ಬೆಂಗಳೂರು: ಚರಂಡಿಯಲ್ಲಿ ನೀರು ಹರಿಯದೆ ಹೊರ ಬಂದು ಬೆಂಗಳೂರಿನಲ್ಲಿ ಸಮಸ್ಯೆ ಉಂಟಾಗಿದೆ. ಅಲ್ಲಲ್ಲಿ ತಡೆಗೋಡೆ ಉರುಳಿ ಬಿದ್ದು ಸಮಸ್ಯೆಯಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ತಡೆಗೋಡೆಯಿಂದ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಲಾಗುವುದು. ಮನೆಗಳಿಗೆ ನೀರು ನುಗ್ಗದಂತೆ ತುರ್ತು ಕ್ರಮಕ್ಕೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 4 ಎಸ್ಡಿಆರ್ಎಫ್ ಬೆಂಗಳೂರಿಗೆ ಮೀಸಲಿಡಲು ಆದೇಶ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ನವೆಂಬರ್ 5) ನಡೆಸಿದ ತುರ್ತು ಸಭೆಯ ಬಳಿಕ ಹೇಳಿದರು.
ತಿಂಗಳಿಗೆ ಒಮ್ಮೆ ಅಧಿಕಾರಿಗಳು ಮಾಹಿತಿ ನೀಡಬೇಕು. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೊಣೆ ನೀಡಿದ್ದೇವೆ. ತುರ್ತು ಸಭೆ ಕರೆದ ಹಿನ್ನೆಲೆ ಯಾರಿಗೂ ಮಾಹಿತಿ ನೀಡಿಲ್ಲ. ಹೀಗಾಗಿ ಬೆಂಗಳೂರಿನ ಯಾವ ಸಚಿವರೂ ಬಂದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸಿಎಂ ಸಭೆ ನಡೆಸಿದರು. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಲಾಯಿತು.
ಈ ಬಾರಿ ಅಕ್ಟೋಬರ್, ನವೆಂಬರ್ನಲ್ಲೂ ಮಳೆ ಹೆಚ್ಚಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಬಹುದು. ಯಾವ ಪ್ರದೇಶದಲ್ಲಿ ಹೆಚ್ಚು ಸಮಸ್ಯೆ ಎಂದು ಗುರುತಿಸಿದ್ದೇವೆ. ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಹೆಚ್ಚು ಸಮಸ್ಯೆ ಆಗಿದೆ. ತುರ್ತಾಗಿ ಕ್ರಮ ಕೈಗೊಳ್ಳಲು ಈಗ 64 ರೆಸ್ಕ್ಯೂ ತಂಡಗಳಿವೆ. ಒಂದೊಂದು ತಂಡದಲ್ಲಿ 14 ಜನ ಇದ್ದಾರೆ, 30ಕ್ಕೆ ಏರಿಸಬೇಕು. ಕಂದಾಯ ಇಲಾಖೆಯಿಂದ ರೆಸ್ಕ್ಯೂ ತಂಡಕ್ಕೆ ಅನುದಾನ ನೀಡಲಾಗುವುದು ಎಂದು ಸಭೆ ಬಳಿಕ ಬೊಮ್ಮಾಯಿ ತಿಳಿಸಿದರು.
