Karnataka Assembly Election: ದಿನಾಂಕ ಘೋಷಣೆ ಮುಂಚೆಯೇ ರಾಜ್ಯ ಸುತ್ತಿದ್ದ 3 ಪಕ್ಷಗಳು: ಯಾತ್ರೆಯಲ್ಲಿ ನೀಡಿದ ಭರವಸೆಗಳೇನು?

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಮೂರು ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಕಂಕಣ ಕಟ್ಟಿಕೊಂಡಿವೆ. ರಾಜ್ಯ ಸುತ್ತಿದ ಮೂರು ಪಕ್ಷಗಳು ಮತದಾರರಿಗೆ ನೀಡಿದ ಭರವಸೆಗಳೇನು ಇಲ್ಲಿದೆ ನೋಡಿ

Karnataka Assembly Election: ದಿನಾಂಕ ಘೋಷಣೆ ಮುಂಚೆಯೇ ರಾಜ್ಯ ಸುತ್ತಿದ್ದ 3 ಪಕ್ಷಗಳು: ಯಾತ್ರೆಯಲ್ಲಿ ನೀಡಿದ ಭರವಸೆಗಳೇನು?
ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ
Follow us
ವಿವೇಕ ಬಿರಾದಾರ
|

Updated on:Mar 29, 2023 | 1:07 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ (BJP) , ಕಾಂಗ್ರೆಸ್ (Congress)​ ಮತ್ತು ಜೆಡಿಎಸ್ (JDS)​ ಮೂರು ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಕಂಕಣ ಕಟ್ಟಿಕೊಂಡಿವೆ. ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ, ರಾಜಕೀಯ ಪಕ್ಷಗಳು ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದವು. ಆದರೆ ಈ ಬಾರಿ ವಿಭಿನ್ನವಾಗಿದ್ದು, ದಿನಾಂಕ ಘೋಷಣೆಯಾಗುವಕ್ಕಿಂತ ಮುಂಚೆಯೇ ಭಾಗಶಃ ಪ್ರಚಾರ ಕಾರ್ಯ ಮುಗಿಸಿವೆ. ಪ್ರಚಾರದ ವೇಳೆ ಹಲವು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆ ಸುತ್ತಿದ್ದು, ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ ಮೂಲಕ 224 ವಿಧಾನಸಭಾ ಕ್ಷೇತ್ರಗಳನ್ನು ತಲುಪಿತು. ಇನ್ನು ಜೆಡಿಎಸ್​ ಪಂಚರತ್ನ ರಥಯಾತ್ರೆ ಮೂಲಕ ನಾಡಿನ ಜನರ ಮುಂದೆ ಹೋಗಿ, ಪೂರ್ಣ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಆಶೀರ್ವದಿಸಬೇಕು ಎಂದಿದೆ.

ಜೆಡಿಎಸ್​ ಪಂಚರತ್ನ ಯಾತ್ರೆ

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ, ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, ವಸತಿಯ ಆಸರೆ ಪಂಚ ಯೋಜನೆಗಳ ಮೂಲಕ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ನಡೆಯಿತು. ​ಪಂಚರತ್ನ ರಥಯಾತ್ರೆ ನವೆಂಬರ್ 1ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗಿ, ಮೈಸೂರಿನ ಉತ್ತನಹಳ್ಳಿಯಲ್ಲಿ ಮಾ.26 ರಂದು ಕೊನೆಯಾಯಿತು.

ಜೆಡಿಎಸ್ ಪಂಚರತ್ನ ಯಾತ್ರೆ​ ಭರವಸೆ

ಈ ವೇಳೆ ಜೆಡಿಎಸ್​ ನಾಯಕ ಹೆಚ್​.ಡಿ ಕುಮಾರಸ್ವಾಮಿ ಹಲವು ಭರವಸೆಗಳನ್ನು ನೀಡಿದ್ದರು. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಬಂದರೆ 30-40 ವೆಚ್ಚ ಆಗುವ ಚಿಕಿತ್ಸೆಯನ್ನು ಸರ್ಕಾರವೇ ಕೊಡಲಿದೆ. ಎಲ್ಲರಿಗೂ ಸಮಾನ ಶಿಕ್ಷಣ ಪಡೆಯಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿತಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್​​​ ಭಾಷೆಯ ಉಚಿತ ಶಿಕ್ಷಣ. 6,600 ಪಂಚಾಯಿತಿ ಕೇಂದ್ರಗಳಲ್ಲಿ ಉತ್ತಮ ವ್ಯವಸ್ಥೆಯುಳ್ಳ ಆಸ್ಪತ್ರೆಗಳು, ಕಿಡ್ನಿ ಡಯಾಲಿಸಿಸ್‌ ಕೇಂದ್ರವನ್ನು ಸ್ಥಾಪನೆ. ಅಡುಗೆ ಅನಿಲ ಸಿಲಿಂಡರ್​ಗೆ ಶೇ.50ರಷ್ಟು ಸಬ್ಸಿಡಿ, ವರ್ಷಕ್ಕೆ ಐದು ಸಿಲಿಂಡರ್ ಉಚಿತ ಮತ್ತು 10 ಸಿಲಿಂಡರ್​ಗೆ ಅರ್ಧ ಹಣ ಪಡೆಯಲಿದ್ದೇವೆ ಎಂದು ಹೆಚ್​.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ

