Bengaluru Rains: ಭಾರೀ ಮಳೆಗೆ ಬೆಂಗಳೂರಿನಲ್ಲಿ ಕುಸಿದು ಬಿತ್ತು ಮನೆ; ರಸ್ತೆಯಲ್ಲಿ ಮೊಣಕಾಲಿನ ತನಕ ನಿಂತ ನೀರು

ದೊಮ್ಮಲೂರಿನ ಗೌತಮ್ ಕಾಲೋನಿಯಲ್ಲಿ ಮಳೆಯ ಅಬ್ಬರಕ್ಕೆ ಸಿಲುಕಿ ಮನೆಯೊಂದು ಕುಸಿದಿದ್ದು, ಅವಘಡ ಸಂಭವಿಸುವ ವೇಳೆ ಮನೆಯೊಳಗೆ ಯಾರೂ ಇರಲಿಲ್ಲವಾದ್ದರಿಂದ ದೊಡ್ಡ ದುರಂತವೊಂದು ತಪ್ಪಿಹೋಗಿದೆ.

Bengaluru Rains: ಭಾರೀ ಮಳೆಗೆ ಬೆಂಗಳೂರಿನಲ್ಲಿ ಕುಸಿದು ಬಿತ್ತು ಮನೆ; ರಸ್ತೆಯಲ್ಲಿ ಮೊಣಕಾಲಿನ ತನಕ ನಿಂತ ನೀರು
ಬೆಂಗಳೂರು ಮಳೆ (ಸಂಗ್ರಹ ಚಿತ್ರ)
Follow us
TV9 Web
| Updated By: Skanda

Updated on: Jul 26, 2021 | 7:29 AM

ಬೆಂಗಳೂರು: ಕರ್ನಾಟಕದಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ (Karnataka Rains) ಕೊಂಚ ತಗ್ಗಿದಂತೆ ಕಂಡರೂ ಕೆಲವೆಡೆ ತನ್ನ ಆರ್ಭಟ ಮುಂದುವರೆಸುವ ಮೂಲಕ ಅನಾಹುತಕ್ಕೆ ಕಾರಣವಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆ (Bengaluru Rains) ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ದೊಮ್ಮಲೂರಿನ ಗೌತಮ್ ಕಾಲೋನಿಯಲ್ಲಿ ಮಳೆಯ ಅಬ್ಬರಕ್ಕೆ ಸಿಲುಕಿ ಮನೆಯೊಂದು ಕುಸಿದಿದ್ದು, ಅವಘಡ ಸಂಭವಿಸುವ ವೇಳೆ ಮನೆಯೊಳಗೆ ಯಾರೂ ಇರಲಿಲ್ಲವಾದ್ದರಿಂದ ದೊಡ್ಡ ದುರಂತವೊಂದು ತಪ್ಪಿಹೋಗಿದೆ.

ದೊಮ್ಮಲೂರಿನ ಗೌತಮ್ ಕಾಲೊನಿಯ ಸ್ಲಂ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಜೀವಹಾನಿ ಸಂಭವಿಸಿಲ್ಲ. ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದರಿಂದ ಅನಾಹುತ ತಪ್ಪಿದೆ. ದೊಡ್ಡ ಕಾಲುವೆ ಪಕ್ಕದಲ್ಲೇ ಮನೆ ಕಟ್ಟಿಕೊಂಡಿರುವ ಪರಿಣಾಮ ಅಲ್ಲಿನ ನಿವಾಸಿಗಳಿಗೆ ಪ್ರತಿ ಮಳೆಗಾಲದಲ್ಲೂ ಮನೆಯೊಳಗೆ ನೀರು ನುಗ್ಗುವ ಸಮಸ್ಯೆ ಉಂಟಾಗುತ್ತಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಈವರೆಗೆ ಆರೂ ಕಲ್ಪಿಸಿಲ್ಲ.