ರಾಜಕಾಲುವೆ ಹೂಳು ತುಂಬಿರುವುದೇ ಹೆಚ್ಚು ಸಮಸ್ಯೆ ಆಗಿದೆ. ಎಸ್ಡಿಆರ್ಎಫ್ ತಂಡದಲ್ಲಿ ಕೆಲ ಬದಲಾವಣೆ ಮಾಡಬೇಕು. ಬೆಂಗಳೂರಿನಲ್ಲೀಗ ಒಂದೇ ಎಸ್ಡಿಆರ್ಎಫ್ ಕಂಪನಿ ಇದೆ. ಅದನ್ನು ಬೆಂಗಳೂರಿಗೆ ಕೇಂದ್ರಿತವಾಗಿ 4 ಕಂಪನಿ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಮತ್ತು ಇಂಜಿನಿಯರ್ಗೆ ಸಿಎಂ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು. ತಡೆಗೋಡೆ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ಕೊಡದ ಹಿನ್ನೆಲೆ ಹೀಗೆ ಆದ್ರೆ ಹೇಗೆ, ಇನ್ನು ಮುಂದೆ ಇದೇ ರೀತಿ ಆದ್ರೆ ಸಹಿಸುವುದಿಲ್ಲ. ಕೂಡಲೇ ತಡೆಗೋಡೆ ಕಾಮಗಾರಿ ವಿಳಂಬ ಮಾಡದೇ ಪೂರ್ಣಗೊಳಿಸಿ. ಆರ್ಥಿಕ ಸಂಪನ್ಮೂಲಗಳನ್ನ ಒದಗಿಸುತ್ತೇವೆ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ಕೊಟ್ಟರು.
ಈ ಬಾರಿ ಮಳೆಯ ಕಾರಣ ಎಲ್ಲಲ್ಲಿ ಹಾನಿಯಾಗಿದೆ ಎನ್ನುವ ಬಗ್ಗೆ ಹಾಗೂ ಕೈಗೊಂಡಿರುವ ಕ್ರಮ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಚರಂಡಿಯಿಂದ ನೀರು ಹೊರಬರುತ್ತದೆ ಎಂದರೆ ಅದನ್ನು ಸರಿಪಡಿಸುವುದು ಅಧಿಕಾರಿಗಳ ಜವಾಬ್ದಾರಿ. ಸಮಸ್ಯೆಯನ್ನು ಅರ್ಥಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ತೀವ್ರ ಪ್ರವಾಹವಾಗುವ ಪ್ರದೇಶಗಳನ್ನು ಹಾಗೂ ಮುಖ್ಯ ಚರಂಡಿಗಳಲ್ಲಿ ಸಮಸ್ಯೆ ಇರುವಲ್ಲೆಲ್ಲಾ ಗುರುತಿಸಿ ಸರಿಪಡಿಸಬೇಕು. ಚರಂಡಿಗಳ ನಿರ್ಮಾಣ ಮಾಡುವಾಗ ಅವುಗಳ ವಿನ್ಯಾಸವನ್ನು ಸೂಕ್ತವಾಗಿ ಮಾಡಬೇಕು. ರಾಜಕಾಲುವೆಗಳ ಸುತ್ತಲು ಅಕ್ರಮ ಬಡಾವಣೆಗಳು ಬಂದಿವೆ. ಪ್ರಾರಂಭದಲ್ಲಿಯೇ ಅಕ್ರಮವನ್ನು ತಡೆಯಬೇಕಿತ್ತು. ಆದರೆ ಆಡಳಿತಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸೂಚಿಸಿದರು. ತೀವ್ರವಾಗಿ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿಯಾದರೂ ತಕ್ಷಣವೇ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಪ್ರತಿ 50 ಮೀಟರ್‍ಗಳಿಗೆ ರೀಚಾರ್ಚಿಂಗ್ ಪಿಟ್ಸ್ ಅಗತ್ಯವಿದೆ. ಪ್ರಾಯೋಗಿಕವಾಗಿ ಈ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮೊದಲು ಕಾರ್ಯಗತಗೊಳಿಸಲು ಸೂಚನೆ ನೀಡಿದರು.
ಮಾಹಿತಿ ಸಲ್ಲಿಸಿ
ಬೆಂಗಳೂರಿನಲ್ಲಿನ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುವ ಪ್ರದೇಶಗಳನ್ನು ವಲಯವಾರು ವಿಭಜಿಸಿ, ತಗ್ಗು ಪ್ರದೇಶಗಳ ಪಟ್ಟಿ ನೀಡಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ನೀರು ನುಗ್ಗಲು ಕಾರಣಗಳೇನು ಎಂದು ಗುರುತಿಸಿ, ಅದನ್ನು ತಡೆಯಲು ಅಲ್ಪಾವಧಿ ಕ್ರಮ ಹಾಗೂ ದೀರ್ಘಾವಧಿ ಕ್ರಮಗಳೇನು ಎಂದು ಪಟ್ಟಿ ಮಾಡಲು ಸೂಚಿಸಿದರು.
