AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೊದಲು ಚುನಾವಣಾ ಪ್ರಣಾಳಿಕೆ ಭರವಸೆ ಈಡೇರಿಸಿ’: ಆಶಾ ಕಾರ್ಯಕರ್ತೆಯರ ಧರಣಿ ಬೆಂಬಲಿಸಿ ಸರ್ಕಾರಕ್ಕೆ ವಿಜಯೇಂದ್ರ ತರಾಟೆ

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದ್ದು, ಗೌರವಧನ ಹೆಚ್ಚಳದ ಭರವಸೆ ಈಡೇರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮದೇ ಪ್ರಣಾಳಿಕೆಯ ಭರವಸೆ ಮತ್ತು ತಮ್ಮ ಹಿಂದಿನ ಮುಖ್ಯಮಂತ್ರಿಗಳ ಘೋಷಣೆಯನ್ನು ಈಡೇರಿಸುವ ನೈತಿಕ ಜವಾಬ್ದಾರಿಯನ್ನು ಸರ್ಕಾರ ಈಡೇರಿಸಲಿ ಎಂದವರು ಆಗ್ರಹಿಸಿದ್ದಾರೆ.

'ಮೊದಲು ಚುನಾವಣಾ ಪ್ರಣಾಳಿಕೆ ಭರವಸೆ ಈಡೇರಿಸಿ': ಆಶಾ ಕಾರ್ಯಕರ್ತೆಯರ ಧರಣಿ ಬೆಂಬಲಿಸಿ ಸರ್ಕಾರಕ್ಕೆ ವಿಜಯೇಂದ್ರ ತರಾಟೆ
ಆಶಾ ಕಾರ್ಯಕರ್ತೆಯರ ಧರಣಿ ಬೆಂಬಲಿಸಿ ಸರ್ಕಾರಕ್ಕೆ ವಿಜಯೇಂದ್ರ ತರಾಟೆ
ಕಿರಣ್​ ಹನಿಯಡ್ಕ
| Edited By: |

Updated on: Nov 19, 2026 | 3:49 PM

Share

ಬೆಂಗಳೂರು, ನವೆಂಬರ್​​ 19: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ತಮ್ಮ ಮಕ್ಕಳ ಜೊತೆ ಇಡೀ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಆಶಾ ಕಾರ್ಯಕರ್ತೆಯರ ಅಹವಾಲು ಈ ಕುರುಡು-ಕಿವುಡು ಕಾಂಗ್ರೆಸ್ ಸರ್ಕಾರಕ್ಕೆ ಕಾಣುತ್ತಲೂ ಇಲ್ಲ, ಕೇಳುತ್ತಲೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯ ಸರ್ಕಾರ ಸ್ಪಂದಿಸದೇ ಇರುವುದು ಕಳವಳಕಾರಿ’

ತೀವ್ರ ಚಳಿ, ಸಮರ್ಪಕ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ತಾಯಂದಿರಿಗೆ, ಸೋದರಿಯರಿಗೆ ಅನುಕೂಲಗಳಿಲ್ಲದ ಪರಿಸ್ಥಿತಿಯಲ್ಲಿ ಹೋರಾಟ ಮುಂದುವರಿಸುತ್ತಿದ್ದರೂ, ರಾಜ್ಯ ಸರ್ಕಾರ ಸ್ಪಂದಿಸದೇ ಇರುವುದು ಕಳವಳಕಾರಿಯಾಗಿದೆ. ಹಲವಾರು ಸಂಕಷ್ಟಗಳ ನಡುವೆಯೂ, ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರ ಹಿತರಕ್ಷಣೆ ರಾಜ್ಯ ಸರ್ಕಾರದ ಕರ್ತವ್ಯ. ಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ತಾಯಿ-ಮಗುವಿನ ಆರೋಗ್ಯ, ಲಸಿಕೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸೇರಿದಂತೆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಸೇವೆ ಅಪಾರ ಎಂಬುದನ್ನು ವಿಜಯೇಂದ್ರ ಸರ್ಕಾರಕ್ಕೆ ನೆನಪಿಸಿದ್ದಾರೆ.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಹೋರಾಟ: ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ತೀವ್ರ ಚಳಿಯ ನಡುವೆಯೂ ಫ್ರೀಡಂ ಪಾರ್ಕ್‌ನಲ್ಲೇ ಉಳಿದ ಪ್ರತಿಭಟನಾನಿರತರು

‘ಸಚಿವ ಖಾದರ್​​ ಹೇಳಿಕೆ ವಾಸ್ತವಕ್ಕೆ ವಿರುದ್ಧ’

2023ರ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರ ನಿಗದಿತ ಮಾಸಿಕ ಗೌರವಧನವನ್ನು 5,000 ರೂ.ಗಳಿಂದ 8,000 ರೂ.ಗಳಿಗೆ ಹೆಚ್ಚಿಸುವ ಭರವಸೆಯನ್ನು ನೀಡಿದ್ದ ಕಾಂಗ್ರೆಸ್, ಮೊದಲು ನುಡಿದಂತೆ ನಡೆಯಲಿ. ಅಲ್ಲದೆ, ಕಳೆದ ವರ್ಷ, ಅಂದರೆ 2025ರ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರೇ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10,000 ರೂ. ನಿಗದಿತ ಗೌರವಧನ ನೀಡುವುದಾಗಿ, ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಘೋಷಿಸಿದ್ದರು. ಈಗ ಇದೇ ಕಾಂಗ್ರೆಸ್ ಪಕ್ಷದ ಸಚಿವರಾದ ಯು.ಟಿ.ಖಾದರ್ ಅವರು, ಕೇಂದ್ರ ಸರ್ಕಾರ 2,000 ರೂ. ನೀಡುತ್ತಿದೆ ಎಂದು ವಾಸ್ತವಕ್ಕೆ ವಿರುದ್ಧವಾದ ಹೇಳಿಕೆ ನೀಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ 2025ರ ಮಾರ್ಚ್‌ನಲ್ಲಿಯೇ ನಿಗದಿತ ಮಾಸಿಕ ಪ್ರೋತ್ಸಾಹ ಧನವನ್ನು 2,000 ರೂ.ಗಳಿಂದ 3,500 ರೂ.ಗಳಿಗೆ ಹೆಚ್ಚಿಸಿದೆ ಎಂದು ತಿರುಗೇಟು ನೀಡಿದ್ದಾರೆ.

ಮೊದಲು ಈ ಕಾಂಗ್ರೆಸ್ ಸರ್ಕಾರ, ತಮ್ಮದೇ ಪ್ರಣಾಳಿಕೆಯ ಭರವಸೆ ಮತ್ತು ತಮ್ಮ ಹಿಂದಿನ ಮುಖ್ಯಮಂತ್ರಿಗಳ ಘೋಷಣೆಯನ್ನು ಈಡೇರಿಸುವ ನೈತಿಕ ಜವಾಬ್ದಾರಿಯನ್ನು ಈಡೇರಿಸಲಿ. ಮೊದಲು ತನ್ನ ಪಾಲಿನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ, ನಂತರ ಕೇಂದ್ರ ಸರ್ಕಾರದ ನೆರವು ಹೆಚ್ಚಳದ ಬಗ್ಗೆ ಚರ್ಚಿಸಲಿ. ಈ ವಿಷಯದಲ್ಲಿ ರಾಜಕೀಯ ಮಾಡದೆ, ಕೂಡಲೇ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು, ಅವರಿಗೆ ಆರ್ಥಿಕ ಭದ್ರತೆ ಮತ್ತು ಗೌರವಯುತ ಬದುಕು ಕಲ್ಪಿಸಲು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More