ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿ ರಾಜ್ಯದಲ್ಲಿ ಕಮಲ ಅರಳಿ ಇಂದಿಗೆ ಎರಡು ವರ್ಷ ತುಂಬಿದೆ. ಎರಡು ವರ್ಷದಲ್ಲಿ ಕೊರೊನಾ, ಪ್ರವಾಹ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನ ಬಿಟ್ಟುಬಿಡದೆ ಕಾಡಿತ್ತು. ಸಾಕಷ್ಟು ಸವಾಲುಗಳನ್ನ ಬಿಜೆಪಿ ಸರ್ಕಾರ ಈ ಎರಡುವ ವರ್ಷ ಎದುರಿಸಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ ತುಂಬಿದ್ದಕ್ಕೆ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಾಧನಾ ಕಾರ್ಯಕ್ರಮ ನಡೆಯಲಿದೆ.
ಕೇವಲ ಎರುಡು ವರ್ಷ ಪೂರೈಕೆಯಾಗಿದೆ ಅನ್ನೋ ಕಾರಣಕ್ಕೆ ಈ ಸಾಧನಾ ಕಾರ್ಯಕ್ರಮಕ್ಕೆ ಮಹತ್ವ ಇರ್ತಿರಲಿಲ್ಲ. ಸರ್ಕಾರದ ಸಾಧನಾ ಕಾರ್ಯಕ್ರಮ ಕೇಂದ್ರ ಬಿಂದು ಆಗೋಕೆ ಕಾರಣ ಬಿಎಸ್‌ವೈ ನಿರ್ಗಮನದ ಸುದ್ದಿ. ಸಿಎಂ ಹೇಳಿದ ಪ್ರಕಾರ ನಿನ್ನೆ ಸಿಎಂ ಕುರ್ಚಿ ಬದಲಾವಣೆ ಸಂಬಂಧ ಪಟ್ಟಂತೆ ಹೈಕಮಾಂಡ್‌ನಿಂದ ಸಂದೇಶ ಬರಬೇಕಿತ್ತು. ದೆಹಲಿ ಸಂದೇಶ ಆಧರಿಸಿ, ಇಂದಿನ ಸರ್ಕಾರದ ಸಾಧನ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸೋದಕ್ಕೆ ಸಿಎಂ ಮುಂದಾಗಿದ್ರು. ಆದ್ರೆ ದೆಹಲಿಯಿಂದ ನಿನ್ನೆ ಸಂದೇಶ ಬಂದಿಲ್ಲ.. ಹೀಗಾಗಿ ಇಂದಿನ ಸಾಧನಾ ಕಾರ್ಯಕ್ರಮ ಅಷ್ಟು ಮಹತ್ವ ಪಡೆದಿಲ್ಲ.
11 ಗಂಟೆ ಬಳಿಕ ಸಿಎಂ ಸಾಧನಾ ಕಾರ್ಯಕ್ರಮದಲ್ಲಿ ಭಾಗಿ
ಸಿಂಎ ಇಂದು ಬೆಳಗ್ಗೆ 9.30ಕ್ಕೆ ಇಂದಿರಾ ಗಾಂಧಿ ವಾರ್ ಮೆಮೋರಿಯಲ್ನಲ್ಲಿ ನಡೆಯೋ ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯೋ ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದಲ್ಲಿ ಬಿಎಸ್‌ವೈ ಭಾಗಿಯಾಗಲಿದ್ದಾರೆ. ಇಲ್ಲಿ ಮಾತನೋಡುವ ಸಿಎಂ ಕಷ್ಟದ ಸಂದರ್ಭದಲ್ಲಿ ರಾಜ್ಯದ ಜನತೆಯ ಆಶೋತ್ತರ ಈಡೇರಿಸಲು ತಾವು ಅನುಭವಿದ ಸಂಕಷ್ಟಗಳನ್ನ ರಾಜ್ಯದ ಜನತೆ ಮುಂದೆ ಬಿಚ್ಚಿಡಲಿದ್ದಾರೆ. ಹಾಗೇ ಎರಡು ವರ್ಷ ಸವಾಲುಗಳು ಮೀರಿದ ಸಾಧನಾ ಪರ್ವ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಸಂದೇಶ ಬಂದಿದ್ರೆ ವಿದಾಯ ಭಾಷಣ ಮಾಡ್ತಿದ್ರಾ?