ರಾಜ್ಯ ಕಾಂಗ್ರೆಸ್​ ನಾಯಕರು ಎರಡು ತಂಡಗಳಾಗಿ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮತ್ತು ವಿಪಕ್ಷನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ತಂಡಗಳಾಗಿ ಯಾತ್ರೆ ಹೊರಟಿತ್ತು. ಬೆಳಗಾವಿಯ ಕಾಂಗ್ರೆಸ್​ ರಸ್ತೆಯಲ್ಲಿರುವ ಮಹಾತ್ಮ ಗಾಂಧೀಜಿ ಅಧಿವೇಶನ ನಡೆಸಿದ ಐತಿಹಾಸಕ ವೀರಸೌಧದಿಂದ ಯಾತ್ರೆ ಹೊರಟು ಕೊನೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿಯ ಬೃಹತ್​ ಸಮಾವೇಶದ ಮೂಲಕ ಬೆಳಗಾವಿಯಲ್ಲಿಯೇ ಸಂಪನ್ನವಾಯಿತು.

ಕಾಂಗ್ರೆಸ್​ ಗ್ಯಾರೆಂಟಿ ಯೋಜನೆಗಳು

ಈ ಯಾತ್ರೆ ಉದ್ದಕ್ಕೂ ರಾಜ್ಯ ಕಾಂಗ್ರೆಸ್​ ನಾಯಕರು ಮತ್ತು ಕೊನೆಗೆ ಕೇಂದ್ರ ನಾಯಕ ರಾಹುಲ್​ ಗಾಂಧಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

1. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ​

ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ. ಇದು ಕಾಂಗ್ರೆಸ್ ಮೊದಲ ಗ್ಯಾರಂಟಿಯಾಗಿತ್ತು. ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಉದ್ಘಾಟನಾ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಘೋಷಣೆ ಮಾಡಿದ್ದರು.

2. ಗೃಹ ಲಕ್ಷ್ಮಿ ಯೋಜನೆ : ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ರಾಜ್ಯದ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2000 ರೂಪಾಯಿ ಉಚಿತವಾಗಿ ನೀಡುವುದು ಕಾಂಗ್ರೆಸ್ ಎರಡನೇ ಗ್ಯಾರಂಟಿಯಾಗಿದೆ.

3. ಪ್ರತಿಯೊಬ್ಬರಿಗೆ ಉಚಿತ ಅಕ್ಕಿ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಮೊದಲನೆಯದಾಗಿ ಜನಪ್ರಿಯ ಅನ್ನಭಾಗ್ಯ ಘೋಷಣೆ ಮಾಡಿದ್ದರು. ಇದೀಗ ಉಚಿತ ಅಕ್ಕಿಯನ್ನು 10 ಕೆಜಿಗೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಇದು ಅನ್ವಯ ಆಗಲಿದೆ. ಈ ಮೂಲಕ ಬಡ ಜನರ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಕಾಂಗ್ರೆಸ್ ನಡೆಸಿದೆ.​

4. ಪದವೀಧರ ನಿರುದ್ಯೋಗಿಗಳಿಗೆ 3000 ರೂಪಾಯಿ ನಿರುದ್ಯೋಗ ಭತ್ಯೆ

ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ರೂಪಾಯಿ ನಿರುದ್ಯೋಗ ಭತ್ಯೆಯನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು.

ಬಿಜೆಪಿ ವಿಜಯಸಂಕಲ್ಪ ಯಾತ್ರೆ

ಡಬ್ಬಲ್​ ಇಂಜಿನ್​ ಸರ್ಕಾರ ಎಂದು ಹೇಳಿಕೊಂಡು ರಾಜ್ಯ ಬಿಜೆಪಿ ನಾಯಕರು ರಾಜ್ಯಾದ್ಯಂತ ಸುತ್ತಿದರು. ಈ ಯಾತ್ರೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರು ಕೂಡ ಭಾಗಿಯಾಗಿದ್ದರು. ರಾಜ್ಯದ ನಾಲ್ಕು ದಿಕ್ಕಿನಿಂದ ಹೊರಟಿದ್ದ ಯಾತ್ರೆಗೆ ಕೇಂದ್ರ ನಾಯಕರೇ ಚಾಲನೆ ನೀಡಿದ್ದರು. ಯಾತ್ರೆ ಉದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಭರವಸೆಯನ್ನು ಮುಂದಿಡುತ್ತಾ ಮತಗಳ ಕ್ರೋಢಿಕರಣಕ್ಕೆ ಮುಂದಾಗಿದ್ದರು. ಯಾತ್ರೆ ವೇಳೆ ಯಾವುದೇ ಭರವಸೆಗಳನ್ನು ನೀಡದಿರುವುದು ವಿಶೇಷವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Wed, 29 March 23