ಒಳಚರಂಡಿಗಳ ಪೈಕಿ ಎಲ್ಲಿ ತೀವ್ರ ಸಮಸ್ಯೆ ಇದೆ ಅವುಗಳನ್ನು ಗುರುತಿಸಿ, ಎಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಅಂಥ ಎಷ್ಟು ಸ್ಥಳಗಳಿವೆ ಅವುಗಳನ್ನು ಗುರುತಿಸಲು ಪಟ್ಟಿ ಮಾಡಬೇಕು. ಸಮಗ್ರ ವರದಿಯನ್ನು ತಯಾರಿಸಿ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರಬೇಕು ಎಂದು ಸೂಚಿಸಿದರು. ಮಳೆಯಾದ ಸಂದರ್ಭದಲ್ಲಿ ಹಾನಿಯಾಗಲು ಎರಡು ಪ್ರಮುಖ ಕಾರಣಗಳೆಂದರೆ, ತಗ್ಗಿನ ಪ್ರದೇಶ ಹಾಗೂ ತಡೆಗೋಡೆಗಳಲ್ಲಿಲ್ಲದಿರುವುದು. ಆದ್ದರಿಂದ ಸೂಕ್ತ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.
ಸಮರೋಪಾದಿಯಲ್ಲಿ ಹೂಳು ತೆಗೆಯಿರಿ
ಸಮರೋಪಾದಿಯಲ್ಲಿ ಒಳಚರಂಡಿಗಳ ಹೂಳು ತೆಗೆಯುವ ಕೆಲಸ ಕೈಗೊಳ್ಳಲು ಸೂಚನೆ ನೀಡಿದ ಮುಖ್ಯಮಂತ್ರಿಗಳು ಒಟ್ಟು 842 ಕಿಮಿ ಪೈಕಿ 389 ಕಿ.ಮೀ ತಡೆಗೋಡೆ ನಿರ್ಮಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ 75 ಕಿ.ಮೀ ತಡೆಗೋಡೆ ಈಗಾಗಲೇ ನಿರ್ಮಿಸಲಾಗಿದ್ದು, ಬಾಕಿ 15 ಕಿ.ಮೀ ಗೆ ತಡೆಗೋಡೆ ನಿರ್ಮಿಸಬೇಕಿದೆ. 50 ಕಿ.ಮೀ ಹಳೆ ತಡೆಗೋಡೆಗಳ ಪುನರ್ ನಿರ್ಮಾಣ ಕಾರ್ಯವೂ ಚುರುಕುಗೊಳ್ಳಬೇಕು ಎಂದರು.
ತಂಡಗಳ ನಿಯೋಜನೆ
ಪ್ರಸ್ತುತ 64 ರಕ್ಷಣಾ ತಂಡಗಳಿದ್ದು, ಪ್ರತಿ ತಂಡದಲ್ಲಿ 15 ಜನರಿದ್ದು, ಸಿಬ್ಬಂದಿ ಸಂಖ್ಯೆಯನ್ನು ಕನಿಷ್ಠ 30 ಕ್ಕೆ ಹೆಚ್ಚಿಸಬೇಕು. ಅವರನ್ನು ತಕ್ಷಣವೇ ನಿಯೋಜಿಸಲು ಸೂಚನೆ ನೀಡಿದರು. ಬಿಬಿಎಂಪಿ ವತಿಯಿಂದ ಪ್ರತಿ ತಂಡದಲ್ಲಿ ಮಾನವ ಸಂಪನ್ಮೂಲ ಹಾಗೂ ಉಪಕರಣಗಳನ್ನು ಹೆಚ್ಚಿಸಲು ಸೂಚಿಸಿದರು. ಬೆಂಗಳೂರಿಗೆ ಪ್ರತ್ಯೇಕ ಎಸ್.ಡಿ.ಆರ್.ಎಫ್ ತಂಡಗಳನ್ನು ನಾಲ್ಕು ವಲಯಗಳಲ್ಲಿಯೂ ಮೀಸಲಿರಿಸಲು ಸೂಚಿಸಿದ ಮುಖ್ಯಮಂತ್ರಿಗಳು, ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಲು ಹಾಗೂ ಅಗತ್ಯವಿರುವ ಉಪಕರಣಗಳನ್ನೂ ಖರೀದಿಸಲು ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದರು. ನಾಗರಿಕಾ ರಕ್ಷಣಾ ಹಾಗೂ 500 ಹೋಮ್ ಗಾರ್ಡ್‍ಗಳು, ಸ್ವಯಂಸೇವಕರ ಸೇವೆಯನ್ನೂ ಪಡೆಯಲು ತಿಳಿಸಿದರು.