ಈ ಮುಂಚೆಯೇ ನಿರ್ಧಾರವಾಗಿದ್ದ ಪ್ರಕಾರ ಹೈಮಾಂಡ್ ಸಂದೇಶ ನಿನ್ನೆ ಬಂದಿದ್ರೆ ಸಿಎಂ ಇಂದು ವಿದಾಯ ಭಾಷಣ ಮಾಡುತ್ತಿದ್ದರು. ಆದ್ರೆ ಆ ಸಂದೇಶ ಬಂದಿಲ್ಲ. ಹೀಗಾಗಿ ಇಂದು ಬಹುತೇಕ ತಮ್ಮ ಸರ್ಕಾರ ಎರಡು ವರ್ಷ ಮಾಡಿರೋ ಸಾಧನೆ ಬಗ್ಗೆ ಸಿಎಂ ಮಾತನಾಡಲಿದ್ದಾರೆ. ಸರ್ಕಾರ ಬಂದ ರೀತಿ, ಸಂಕಷ್ಟಗಳನ್ನ ಎದುರಿಸಿದ ರೀತಿ ಜನರ ಮುಂದೆ ಇಡಲಿದ್ದಾರೆ. ಇನ್ನು ಸಾಧನಾ ಕಾರ್ಯಕ್ರಮ ಮುಗಿದ ನಂತ್ರ ಉತ್ತರ ಕರ್ನಾಟಕದ ಮಳೆಹಾನಿ ಮಾಹಿತಿ ಪಡೆದು, ಆ ಮೂಲಕ 2 ವರ್ಷದ ಹೊಸ್ತಿಲಲ್ಲಿ ತಾನೊಬ್ಬ ಆ್ಯಕ್ಟಿವ್ ಸಿಎಂ ಅನ್ನೋದನ್ನ ಬಿಎಸ್‌ವೈ ಸಾಬೀತುಪಡಿಸಲು ಮುಂದಾದಂತೆ ಕಾಣ್ತಿದೆ.
ಮಧ್ಯಾಹ್ನ 1 ಗಂಟೆ ಬಳಿಕ ಎಲ್ಲ ಕಾರ್ಯಕ್ರಮಗಳಿಗೆ ಬ್ರೇಕ್?
ಮಧ್ಯಾಹ್ನ 1 ಗಂಟೆ ತನಕ ಸರ್ಕಾರದ ಸಾಧನಾ ಕಾರ್ಯಕ್ರಮದಲ್ಲಿ ಭಾಗಿಯಾಗೋ ಸಿಎಂ ಮಧ್ಯಾಹ್ನದ ಬಳಿಕ ಎಲ್ಲ ಕಾರ್ಯಕ್ರಮಗಳನ್ನ ಕಾಯ್ದಿರಿಸಿದ್ದಾರೆ. ಮಧ್ಯಾಹ್ನದ ಬಳಿಕ ಯಾವ ಕಾರ್ಯಕ್ರಮವೂ ನಿಗದಿಯಾಗಿಲ್ಲ. ಹೀಗಾಗಿ ಸಿಎಂ ಬಿಎಸ್‌ವೈ ಅವರ ಇಂದಿನ ನಡೆ ಮೇಲೆ ಸಾಕಷ್ಟು ಕುತೂಹಲವಿದೆ.
ಇದನ್ನೂ ಓದಿ: Next CM: ದೇಶಕ್ಕೆ ಮೋದಿ; ರಾಜ್ಯಕ್ಕೆ ಸವದಿ! ಡಿಸಿಎಂ ಲಕ್ಷ್ಮಣ ಸವದಿ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್
Published On - 7:02 am, Mon, 26 July 21