ದೊಡ್ಡ ಕಾಲುವೆ ಪಕ್ಕದಲ್ಲೇ ಸುಮಾರು 50 ರಿಂದ 60 ಜೋಪಡಿಗಳಿದ್ದು, ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ 15 ರಿಂದ 20 ಮನೆಗಳಿಗೆ ನೀರು ನುಗ್ಗಿದೆ. ಹಲವು ವರ್ಷಗಳಿಂದ ಗೌತಮ್ ಕಾಲೊನಿ ಸ್ಲಂ ಪ್ರದೇಶದ ಜನರು ಇದೇ ಪರಿಸ್ಥಿತಿ ಅನುಭವಿಸುತ್ತಿದ್ದು, ಮಳೆಯ ನೀರು ನುಗ್ಗಿದಾಗ ಅದನ್ನು ಖಾಲಿ ಮಾಡಲು ಪರದಾಡುವಂತಾಗಿದೆ.

ಆಸ್ಪತ್ರೆಗೆ ತೆರಳಲು ವೃದ್ಧ ವ್ಯಕ್ತಿಯ ಪರದಾಟ ಬೆಂಗಳೂರಿನ ಕೆಲವೆಡೆ ಮಳೆಯ ಆರ್ಭಟಕ್ಕೆ ರಸ್ತೆಗಳೆಲ್ಲಾ ಜಲಾವೃತವಾದ ಪರಿಣಾಮ ಆಸ್ಪತ್ರೆಗೆ ತೆರಳಲು ವೃದ್ಧರೊಬ್ಬರು ಪರದಾಡಿದ ಘಟನೆ ನಡೆದಿದೆ. ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ತೆರಳಲು ಮನೆಯಿಂದ ಹೊರಟಿದ್ದ ವೃದ್ಧ ವ್ಯಕ್ತಿಗೆ ಮಳೆ ಅಡ್ಡಿಪಡಿಸಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದ ಕಾರಣ ಸಂಕಷ್ಟ ಉಂಟಾಗಿತ್ತು. ಬೆಂಗಳೂರಿನ ಹಲಸೂರಿನ ಗುಪ್ತ ಲೇಔಟ್​​ನಲ್ಲಿ ಘಟನೆ ನಡೆದಿದ್ದು, ಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿ ಎಲ್ಲಿ ನೋಡಿದರೂ ಸಂಪೂರ್ಣ ಮಳೆ ನೀರು ಮೊಣಕಾಲಿನ ತನಕ ನಿಂತಿದ್ದರಿಂದ, ಆರೋಗ್ಯದಲ್ಲಿ ಏರುಪೇರಾದರೂ ತುರ್ತಾಗಿ ಆಸ್ಪತ್ರೆಗೆ ತೆರಳಲಾಗದೇ ಕಷ್ಟ ಅನುಭವಿಸಿದರು. ಕೊನೆಗೆ ಸಂಬಂಧಿಕರ ಸಹಾಯದಿಂದ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬಿಬಿಎಂಪಿಯ ನಿರ್ಲಕ್ಷ್ಯದಿಂದ ಮಳೆಗಾಲದ ಆರಂಭದಲ್ಲಿಯೇ ಜನರಿಗೆ ಹೀಗೆ ವಿಪರೀತ ತೊಂದರೆಯಾಗುತ್ತಿರುವುದು ಬೆಂಗಳೂರಿಗರನ್ನು ಚಿಂತೆಗೆ ನೂಕಿದೆ. ಒಂದುವೇಳೆ ಮಳೆ ಇನ್ನೂ ತೀವ್ರಗೊಂಡರೆ ಮಳೆಗಾಲದ ಅಂತ್ಯದಲ್ಲಿ ಪರಿಸ್ಥಿತಿ ಹೇಗಿರುತ್ತದೋ? ಏನೋ? ಎಂದು ಬೆಂಗಳೂರು ನಗರದ ಜನರು ಆತಂಕಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: Bengaluru Rains: ಬೆಂಗಳೂರು ನಗರದಲ್ಲಿ ದಿಢೀರ್ ಮಳೆ: ವಾಹನ ಸವಾರರ ಪರದಾಟ 

ಉದ್ಘಾಟನೆಗೊಂಡ ಒಂದೇ ದಿನಕ್ಕೆ ಕಿತ್ತು ಹೋಯ್ತು 30 ಕೋಟಿ ರೂ. ವೆಚ್ಚದ ರಸ್ತೆ; ಕಮರ್ಷಿಯಲ್​ ಸ್ಟ್ರೀಟ್​ನ ಹೊಸ ರಸ್ತೆಗೆ ದುರಸ್ತಿ ಭಾಗ್ಯ

(Bengaluru BBMP Heavy Rain House collapsed and many areas faced flood situation)