ಬೆಂಗಳೂರು: ಕಾಫಿ ಬೆಳೆಗಾರರ (Coffee Growers) ಜಮೀನು ಅತಂತ್ರ ಪರಿಸ್ಥಿತಿಯಲ್ಲಿತ್ತು. ಕಂದಾಯ ಇಲಾಖೆಯ (Revenue Department) ಕಾಫಿ ಜಮೀನುಗಳಿಗೆ ದರ ನಿಗದಿ ಮಾಡಿದ್ದೇವೆ. 30 ವರ್ಷಗಳ ಕಾಲ ರೈತರಿಗೆ ಲೀಸ್ ಕೊಡುವ ತೀರ್ಮಾನವನ್ನು ಸದನದಲ್ಲಿ ಮಾಡಿದ್ದೇವು. ಅದರಂತೆ ದರ ನಿಗದಿಯನ್ನು ಸರ್ಕಾರದಿಂದಲೇ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ (R Ashok) ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಫಿ ಬೆಳೆಗಾರರ ಬೇಡಿಕೆಗೆ ತಕ್ಕಂತೆ ದರ ನಿಗದಿ ನಿರ್ಧಾರ ಮಾಡಿದ್ದೇವೆ. ಕಾಫಿ ಬೆಳೆಗಾರರ ಬೇಡಿಕೆ ವಿಷಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಎಂದರು.
1. 1 ರಿಂದ 5 ಎಕರೆವರೆಗೆ ಪ್ರತಿ ವರ್ಷ 1000 ರೂ.
2. 5 ರಿಂದ 10 ಎಕರೆವರೆಗೆ 1500 ರೂ.
3. 10 ರಿಂದ 15 ಎಕವರೆಗೆ 2000 ರೂ.
4. 15 ರಿಂದ 20 ಎಕವರೆಗೆ 2500 ರೂ.
5. 20 ರಿಂದ 25 ಎಕವರೆಗೆ 3000 ರೂ. ನಿಗದಿ ಮಾಡಿದ್ದೇವೆ.
52 ಸಾವಿರ ಗೊಲ್ಲರ ಹಟ್ಟಿ, ಕುರುಬರ ಹಟ್ಟಿಗೆ ಹಕ್ಕು ಪತ್ರ ನೀಡಲಾಗಿದೆ. ಈಗ ಕುರುಬರ ಹಟ್ಟಿ, ಗೊಲ್ಲರಹಟ್ಟಿಗೆ ಗ್ರಾಮ ಅಂತ ನಮೂದು ಮಾಡಲಾಗಿದೆ. 60 ಸಾವಿರ ಹಕ್ಕು ಪತ್ರ ನೀಡಲು ನಿರ್ಧಾರ ಮಾಡಲಾಗಿದೆ. 40 ಸಾವಿರ ಹಕ್ಕು ಪತ್ರ ನೀಡಲಾಗಿದೆ. ಉಳಿದದ್ದು ಡಿಸಿಗಳಿಗೆ ಸೂಚಿಸಿ ಕೊಡಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ನನಗೆ ಮನವಿ ಪತ್ರ ನೀಡಿದ್ದನ್ನು ಈಡೇರಿಸುವ ಕೆಲಸ ಮಾಡಿದ್ದೇನೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ 30 ವರ್ಷದಿಂದ ಕಾಫಿ ಬೆಳೆಗಾರರ ರೀತಿ, ಕುಮ್ಕಿ ಬೆಳೆಗಾರರು ಅಲೆದಾಡುತ್ತಿದ್ದರು. ಬೇಸಾಯಕ್ಕೆ ಅಲ್ಲದೆ ಸೊಪ್ಪು, ಹುಲ್ಲುಬಣಿ, ಸೌದೆಗೆ ಈ ಪ್ರದೇಶ ಬಳಸುತ್ತಿದ್ದರು. ನನ್ನ ನೇತೃತ್ವದ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗಿತ್ತು. 5 ಎಕರೆ ಮೀರದಂತೆ, 30 ವರ್ಷ ಲೀಸ್ ಕೊಡಲು ನಿರ್ಧಾ ಮಾಡಲಾಗಿದೆ. 1964 ಕಾಯ್ದೆ ತಿದ್ದುಪಡಿ ಮಾಡಲು ಸಿಎಂ ಬೊಮ್ಮಾಯಿಯವರಿಗೆ ಶಿಫಾರಸ್ಸು ಮಾಡಿದ್ದೇನೆ.
