ಬೆಂಗಳೂರು: ನಗರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ರಸ್ತೆಗಳು ಕೆರೆಯಂತಾಗಿವೆ. ಮನೆಗಳಿಗೆಲ್ಲ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಳೆ ಹಾನಿ ವೀಕ್ಷಣೆಗೆ ಮಾಡಿದ್ದಾರೆ. ಹೆಚ್‌ಎಎಲ್‌ನಿಂದ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಮಾರತ್‌ಹಳ್ಳಿಯಲ್ಲಿ ಮಳೆ ಹಾನಿ ಬಗ್ಗೆ ಪರಿಶೀಲಿಸಿದ್ದಾರೆ. ಇನ್ನು ಮಳೆ ಹಾನಿ ವೀಕ್ಷಣೆಗೆ ಸಚಿವರಾದ ಅಶ್ವತ್ಥ್ ನಾರಾಯಣ, ಭೈರತಿ ಬಸವರಾಜ್, ಶಾಸಕ ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಾಥ್ ನೀಡಿದ್ರು.
ಸಿಎಂ ಬೊಮ್ಮಾಯಿ ಮಾರತಹಳ್ಳಿ ಮುಖ್ಯರಸ್ತೆಯ ಡಿಎನ್‍ಎ ಅಪಾರ್ಟ್‍ಮೆಂಟ್, ವರ್ತೂರು ಕೊಡಿ ಬಳಿ ಇರುವ ಕೊಲಂಬಿಯಾ ಆಸ್ಪ್ರತೆ, ಶಾಂತಿನಿಕೇತನ ಲೇಔಟ್ ಬಳಿ ಇರುವ ಆರ್.ಪಿ. ಲೇಔಟ್, ಇಕೋ ಸ್ಪೇಸ್ ಪ್ರದೇಶದ ಪ್ರವಾಹ ಪ್ರದೇಶ, ಕರಿಯಮ್ಮನ ಅಗ್ರಹಾರ ಲೇಔಟ್‍ನ ಹಿಂಭಾಗದ ಸಾಕ್ರ ಆಸ್ಪತ್ರೆ, ಎಸ್.ಬಿ.ಆರ್. ಪ್ಯಾಲೇಸ್ ಚೌಲ್ಟ್ರಿ ಸೇರಿದಂತೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ರು.
ರಾಜಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ
ಇನ್ನು ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಳೆದ ಒಂದು ವಾರದಿಂದ ಭಾರಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಈ ಭಾಗದಲ್ಲಿ ಹೆಚ್ಚು ಕೆರೆಗಳು ಇರುವುದರಿಂದ ಅಪಾರ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ ರಾಜಕಾಲುವೆಗಳಿಗೆ ಹರಿದಿದೆ. ಕೆರೆ ನೀರು, ಮಳೆ ನೀರು ಸೇರಿ ರಾಜಕಾಲುವೆ ಉಕ್ಕಿ ಹರಿದು ಸಮಸ್ಯೆ ಎದುರಾಗಿದ್ದು ರಾಜಕಾಲುವೆ ಒತ್ತುವರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ರಾಜಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಒತ್ತಡಕ್ಕೆ ಮಣಿಯದೆ ತೆರವು ಗೊಳಿಸಲು ಸೂಚಿಸಿದ್ದೇನೆ. ಎಷ್ಟೇ ಪ್ರಭಾವಿಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಒತ್ತುವರಿ ತೆರವು ಬಳಿಕ ರಾಜಾ ಕಾಲುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕಡೆ ಎಸ್ಟಿಮೇಟ್ ಮಾಡಿ ಶಾಶ್ವತ ರಾಜಾ ಕಾಲುವೆಗಳ ನಿರ್ಮಾಣ ಪ್ರಾಶಸ್ತ್ಯದಲ್ಲಿ ಮಾಡ್ತೇವೆ ಎಂದರು.
