ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಕೊವಿಡ್ ಪರಿಸ್ಥಿತಿ ಪರಿಶೀಲನೆ ಬಗ್ಗೆ ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಂದಾಯ ಸಚಿವ, ಆರೋಗ್ಯ ಸಚಿವ, ಐಟಿ-ಬಿಟಿ ಸಚಿವರು, ಸಿಎಸ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಆರೋಗ್ಯ ಇಲಾಖೆ ಆಯುಕ್ತರು, ಆರ್ಥಿಕ ಇಲಾಖೆ ACS, ತಾಂತ್ರಿಕ ಸಲಹಾ ಸಮಿತಿಗೆ ಸಭೆಗೆ ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿ ಭಾನುವಾರ (ಏಪ್ರಿಲ್ 24) ಒಟ್ಟು 8263 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. 60 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ 1676 ಸಕ್ರಿಯ ಪ್ರಕರಣಗಳಿವೆ. ನಿನ್ನೆ 63 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಸರ್ಕಾರ ಸಹ ಈ ವಿದ್ಯಮಾನ ಗಮನಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್ ಇದೆ. ಅವರು ನೀಡುವ ಸಲಹೆ, ಸೂಚನೆ ಮೇರೆಗೆ ಕೊರೊನಾ ನಿಯಂತ್ರಣದ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.
ದೇಶದಲ್ಲೂ ಕೊರೊನಾ ಆತಂಕ
ದೆಹಲಿ: ಚೀನಾದಲ್ಲಿ ಕೊರೊನಾ 4ನೇ (Coronavirus 4th Wave) ಅಲೆ ಕಾಣಿಸಿಕೊಂಡ ನಂತರ ಭಾರತದಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಭಾನುವಾರ ಭಾರತದಲ್ಲಿ ಒಟ್ಟು 2,593 ಮಂದಿಯಲ್ಲಿ ಹೊಸದಾಗಿ ಸೋಂಕು ವರದಿಯಾಗಿದ್ದು, 44 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 15,873 ಸಕ್ರಿಯ ಪ್ರಕರಣಗಳಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4,30,57,545ಕ್ಕೆ ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾದಿಂದ ದೇಶದಲ್ಲಿ ಈವರೆಗೆ 5,22,193 ಮಂದಿ ಸಾವನ್ನಪ್ಪಿದ್ದಾರೆ. ದೇಶದ ಸರಾಸರಿ ಪಾಸಿಟಿವಿಟಿ ಪ್ರಮಾಣ ಶೇ 0.04 ಇದ್ದರೆ, ಚೇತರಿಕೆ ಪ್ರಮಾಣ ಶೇ 98.75 ಇದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಭಾನುವಾರ 1,083 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ಪ್ರಮಾಣ ಶೇ 4.48 ಇದೆ. ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಶನಿವಾರ 25,177 ಮಾದರಿಗಳನ್ನು ಕೊರೊನಾಗಾಗಿ ಪರೀಕ್ಷೆ ಮಾಡಲಾಗಿತ್ತು. ಫೆಬ್ರುವರಿ 10ರ ನಂತರ ಸತತವಾಗಿ ಇಳಿಕೆ ಕಂಡಿದ್ದ ಸೋಂಕಿನ ಪ್ರಮಾಣ ಕಳೆದ ಶನಿವಾರ (ಏಪ್ರಿಲ್ 23) ಒಮ್ಮೆಲೆ ಹೆಚ್ಚಾಗಿದೆ. ಶನಿವಾರ 1,94 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1000 ದಾಟುತ್ತಿದೆ.
ಇದನ್ನೂ ಓದಿ: KL Rahul: ರೋಹಿತ್ ಶರ್ಮಾರ ಸೆಂಚುರಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್
HPCL Recruitment 2022: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಲ್ಲಿದೆ ಉದ್ಯೋಗಾವಕಾಶ