PSI ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆ ಪರೀಕ್ಷಾ ರದ್ದು ವಿಚಾರ: ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದ 8 ಶಾಸಕರು
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಾರ್ಯಾಚರಣೆ ಮಂದುವರೆದಿದೆ. ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆ ಪರೀಕ್ಷಾ ರದ್ದು ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ 8 ಶಾಸಕರು ಪತ್ರ ಬರೆದಿದ್ದಾರೆ.
ಬೆಂಗಳೂರು: PSI ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆ ಪರೀಕ್ಷಾ ರದ್ದು ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ 8 ಶಾಸಕರು ಪತ್ರ ಬರೆದಿದ್ದಾರೆ. ಶಾಸಕರಾದ ಕೆ.ಎಸ್.ಲಿಂಗೇಶ್, ಪಿ.ರಾಜೀವ್, ಸುನಿಲ್ ನಾಯ್ಕ್, ರಘುಪತಿ ಭಟ್, ರಾಜಕುಮಾರ್ ತೇಲ್ಕೂರ್, ಹರೀಶ್ ಪೂಂಜಾ, ಲಾಲಾಜಿ ಮೆಂಡನ್, J.N.ಗಣೇಶ್, ರಾಘವೇಂದ್ರ ಹಿಟ್ನಾಳ್ ಪತ್ರ ಬರೆದಿದ್ದು, ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣ ಪರೀಕ್ಷೆ ರದ್ದುಪಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಬಡ ಮಕ್ಕಳಿಗೆ ಅನ್ಯಾಯವಾಗಿದೆ. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗಬೇಕು. ಜೊತಗೆ ಬಡಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ತನಿಖೆ ಪೂರ್ಣವಾಗುವ ಮೊದಲೇ PSI ಪರೀಕ್ಷೆ ರದ್ದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಪ್ರಾಮಾಣಿಕರಿಗೆ ನ್ಯಾಯ ಸಿಗಬೇಕು ಎಂದು ಗೃಹ ಸಚಿವರಿಗೆ 8 ಶಾಸಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಮನವಿ ಮಾಡಿರುವವರ ಪೈಕಿ ಬಿಜೆಪಿ ಶಾಸಕರೆ ಹೆಚ್ಚು ಎನ್ನಲಾಗುತ್ತಿದೆ.
PSI ಹಗರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಲು ಚಿಂತನೆ; ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ: ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಹಗರಣದ ವಿಚಾರಣೆ ನಡೆಸಲು ವಿಶೇಷ ಕೋರ್ಟ್ (Special Court) ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸುತ್ತದೆ ಎಂದು ಶಿವಮೊಗ್ಗದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾಹಿತಿ ನೀಡಿದ್ದಾರೆ. ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ಆಗಲೆಂಬುದು ನನ್ನ ಅಪೇಕ್ಷೆ. ತನಿಖೆ ಮುಗಿದ ಬಳಿಕ ಈ ಬಗ್ಗೆ ಯೋಚಿಸುತ್ತೇವೆ. ಸ್ಪೆಷಲ್ ಕೋರ್ಟ್ ಬಗ್ಗೆ ವಿನಂತಿ ಮಾಡುತ್ತೇನೆ, ಏನಾಗುತ್ತೆ ನೋಡೋಣ ಎಂದರು. ಹೊಸದಾಗಿ ನಡೆಯುವ ಪಿಎಸ್ಐ ಪರೀಕ್ಷೆ ಬಗ್ಗೆ ದಿನಾಂಕ ನಿಗದಿ ಆಗಿಲ್ಲ. ಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ಸ್ವಲ್ಪ ದಿನ ಕಾಯಬೇಕಿದೆ ಅಂತ ಸಚಿವರು ತಿಳಿಸಿದರು.
ಮಗನ ಪರ ಡೀಲ್ ಮಾಡಿದ್ದ ತಂದೆಯನ್ನ ಬಂಧಿಸಿದ ಸಿಐಡಿ ಪೊಲೀಸ್
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಾರ್ಯಾಚರಣೆ ಮಂದುವರಿದಿದ್ದು, ಮಗನ ಪರವಾಗಿ ಡೀಲ್ ಮಾಡಿದ್ದ ತಂದೆಯನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಂಸತ್ ನರಿಬೋಳ್ ಅನ್ನೋ ವ್ಯಕ್ತಿಯನ್ನ ಸಿಐಡಿ ಪೊಲೀಸರು ಬಂಧಿಸಿದ್ದು, ತನ್ನ ಮಗ ಸುನಿಲ್ ಪರವಾಗಿ ರುದ್ರಗೌಡ ಪಾಟೀಲ್ ಜೊತೆ ವಸಂತ್ ನರಿಬೋಳ್ ಡೀಲ್ ಮಾಡಿದ್ದ. ವಸಂತ್, ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿ. ತಿಂಗಳ ಹಿಂದೆಯೇ ಅಭ್ಯರ್ಥಿ ಸುನಿಲ್ ನರಿಬೋಳ್ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಮಗನ ಬಂದನ ನಂತರ ತಲೆಮರೆಸಿಕೊಂಡಿದ್ದ ತಂದೆ ವಂಸತ್ ನರಿಬೋಳ್ ನನ್ನ ಕಳೆದ ರಾತ್ರಿ ಬಂಧಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.