ಬೆಂಗಳೂರು: ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಮೃತದೇಹ ಪತ್ತೆ
ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕ್ರಾಪ್ ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಬೆಂಗಳೂರು: ಕೊಡಿಗೇಹಳ್ಳಿ ಪೊಲೀಸ್ ಠಾಣಾ (Kodihalli Police Station) ವ್ಯಾಪ್ತಿಯಲ್ಲಿ ಸ್ಕ್ರಾಪ್ ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇಂದು (ಮಾ.29) ಬೆಳಿಗ್ಗೆ ಸುಟ್ಟು ಕರಕಲಾಗಿರುವ ಕಾರೊಂದನ್ನು ಸ್ಥಳೀಯರು ದೂರದಿಂದ ಗಮನಿಸಿದ್ದಾರೆ . ಹತ್ತಿರ ಹೋಗಿ ನೋಡಿದಾಗ, ಕಾರ್ನಲ್ಲಿ ವ್ಯಕ್ತಿಯ ಶವ ಇರುವುದು ತಿಳಿದಿದೆ. ಕೂಡಲೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಕಾರ್ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು
ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮ ಬಳಿಯ ಕೆರೆಯಲ್ಲಿ ನಡೆದಿದೆ. ಒಟ್ಟು ಐವರು ಈಜಲು ಹೋಗಿದ್ದು ಮೂವರು ನೀರುಪಾಲಾಗಿ ಇಬ್ಬರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ನಂದನಹೊಸೂರು ಗ್ರಾಮದ ನಿವಾಸಿ ಗಿರೀಶ್(18), ಹೊರಕೆರೆದೇವರಪುರ ಗ್ರಾಮದ ಸಂಜಯ್(18), ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತರು. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐವರು ಯುವಕರು ಪಿಯುಸಿ ಪರೀಕ್ಷೆಯನ್ನು ಮುಗಿಸಿ ಊರಿಗೆ ಬಂದಿದ್ದರು. ರಜೆ ಇದ್ದ ಕಾರಣ ಸ್ನೇಹಿತರೆಲ್ಲ ಸೇರಿಕೊಂಡು ಗುಂಡಿ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಕೆರೆಯ ಆಳ ತಿಳಿಯದೆ ಈಜಾಡಲು ಇಳಿದಿದ್ದು ಮುಳುಗಿದ್ದಾರೆ. ದಡ ಸೇರಲು ಸಾಧ್ಯವಾಗದೇ ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಯುವಕನನ್ನು ಸುಲಿಗೆ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್: ಆರೋಪಿಗಳಿಂದ ಚಿನ್ನದ ಸರ, iPhone ವಶ
ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದು, ವಿಷಯ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬುದ್ದಿ ಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಮೈಸೂರು: ಬುದ್ದಿ ಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಆರೋಪಿಗೆ ಗ್ರಾಮಸ್ಥರು ಆರೋಪಿಗೆ ಧರ್ಮದೇಟು ನೀಡಿರುವ ಘಟನೆ ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಹದೇವ (57) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಮಹದೇವ ಬುದ್ದಿಮಾಂದ್ಯ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕೂಗಾಡಿದ್ದಾಳೆ. ಕೂಗಾಟದ ಶಬ್ಧ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಆರೋಪಿಯನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ಠಾಣಾ ಪೊಲೀಸರು ಆರೋಪಿ ಮಹದೇವನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಮಹದೇವ ಅಷ್ಟೊತ್ತಿಗಾಗಲೇ ಅಸ್ವಸ್ಥನಾಗಿದ್ದನು. ಈ ಹಿನ್ನೆಲೆ ಆತನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