ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ! ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೊಷಣೆ, ಯಾಕೆ ಹೀಗೆಂದರು?

ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ! ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೊಷಣೆ, ಯಾಕೆ ಹೀಗೆಂದರು?
ಸಿಎಂ ಬಸವರಾಜ ಬೊಮ್ಮಾಯಿ
Updated By: ಆಯೇಷಾ ಬಾನು

Updated on: May 10, 2022 | 3:09 PM

ದೆಹಲಿ: ನವೆಂಬರ್ 2, 3, 4ರಂದು ಬಂಡವಾಳ ಹೂಡಿಕೆದಾರರ ಸಮಾವೇಶ ಇದೆ. ಈ ಹಿನ್ನೆಲೆಯಲ್ಲಿ ನವದೆಹಲಿಗೆ ಬಂದಿದ್ದೇನೆ. ವಿದೇಶಗಳ ರಾಯಭಾರಿಗಳನ್ನು ಭೇಟಿಯಾಗಿ ಆಹ್ವಾನ ನೀಡಿದ್ದೇವೆ. ಕೈಗಾರಿಕಾ ಇಲಾಖೆ ಸಚಿವರ ಒತ್ತಾಸೆಯಂತೆ ದೆಹಲಿಗೆ ಬಂದಿದ್ದೇವೆ. ನಮ್ಮ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾ ದೆಹಲಿಯಲ್ಲಿ ಇಲ್ಲ. ಹಾಗಾಗಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡುತ್ತ, ಸಚಿವ ಅಶ್ವತ್ಥ್ ನಾರಾಯಣ, ಎಂ.ಬಿ.ಪಾಟೀಲ್​ ಭೇಟಿ ಬಗ್ಗೆ ಗೊತ್ತಿಲ್ಲ. ಸಹಜವಾಗಿ ಎಲ್ಲರೂ ಎಲ್ಲರನ್ನೂ ಭೇಟಿಯಾಗುತ್ತಿರುತ್ತಾರೆ. ಅಶ್ವತ್ಥ್, ಎಂ.ಬಿ.ಪಾಟೀಲ್​ ಭೇಟಿಗೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ. ಬೆಂಗಳೂರಿಗೆ ತೆರಳಿದ ನಂತರ ಅಶ್ವತ್ಥ್​ ನಾರಾಯಣ ಜತೆ ಚರ್ಚೆ ನಡೆಸುತ್ತೇನೆ. ಅಶ್ವತ್ಥ್ ನಾರಾಯಣ ರಕ್ಷಣೆಗಾಗಿ ಎಂ.ಬಿ.ಪಾಟೀಲ್​ ಭೇಟಿ ಆರೋಪ ಡಿಕೆಶಿ, ಎಂ.ಬಿ.ಪಾಟೀಲ್ ವಿಚಾರ ಕಾಂಗ್ರೆಸ್​ಗೆ ಸಂಬಂಧಿಸಿದ್ದು. ವಿಧಾನಪರಿಷತ್ ಚುನಾವಣೆ ಎದುರಿಸಲು ನಮ್ಮ ಪಕ್ಷ ಸಿದ್ಧವಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿದ್ದಾರೆ. ಬಸವರಾಜ್‌ ಬೊಮ್ಮಾಯಿ ಅಲ್ಲಿ ರಾಜ್ಯದ ಜಾಗತಿಕ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಪ್ರವಾಸದ ಅಧಿಕೃತ ಉದ್ದೇಶ ಏನೇ ಇದ್ದರೂ ಸಹಜವಾಗಿಯೇ ಬಿಜೆಪಿಯ ಶಾಸಕರು ಮತ್ತೊಮ್ಮೆ ದೆಹಲಿ ಕಡೆಗೆ ನೋಡುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಎರಡೆರಡು ಬಾರಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿರುವ ಮಾತು. ಮೊನ್ನೆ ಶನಿವಾರ ದುಬೈಗೆ ತೆರಳೋದಿಕ್ಕೂ ಮೊದಲು ಮಾತಾಡಿದ್ದ ಬಿಎಸ್‌ವೈ, ಇನ್ನೆರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎಂದಿದ್ದರು.

ಬಿಎಸ್‌ವೈ ಆಡಿರುವ ಈ ಮಾತುಗಳು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರ ಪಾಲಿಗೆ ಹೊಸ ಭರವಸೆಯಾಗಿತ್ತು. ಯಾವಾಗ ಸಿಎಂ ಬಸವರಾಜ್‌ ಬೊಮ್ಮಾಯಿ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಏನಿದ್ದರೂ ಹೈಕಮಾಂಡ್‌ಗೆ ಬಿಟ್ಟಿದ್ದು. ಅರುಣ್‌ ಸಿಂಗ್‌ ದೆಹಲಿಗೆ ಹೋಗಿ ಮಾತಾಡ್ತೀನಿ ಅಂದಿದ್ದಾರೆ. ಅವರು ಕರೆದಾಗ ನಾನು ದೆಹಲಿಗೆ ಹೋಗ್ತೀನಿ ಅಂತೆಲ್ಲಾ ಹೇಳ್ತಾ ಇದ್ದರೂ ವಾಸ್ತವವಾಗಿ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ಉತ್ಸಾಹ ಹೊಂದಿಲ್ಲ ಎಂಬ ಮಾತು ಬಲವಾಗಿ ಬಿಜೆಪಿ ಪಾಳಯದಿಂದಲೇ ಕೇಳಿಬರುತ್ತಿದೆ. ಹೀಗಾಗಿಯೇ ತಮ್ಮ ಪುತ್ರನಿಗೂ ಸಚಿವಗಿರಿ ಕೊಡಿಸುವ ಕನಸು ಹೊಂದಿರುವ ಯಡಿಯೂರಪ್ಪ ಆ ನಿಟ್ಟಿನಲ್ಲಿ ಕೆಲಸ ಚುರುಕುಗೊಳಿಸಿರುವುದನ್ನು ಸಂಪುಟ ಸರ್ಜರಿಯ ಸುಳಿವು ಕೊಡುವ ಮೂಲಕ ತೋರಿಸಿದ್ದರು. ಹಾಗಿದ್ದರೂ ಬೊಮ್ಮಾಯಿ ಈಗಲೂ ಸಂಪುಟ ವಿಸ್ತರಣೆ ಏನಿದ್ದರೂ ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ ಅಂತಷ್ಟೇ ಹೇಳುತ್ತಿದ್ದಾರೆ.

ಸದ್ಯ ದೆಹಲಿಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸುಖ್ ಮಾಂಡವೀಯ ಭೇಟಿಯಾದ ಸಿಎಂ ಬೊಮ್ಮಾಯಿ ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಹಾಗೂ ನಮ್ಮ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾ ದೆಹಲಿಯಲ್ಲಿ ಇಲ್ಲ. ಹಾಗಾಗಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:23 pm, Tue, 10 May 22