ಕುಮ್ಕಿ ಜಮೀನು ಬಳಸುವ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಕಂದಾಯ ಸಚಿವನಾಗಿ ಕಾಫಿ ಬೆಳೆಗಾರರ ರೀತಿ, ಕುಮ್ಕಿ ಜಮೀನಿಗೂ ನ್ಯಾಯ ಒದಗಿಸಿದ್ದೇನೆ. ದರ ನಿಗದಿಯಾಗಿಲ್ಲ, ಕಡಿಮೆ ದರದಲ್ಲಿ ಮಾಡಲಾಗುವುದು. ಮಂಗಳೂರಿನಲ್ಲಿ ಅತಿ ಹೆಚ್ಚು ಗೇರು ಪ್ಲಾಂಟ್ ಮಾಡಿದ್ದು, ಈಗ ಆದಾಯ ಬರುವಂತೆ ಮರ ಬೆಳೆದಿದೆ ಎಂದು ತಿಳಿಸಿದರು.
ಇದನ್ನೂ ಓದಿ: 3 ತಿಂಗಳ ಮೊದಲೇ ನಾವು ಚುನಾವಣೆಗೆ ರೆಡಿಯಾಗಿದ್ದೇವೆ: ಡಿ.ಕೆ.ಶಿವಕುಮಾರ್
ಇದೇ ವೇಳೆ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವ ವಿಚಾರವಾಗಿ ಮಾತನಾಡಿದ ಅವರು ಕಳೆದ ಆರು ತಿಂಗಳಲ್ಲಿ ಪಕ್ಷದಿಂದ ನಾಲ್ಕು ಸರ್ವೆ ಆಗಿದೆ. ಜಾತಿವಾರು, ಏರಿಯಾವಾರು, ಅಭ್ಯರ್ಥಿಗಳವಾರು ಸರ್ವೆ ಕೂಡ ನಡೆಯುತ್ತಿದೆ. ಅದರ ಆಧಾರದ ಮೇಲೆ ಟಿಕೆಟ್ ಆಯ್ಕೆ ಆಗುತ್ತದೆ. ನಮ್ಮಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಷ್ಟೇ. ನಮ್ಮಲ್ಲಿ ವಂಶಪಾರಂಪರ್ಯ ಇಲ್ಲ. ಹೀಗಾಗಿ ಗೆಲ್ಲುವಂತಹವರಿಗೆ ಅಷ್ಟೇ ಟಿಕೆಟ್. ಬಹುತೇಕ ಬೆಂಗಳೂರಿನ ಹಾಲಿ ಶಾಸಕರಿಗೆ ಟಿಕೆಟ್ ಸಿಗಬಹುದು ಎಂದು ಭವಿಷ್ಯ ನುಡಿದರು.
ಸೋಮಣ್ಣ ಹಾಗೂ ಅಶೋಕ್ ನಡುವೆ ಮುನಿಸು ವಿಚಾರವಾಗಿ ಮಾತನಾಡಿದ ಅವರು ನಾವು ಸೋಮಣ್ಣ ಚೆನ್ನಾಗಿ ಇದ್ದೇವೆ. ನಾವು ಕುಮಾರಸ್ವಾಮಿ, ಶಿವಕುಮಾರ್ ತರ ಕುಂಟೆತ್ತು ಅಲ್ಲ. ನಾವು ಇಬ್ಬರೂ ಒಟ್ಟಾಗಿ ಇದ್ದೇವೆ ಎಂದು ಕಾಲೆಳೆದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು ನನಗೆ ಗೊತ್ತಿರುವ ಪ್ರಕಾರ ಸಿದ್ದರಾಮಯ್ಯ ಕಳೆದ ಬಾರಿ ಕೂಡ ಇದು ನನ್ನ ಕೊನೆ ಚುನಾವಣೆ ಅಂದಿದ್ದರು. ಕಳೆದ ಬಾರಿ 250 ಓಟಲ್ಲಿ ಗೆದ್ದರು. ಅನ್ನ ಭಾಗ್ಯ, ಆ ಭಾಗ್ಯ, ಈ ಭಾಗ್ಯ ಅಂತೆಲ್ಲಾ ಹೇಳಿದರು. ಈಗ ಕ್ಷೇತ್ರ ಇಲ್ಲದೆ ಹುಡುಕಾಟ ನಡೆಸುತ್ತಿದ್ದಾರೆ. ಗೆಲ್ಲಲು ತಾಕತ್ ಇಲ್ಲದೆ ಎರಡು