
ಬೆಂಗಳೂರು, ನವೆಂಬರ್ 19: ಮಾಸಿಕ 15,000 ಸಾವಿರ ರೂ ಗೌರವ ಧನ, ನಿವೃತ್ತಿ ಬಳಿಕ 5 ಲಕ್ಷ ರೂ ಹಿಡಿಗಂಟು ಸೇರಿ ವಿವಿಧ ಬೇಡಿಕೆ ಇಟ್ಟುಕೊಂಡು ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮೊನ್ನೆಯಿಂದ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಆಶಾ ಕಾರ್ಯಕರ್ತೆಯರ ಜೊತೆಗಿನ ಸಿಎಂ ಡಿಕೆ ಶಿವಕುಮಾರ್ ಸಭೆ ವಿಫಲವಾಗಿದ್ದು, ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ತಮ್ಮ ಮಕ್ಕಳ ಜೊತೆ ಆಶಾ ಕಾರ್ಯಕರ್ತೆಯರು ಇಡೀ ರಾತ್ರಿ ಧರಣಿ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಡಿಕೆ ಶಿವಕುಮಾರ್, ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳ ಜೊತೆ ಸಭೆ ಮಾಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ‘ಸಭೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಪ್ರಸ್ತುತ ವಾಸ್ತವಾಂಶಗಳನ್ನು ವಿವರಿಸಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸಮಯಾವಕಾಶ ಕೋರಿದ್ದಾರೆ. ಸದ್ಯ ಆಶಾ ಕಾರ್ಯಕರ್ತೆಯರಿಗೆ 7 ಸಾವಿರ ರೂ ಗೌರವಧನ ನೀಡಲಾಗುತ್ತಿದ್ದು, ಸರ್ಕಾರದಿಂದ 5 ಸಾವಿರ ರೂ ಜೊತೆಗೆ ಇನ್ಸೆಂಟಿವ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಬರುತ್ತದೆಯೋ ಅಷ್ಟನ್ನು ನೀಡಲಾಗುತ್ತಿದೆ’ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ‘ಮೊದಲು ಚುನಾವಣಾ ಪ್ರಣಾಳಿಕೆ ಭರವಸೆ ಈಡೇರಿಸಿ’: ಆಶಾ ಕಾರ್ಯಕರ್ತೆಯರ ಧರಣಿ ಬೆಂಬಲಿಸಿ ಸರ್ಕಾರಕ್ಕೆ ವಿಜಯೇಂದ್ರ ತರಾಟೆ
‘ಆದರೆ ಆಶಾ ಕಾರ್ಯಕರ್ತೆಯರು 15 ಸಾವಿರ ರೂ ಗೌರವಧನ ನೀಡುವಂತೆ ಒತ್ತಾಯಿಸಿದ್ದು, ಒಟ್ಟು 8ರಿಂದ 9 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅಧಿವೇಶನ ಮುಗಿಯುವ ಮುನ್ನ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದು, ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳುವಂತೆ ಕಾರ್ಯಕರ್ತೆಯರಲ್ಲಿ ಮನವಿ ಮಾಡಿದ್ದಾರೆ’.
ಇನ್ನು ಸಿಎಂ ಮಾತಿಗೆ ಅಸಮಾಧಾನಗೊಂಡ ಆಶಾ ಕಾರ್ಯಕರ್ತೆಯರು ಸಭೆಯ ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ತೆರಳಿದ್ದು, ಅಲ್ಲಿ ಹೋರಾಟಗಾರರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಆಶಾ ಕಾರ್ಯಕರ್ತರ ಸಂಘದ ಅಧ್ಯಕ್ಷೆ ನಾಗಲಕ್ಷ್ಮಿ ಪ್ರತಿಕ್ರಿಯಿಸಿದ್ದು, ‘ನಮ್ಮ ಬೇಡಿಕೆ ಈಡೇರಿದರೆ ಮಾತ್ರ ಸಮಾಧಾನ ತರುತ್ತದೆ. ನಮಗೆ ಸಭೆ ಸಮಾಧಾನ ತಂದಿಲ್ಲ. ಸದನದಲ್ಲಿ ಚರ್ಚೆ ಮಾಡುತ್ತೇವೆ ಅಂದಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ನಾವು ಪ್ರತಿಭಟನೆ ಮುಂದುವರಿಸುವ ಬಗ್ಗೆ ಫ್ರೀಡಂ ಪಾರ್ಕ್‌ಗೆ ಹೋಗಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ’ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಜೊತೆಗಿನ ಸಿಎಂ ಸಭೆ ವಿಫಲ ಹಿನ್ನೆಲೆ ಫ್ರೀಡಂಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಸಭೆ ಮಾಡಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮುಂದುವರಿಸುವ ಬಗ್ಗೆ ನಿರ್ಧರಿಸಲಾಗಿದೆ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸೋಣ, ಪ್ರತಿಭಟನೆ ಹಿಂಪಡೆಯಲು ಬೇಡ ಅಂತಿರೋ ಕಾರ್ಯಕರ್ತೆಯರು. ಹೀಗಾಗಿ ಸಭೆಯಲ್ಲಿ ಬಹುತೇಕ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:15 pm, Thu, 19 November 26