ವಿಧಾನ ಸಭೆಯಲ್ಲಿ ದೋಸ್ತಿ, ಹೊರಗಡೆ ಕುಸ್ತಿ: ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಕಳ್ಳೆತ್ತು, ಕುಂಟೆತ್ತು ಕಾಳಗ

ವಿಧಾನಸಭೆಯಲ್ಲಿ ಮೃದುವಾಗಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ನಡುವಿನ ಮಾತು, ಉಪಚುನಾವಣೆ ಅಖಾಡದಲ್ಲಿ ತೀವ್ರ ವಾಗ್ಯುದ್ಧಕ್ಕೆ ತಿರುಗಿದೆ. ಸಿದ್ದರಾಮಯ್ಯ ಬಿಜೆಪಿಗರನ್ನು 'ಕಳ್ಳೆತ್ತುಗಳು' ಎಂದಿದ್ದರೆ, ಅಶೋಕ್ 'ಸಿದ್ದರಾಮಯ್ಯ-ಡಿಕೆಶಿ ಜೋಡೆತ್ತುಗಳಲ್ಲ, ಕುಂಟೆತ್ತುಗಳು' ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ, ಅಭಿವೃದ್ಧಿ ಹಾಗೂ ಸಾಲದ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ವಿಧಾನ ಸಭೆಯಲ್ಲಿ ದೋಸ್ತಿ, ಹೊರಗಡೆ ಕುಸ್ತಿ: ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಕಳ್ಳೆತ್ತು, ಕುಂಟೆತ್ತು ಕಾಳಗ
ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಮಾತಿನ ಕಾಳಗ

Updated on: Mar 31, 2026 | 5:03 PM

ಬೆಂಗಳೂರು, ಮಾರ್ಚ್​​ 31: ವಿಧಾನಸಭೆ ಬಜೆಟ್​​ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್​​. ಅಶೋಕ್​​ ನಡುವೆ ಹೇಳಿಕೊಳ್ಳುವಂತಹ ವಾಗ್ಯುದ್ಧವೇನೂ ನಡೆದಿರಲಿಲ್ಲ. ಇಬ್ಬರ ಮಾತುಗಳೂ ಕೊಂಚ ಮಟ್ಟಿಗೆ ಮೃದು ಎಂಬಂತೆಯೇ ಭಾಸವಾಗಿತ್ತು. ಆದರೆ ಇದೀಗ ಉಪ ಚುನಾವಣೆ ಅಖಾಡದಲ್ಲಿ ಇವರಿಬ್ಬರ ನಡುವಿನ ಮಾತಿನ ಸಮರ ಬಹಳ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಸಿಎಂ ಸಿದ್ದರಾಮಯ್ಯ 2028ಕ್ಕೂ ನಾವೇ ಗೆಲ್ತೇವೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಳುಮೆ ಮಾಡುವ ಎತ್ತುಗಳು ಬೇಕು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ವೋಟ್​​ ಹಾಕಬಾರದು ಎಂದಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಗೀಗ ಅಶೋಕ್​​ ಕೌಂಟರ್​​ ಕೊಟ್ಟಿದ್ದಾರೆ.

‘ಜೋಡೆತ್ತುಗಳಲ್ಲ, ಕುಂಟೆತ್ತುಗಳು’

ಕಾಂಗ್ರೆಸ್​​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್​​. ಅಶೋಕ್​​, ಸಿದ್ದರಾಮಯ್ಯ ಮತ್ತು ಡಿಕೆ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ತಿವಿದಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಒಬ್ಬರ ದಾರಿಗೆ ಮತ್ತೊಬ್ಬರು ಬರಲ್ಲ. ಹೀಗಾಗಿ ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಆದರೆ ಈ ಸರ್ಕಾರ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಬೆಲೆ ಕಡಿಮೆ‌ ಮಾಡಿದೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಜಾಸ್ತಿ ಮಾಡಿದೆ. ಉಪ‌ ಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕಲಿದ್ದು, ಜನ ಕಾಂಗ್ರೆಸ್ ಸರ್ಕಾರಕ್ಕೆ ಈಗ ಬುದ್ಧಿ ಕಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ದಾವಣಗರೆ ದಕ್ಷಿಣ ಬೈ ಎಲೆಕ್ಷನ್​​ನಿಂದ ಜಮೀರ್ ದೂರವಾಗಿದ್ಯಾಕೆ? ಅಸಲಿಗೆ ಆಗಿದ್ದೇನು?

ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾ ರಾಮಯ್ಯ ಎಂದೂ ಕಿಡಿ ಕಾರಿರುವ ಅಶೋಕ್​​, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಸಿಎಂ ಸಿದ್ದರಾಮಯ್ಯ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಆರ್ಥಿಕ ಶಿಸ್ತಿನ ರೇಖೆ ದಾಟಿದೆ, ಆದ್ರೆ ದಾಟಿಲ್ಲ ಎಂಬಂತೆ ತೋರಿಸ್ತಾರೆ. ಗೃಹಲಕ್ಷ್ಮೀ ಯೋಜನೆ ಹಣ ಕೇವಲ 10 ತಿಂಗಳು ನೀಡಿ, ಎರಡು ತಿಂಗಳಿನದ್ದನ್ನು ದೋಚಿದ್ದಾರೆ. ರಾಜ್ಯದಿಂದ ವರ್ಷಕ್ಕೆ 45,600 ಕೋಟಿ ಬಡ್ಡಿ ಕಟ್ಟಬೇಕಿದ್ದು, ಪ್ರತಿ ದಿನಕ್ಕೆ 125 ಕೋಟಿ ಹಣ ಬಡ್ಡಿ ಭರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಸಾಲಗಾರ ಆಗಿದ್ದು, ರಾಜ್ಯದ ಜನರು ಈ ಸರ್ಕಾರ ಕಿತ್ತೊಗೆಯುವ ಹಾದಿಯಲ್ಲಿದ್ದಾರೆ ಎಂದು ಅಶೋಕ್​​ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us