ಅನುದಾನ
ಬಿಬಿಎಂಪಿ ಮತ್ತು ಎನ್‍ಡಿಆರ್‍ಎಫ್ ವತಿಯಿಂದ ಕೈಗೊಳ್ಳುವ ತುರ್ತು ರಕ್ಷಣೆ ಮತ್ತು ಪರಿಹಾರಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದ್ದು, ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ಎಸ್.ಟಿ.ಪಿ ಗಳು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಸಾಮಥ್ರ್ಯವನ್ನು ಹೆಚ್ಚಿಸಲು ಸೂಚಿಸಿದರು. ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್.ಡಿ.ಆರ್.ಎಫ್ ತಂಡಗಳು ತುರ್ತಾಗಿ ಸ್ಥಳಕ್ಕೆ ತೆರಳಬೇಕು ಎಂದು ಸೂಚಿಸಿದರು.
ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರು ಹಾಗೂ ವಲಯ ಆಯುಕ್ತರು ಸಭೆ ನಡೆಸಿ ಸಮಸ್ಯೆಗಳನ್ನು ನನಗೆ ವರದಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ರಸ್ತೆಗಳನ್ನು ಚಾಲನಾಸ್ನೇಹಿಯಾಗುವಂತೆ ಮಾಡಲು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಸಭೆಗಳಲ್ಲಿ ಕೈಗೊಳ್ಳುವ ನಿರ್ಧಾರಗಳು ತಳಮಟ್ಟದವರೆಗೂ ಹೋಗಬೇಕು. ಜೂನಿಯರ್ ಇಂಜಿನಿಯರ್‍ಗಳನ್ನು ಒಳಗೊಂಡ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಚಿವ ಡಾ. ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ: ಮನೋಜ್ ರಾಜನ್, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.
ತಳಹಂತಕ್ಕೆ ಸರ್ಕಾರದ ಸೂಚನೆ ತಲುಪುತ್ತಿಲ್ಲ. ಕೇವಲ ಇಂಜಿನಿಯರ್ಗಳಿಗೆ ಹೇಳಿ ಸುಮ್ಮನಾದರೆ ಸಾಲೋದಿಲ್ಲ. ವಾರ್ಡ್ ಮಟ್ಟದ ಎಲ್ಲ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಕೆಲಸ ಮಾಡಿಸಿ ಎಂದು ಸಿಎಂ ಹೇಳಿದರು. ಬಿಬಿಎಂಪಿ ಆಯುಕ್ತ ಗೌರವ ಗುಪ್ತಾಗೆ ಕೂಡ ಸಿಎಂ ತರಾಟೆ ತೆಗೆದುಕೊಂಡರು. ಬೆಂಗಳೂರಿನಲ್ಲಿ ಮಳೆ ಹಾನಿ ಬಗ್ಗೆ ಸಿಎಂ ಸಭೆಗೆ ಸಚಿವರು ಗೈರು ಹಾಜರಾಗಿದ್ದರು. ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಸಭೆಗೆ ಗೈರಾಗಿದ್ದರು.
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಇದನ್ನೂ ಓದಿ: ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್
Published On - 4:05 pm, Fri, 5 November 21