ಕ್ಷೇತ್ರಗಳಲ್ಲಿ ನಿಲ್ಲುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪಕ್ಷಕ್ಕೆ ವಿಶ್ವಾಸ ಹೋಗಿದೆ. ಬೇರೆಯವರು ಯಾರೂ ಕಾಂಗ್ರೆಸ್ಗೆ ಹೋಗಲ್ಲ. ಅವರಲ್ಲಿರುವವರ ಮೇಲೆ ವಿಶ್ವಾಸ ಇಲ್ಲ. ಇಲ್ಲಿಂದ ಯಾರೂ ಹೋಗಲ್ಲ. ಚುನಾವಣೆ ವೇಳೆ ಖೋಖೋ ಆಟ ನಡೆಯುತ್ತಿರುತ್ತದೆ. ಪಾರ್ಟಿ ಕಮೀಟ್ಮೆಂಟ್ ಇಲ್ಲದವರು ಅಲ್ಲಿ, ಇಲ್ಲಿ ಹೋಗುತ್ತಾರೆ. ವಲಸೆ ಬಂದವರು ಇಲ್ಲೇ ಇರುತ್ತಾರೆ. ಗೋವಿಂದ ಕಾಜೋಳ ಎಲ್ಲರೂ ಹಿಂದೆ ಬಂದವರು, ಇಲ್ಲೇ ಇದ್ದಾರೆ. ಬೆಂಗಳೂರಿನಲ್ಲಿ ಕಳೆದ ಬಾರಿ 17 ಸೀಟು ಗೆದ್ದಿದ್ದೆವು. ಈಗ 28ರಲ್ಲಿ 20 ಸೀಟು ಗೆಲ್ಲುತ್ತೇವೆ. ಡಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ಹೆಸರಿಟ್ಟಿಲ್ಲ ಎಂದು ದಿ. ಅನಂತ್ ಕುಮಾರ್ ಮಗಳು ವಿಜೇತ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು ಅವರಿಗೆ ನೆನಪಿಲ್ಲ, ನಾನೇ ದಿವಂಗತ ಅನಂತ್ ಕುಮಾರ್ ಹೆಸರನ್ನು ಇಟ್ಟಿದ್ದೇನೆ. ನಮ್ಮ ಕ್ಷೇತ್ರದಲ್ಲಿ ರಸ್ತೆಗೆ ಇಡಲಾಗಿದೆ. ವಾರ್ಡ್‌ನ ಪಾರ್ಕಿಗೆ ಇಡಲಾಗಿದೆ. ಐದು ಎಕರೆ ಜಾಗವನ್ನೂ ಅನಂತ್ ಕುಮಾರ್ ಹೆಸರಿನಲ್ಲಿ ಕೊಡಲಾಗಿದೆ. ನಾನು ಅನಂತ್ ಕುಮಾರ್ ಅವರ ಅಭಿಮಾನಿ. ಅವರು ನಮ್ಮ ಹಿರಿಯ ನಾಯಕರಾಗಿದ್ದರು. ಸತೀಶ್ ರೆಡ್ಡಿ ಸಹ ಅವರ ಕ್ಷೇತ್ರದಲ್ಲಿ ರಸ್ತೆಗೆ ಅನಂತ್ ಕುಮಾರ್ ಹೆಸರು ಇಟ್ಟಿದ್ದಾರೆ. ದೇವನಹಳ್ಳಿಯಲ್ಲಿ ಅವರ ಹೆಸರಿನ ಪ್ರತಿಷ್ಠಾನಕ್ಕೆ ಜಾಗ ಕೊಡಲಾಗಿದೆ. ಅವರ ಮಗಳು ವಿಜೇತ ಅನಂತ್ ಕುಮಾರ್ ಅವರಿಗೆ ಮಾಹಿತಿ ಇಲ್ಲ. ಮಾಹಿತಿ ತಿಳಿಸುವ ಕೆಲಸ ಮಾಡುತ್ತೇವೆ. ಅನಂತ್ ಕುಮಾರ್ ನಮ್ಮ ಹಿರಿಯ ನಾಯಕರು. ಅವರು ಸದಾ ಸ್ಮರಣೆಯಲ್ಲಿರುತ್ತಾರೆ. ಅವರ ಕುಟುಂಬಕ್ಕೆ ಈ ಬಾರಿ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಜಾರಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