ಮಳೆ ಬಂದಾಗ ಸಿಎಂ ವೀಕ್ಷಣೆಗೆ ಬರುತ್ತಾರೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಮಾತಾಡುವುದಿಲ್ಲ. ಆಡಳಿತಾತ್ಮಕ ವಿಚಾರಗಳ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ. ರಾಜಕಾಲುವೆ ದುರಸ್ತಿಗೆ 1500 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಮಳೆ ನಿಂತ ನಂತರ ಕೆಲಸ ಆರಂಭಿಸುತ್ತೇವೆ. ಕಳೆದ ಬಾರಿ ನಗರಪ್ರದಕ್ಷಿಣೆ ವೇಳೆ ಹೇಳಿದ ಕೆಲಸ ಆರಂಭಿಸಿದ್ದೇವೆ. ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್, ಸಾಯಿಲೇಔಟ್ನಲ್ಲಿ ಸಮಸ್ಯೆ ಆಗಿದೆ. ಅಲ್ಲೆಲ್ಲ ರೈಲ್ವೆ ಹಳಿ ಇರುವುದರಿಂದ ಸಮಸ್ಯೆ ಬಗೆಹರಿದಿಲ್ಲವೆಂದರು.
ಹಿಂದಿನ ಸರ್ಕಾರಗಳ ಭ್ರಷ್ಟಾಚಾರದಿಂದ ಈ ರೀತಿ ಸಮಸ್ಯೆ ಆಗುತ್ತಿದೆ
ಬೆಂಗಳೂರಿನಲ್ಲಿ ಮಳೆಯಿಂದ ಪದೇಪದೆ ಅವಾಂತರ ಸಂಭವಿಸುತ್ತಿದೆ ಎಂಬ ವಿಚಾರಕ್ಕೆ ಉತ್ತರಿಸಿದ ಸಿಎಂ ಹಿಂದಿನ ಸರ್ಕಾರಗಳ ಭ್ರಷ್ಟಾಚಾರದಿಂದ ಈ ರೀತಿ ಆಗುತ್ತಿದೆ ಎಂದು ಬೆಳ್ಳಂದೂರು ಬಳಿಯ SBR ಕನ್ವೆನ್ಷನ್ ಹಾಲ್‌ನಲ್ಲಿ ತಿಳಿಸಿದರು. ಈ ಹಿಂದೆ ಕಳಪೆ ಕಾಮಗಾರಿ ಮಾಡಿದ್ದಕ್ಕೆ ನೀರು ನುಗ್ಗುತ್ತಿದೆ. 10-15 ವರ್ಷ ಹಿಂದೆಯೇ ದೊಡ್ಡ ದೊಡ್ಡ ಬಿಲ್ಡಿಂಗ್ ನಿರ್ಮಾಣ ಮಾಡಲಾಗಿದೆ. ಯಾರ ಕುಮ್ಮಕ್ಕಿನಿಂದ ಬಿಲ್ಡರ್‌ಗಳಿಗೆ ಲೈಸೆನ್ಸ್ ಕೊಡಲಾಗಿದೆ. ಲೈಸೆನ್ಸ್ ನೀಡುವ ಮುಂಚೆ ನಿಮಗೆ ಗೊತ್ತಿಲ್ಲವಾ? ಪ್ಲ್ಯಾನ್ ನೋಡಲು ಆಗಿಲ್ವಾ, ಈಗ ಬಂದು ಕಥೆ ಹೇಳುತ್ತೀರಿ. ಎನ್‌ಜಿಟಿ ನಿಯಮ ಯಾರಾದರೂ ಪಾಲನೆ ಮಾಡಿದ್ದೀರಾ? ಬೆಂಗಳೂರು ನಗರ ಯೋಜನಾ ಬದ್ಧವಾಗಿ ಬೆಳೆದಿಲ್ಲ ಎಂದು ಗರಂ ಆದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:10 pm, Thu, 1 September 22