ಅಮಿತ್ ಶಾ ದೆಹಲಿ ಹೋದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ -ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವನ್ನು ಅಮಿತ್ ಶಾ ದೆಹಲಿ ಹೋದ ಬಳಿಕ ಮಾತಾಡುತ್ತೇವೆ ಎಂದಿದ್ದಾರೆ. ಅಮಿತ್ ಶಾ ನಿರ್ಧಾರ ಹೊರಬಂದ ನಂತರ ತೀರ್ಮಾನವಾಗಲಿದೆ. -ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರೋವರೆಗೂ ಸಂಪುಟ ಸರ್ಜರಿ ಬಗ್ಗೆ ಅಷ್ಟು ಚರ್ಚೆ ಇರಲಿಲ್ಲ. ಸಿಎಂ ಬೊಮ್ಮಾಯಿ ಕೂಡ ಟೈಂ ಸಿಕ್ಕರೆ ಅಮಿತ್ ಶಾ ಅವ್ರ ಜೊತೆ ಸಂಪುಟ ಸರ್ಜರಿ ಬಗ್ಗೆ ಮಾತಾಡ್ತೀನಿ ಅಂತ ಹೇಳಿಕೊಂಡಿದ್ದರು. ಆದ್ರೆ ಅಮಿತ್ ಶಾ ಬೆಂಗಳೂರಿಗೆ ಬಂದಿಳಿದಲ್ಲಿಂದಲೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಚರ್ಚೆಗಳು ಶುರುವಾಗಿವೆ. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಿಂದ ವಾಪಸ್ ಬಂದ ಬಳಿಕವೇ ಸಂಪುಟ ಸರ್ಜರಿ ನಡೆಯಲಿದೆ ಎನ್ನಲಾಗಿದೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ಹಿನ್ನೆಲೆ ಈ ಸಮಯದಲ್ಲಿ ಅಸಮಾಧಾನ ಸ್ಫೋಟವಾಗದಂತೆ ನೋಡಿಕೊಳ್ಳಬೇಕು. ಈ ಕಾರಣಕ್ಕಾಗಿ ಮೋದಿಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತೆ ಎನ್ನಲಾಗಿದೆ. ವಿದೇಶ ಪ್ರವಾಸದಿಂದ ಪ್ರಧಾನಿ ವಾಪಾಸಾದ ಬಳಿಕ ರಾಜ್ಯದ ಬೆಳವಣಿಗೆ ಬಗ್ಗೆ ಚರ್ಚೆ ನಡೆಯಲಿದೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿನ ಪಕ್ಷದ ನಿರ್ಧಾರ ಪ್ರಧಾನಿ ಮೋದಿ ಜೊತೆಯೇ ಚರ್ಚಿಸಿ ತೆಗೆದುಕೊಳ್ಳಬೇಕಿರುವ ಕಾರಣ ಮೇ 6 ರ ಬಳಿಕವೇ ಚಿತ್ರಣ ಹೊರ ಬೀಳಲಿದೆ. ಮೇ 5 ರ ರಾತ್ರಿ ವಿದೇಶದಿಂದ ಪ್ರಧಾನಿ ಮೋದಿ ವಾಪಾಸಾಗಲಿದ್ದಾರೆ. ಮೇ 6 ರ ಬಳಿಕ ಅಮಿತ್ ಷಾ, ಜೆ.ಪಿ. ನಡ್ಡಾ ಮತ್ತು ಬಿ.ಎಲ್. ಸಂತೋಷ್ ಜೊತೆ ಮೋದಿ ಚಿರ್ಚಿಸಿ ಸಂಪುಟ ರಚನೆ ಮಾಡಲಿದ್ದಾರೆ. ಸದ್ಯಕ್ಕೆ ಬಿಜೆಪಿ ಹೈಕಮಾಂಡ್ ಎರಡು ಪ್ಲಾನ್ ಇಟ್ಟುಕೊಂಡಿದೆ. ಒಂದು ಸಿಎಂ ಬದಲಾವಣೆ ಸಹಿತ ಸಂಪುಟ ಪುನಾರಚನೆ. ಇನ್ನೊಂದು ಸಿಎಂ ಬದಲಾವಣೆ ಇಲ್ಲದೇ ಸಂಪುಟ ಪುನಾರಚನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಈ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವನ್ನು ಅಮಿತ್ ಶಾ ದೆಹಲಿ ಹೋದ ಬಳಿಕ ಮಾತಾಡುತ್ತೇವೆ ಎಂದಿದ್ದಾರೆ. ಅಮಿತ್ ಶಾ ನಿರ್ಧಾರ ಹೊರಬಂದ ನಂತರ ತೀರ್ಮಾನವಾಗಲಿದೆ. ಮುಂದಿನ ವಾರ ಡಿಸಿಗಳು, ಜಿ.ಪಂ. ಸಿಇಒಗಳ ಪ್ರತ್ಯೇಕ ಸಭೆ ಇದೆ. ವಿವಿಧ ಇಲಾಖೆಗಳ ಅಭಿವೃದ್ಧಿ, ಅನುಷ್ಠಾನದ ಬಗ್ಗೆ ಚರ್ಚಿಸುತ್ತೇವೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಗದಗ ನಗರದಲ್ಲಿ ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಶಾಸಕ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಶ್ರೀರಾಮುಲು, ಸಿಎಂ ಬಸವರಾಜ ಬೊಮ್ಮಾಯಿ ಜನಪರ ಕೆಲಸ ಮಾಡುತ್ತಿದ್ದಾರೆ. 2023ರಲ್ಲಿ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗ್ತೇವೆ ಎಂದರು.
ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಕೊಡಿಸುವ ಪ್ರಯತ್ನ ಇಷ್ಟಕ್ಕೂ ಬಿಜೆಪಿಯ ಉನ್ನತ ಮೂಲಗಳು ಹೇಳುವ ಪ್ರಕಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಈ ಪ್ರಕ್ರಿಯೆ ಆದಷ್ಟು ಬೇಗನೆ ಮುಗಿಸುವ ನಿಟ್ಟಿನಲ್ಲೇ ಸಿಎಂ ಮೇಲೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಪರೋಕ್ಷ ಒತ್ತಡ ಹೇರುವ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲಾ ಒಂದು ಕಡೆ ನಡೀತಿದ್ರೆ, ಮತ್ತೊಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಪುಟಕ್ಕೆ ಸರ್ಜರಿ ಮಾಡೋ ವಿಚಾರದಲ್ಲಿ ಕೇಂದ್ರ ನಾಯಕರು ತೀರ್ಮಾನ ಕೈಗೊಳ್ತಾರೆ. ಪ್ರಧಾನಮಂತ್ರಿಯವರು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಳ್ತಾರೆ ಎಂದಿದ್ದಾರೆ.
ಇದರ ನಡುವೆ ಬಿಜೆಪಿಯಲ್ಲಿ ಸಿಎಂ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆದ್ರೆ ಬಿಜೆಪಿ ನಾಯಕರು ಮಾತ್ರ ಸಿಎಂ ರಕ್ಷಣೆಗೆ ಬಂದಿದ್ದಾರೆ.. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ.. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಹಿಂದೆ ಯಡಿಯೂರಪ್ಪ ಬದಲಾವಣೆಗೂ ಮುಂಚಿತವಾಗಿ ಹೇಳಿದ್ದ ಹಳೇ ಡೈಲಾಗನ್ನೇ ಸ್ವಲ್ಪ ಮಾರ್ಪಾಡುಮಾಡಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
Published On - 11:30 am, Wed, 4 May 22