ಜಿಸಿದ್ದಾರೆ.