ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯ ಪ್ರಯುಕ್ತ ಖಾದಿ ಬಟ್ಟೆ ಖರೀದಿಸಿದ್ದಾರೆ. ನಗರದ ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಎಂಪೋರಿಯಂನಲ್ಲಿ ತಲಾ ಮೂರು ಮೀಟರ್ ಅಳತೆಯ 10 ಜುಬ್ಬಾ ಪೀಸ್ಗಳನ್ನು ಸಿಎಂ ಬೊಮ್ಮಾಯಿ ಖರೀದಿಸಿದ್ದಾರೆ. ಇದೇ ವೇಳೆ ಪತ್ನಿಯವರಿಗೆ ಸೀರೆಯನ್ನೂ ಬೊಮ್ಮಾಯಿ ಖರೀದಿಸಿದ್ದಾರೆ.
ಸೀರೆ ಖರೀದಿ ವೇಳೆ ಆಗಮಿಸಿದ ಬಿ.ವೈ.ವಿಜಯೇಂದ್ರ ಹಾಗೂ ಗೋವಿಂದ ಕಾರಜೋಳರಿಗೂ ಸೀರೆ ಕೊಳ್ಳಲು ಹೇಳಿದ ಸಿಎಂ:
ಸಿಎಂ ಸೀರೆ ಖರೀದಿ ವೇಳೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರಿಗೆ ಸಿಎಂ ‘‘ಬಾರಪ್ಪಾ, ಮನೆಯವರಿಗೆ ಸೀರೆ ಖರೀದಿ ಮಾಡು’’ ಎಂದಿದ್ದಾರೆ. ಬೊಮ್ಮಾಯಿಯವರ ಮಾತನ್ನು ಕೇಳಿದ ವಿಜಯೇಂದ್ರ, ‘‘ನಮಗೊಂದು ಸೀರೆ ಕೊಡಿ’’ ಎಂದು ಹೇಳಿ ಸುಮಾರು ₹ 4,300 ಮೊತ್ತದ ಸೀರೆ ಕೊಂಡಿದ್ದಾರೆ.
ಸಚಿವರಾದ ಗೋವಿಂದ ಕಾರಜೋಳರಿಗೂ ಸೀರೆ ತೆಗೆದುಕೊಳ್ಳಿ ಎಂದು ಸಿಎಂ ನುಡಿದಿದ್ದಾರೆ. ‘‘ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ’’ ಎಂದು ಕಾರಜೋಳರು ಹೇಳಿದಾಗ, ‘‘ಈಗಲಾದ್ರೂ ಕಲಿತುಕೊಳ್ಳಿ’’ ಎಂದು ಬೊಮ್ಮಾಯಿ ತಮಾಷೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಕಟ್ಟು ಬಿದ್ದ ಸಚಿವರು, ‘‘ಇರಲಿ, ನನಗೊಂದು ಸೀರೆ ಕೊಡಿ’’ ಎಂದು ಹೇಳಿ, ಸೀರೆ ಖರೀದಿಸಿದ್ದಾರೆ. ಇದೇ ವೇಳೆ ಎಂಟಿಬಿ ನಾಗರಾಜ್ ಕೂಡ ಬಟ್ಟೆ ಖರೀದಿಸಿದ್ದಾರೆ. ಸಿಎಂ ಬೊಮ್ಮಾಯಿಯವರು ಒಟ್ಟು ₹ 16,000 ಮೊತ್ತದಷ್ಟು ಬಟ್ಟೆ ಖರೀದಿಸಿದ್ದಾರೆ.
ದಸರಾ ಉದ್ಘಾಟಕರಿಗೆ ಇಂದು ಸಿಎಂ ಬೊಮ್ಮಾಯಿ ಸೇರಿದಂತೆ ನಿಯೋಗದಿಂದ ಅಧಿಕೃತ ಆಹ್ವಾನ:
ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾ 2021ರ ಉದ್ಘಾಟಕರಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಆಹ್ವಾನಿಸಲಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಸ್.ಎಂ.ಕೃಷ್ಣಾ ನಿವಾಸಕ್ಕೆ ತೆರಳಿ, ಸಿಎಂ ನೇತೃತ್ವದ ನಿಯೋಗವು ಅವರನ್ನು ಆಹ್ವಾನಿಸಲಿದೆ. ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಮೈಸೂರು ಮೇಯರ್ ಹಾಗೂ ಜನಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:
Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು
ಅನಧಿಕೃತ ರೆಸಾರ್ಟ್ ತೆರವು ಮಾಡದಿದ್ದರೆ ನೀವೇ ಹೊಣೆ; 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್
ಕರ್ನಾಟಕದ 31ನೇ ಜಿಲ್ಲೆಯಾಗಿ ಉದಯಿಸಲಿದೆ ವಿಜಯನಗರ; ಹಂಪಿ ಪರಿಕಲ್ಪನೆಯಲ್ಲಿ ವೇದಿಕೆ ಸಿದ್ಧ
Published On - 11:35 am, Sat, 2 October 21