Karnataka Assembly Election 2023: ಇದೇ ನನ್ನ ಕೊನೆ ಚುನಾವಣೆ, ಎರೆಡೆರೆಡು ಬಾರಿ ಮತ್ತೆ ಉಚ್ಚರಿಸಿದ ಸಿದ್ದರಾಮಯ್ಯ
ಇದೇ ನನ್ನ ಕೊನೆ ಚುನಾವಣೆ, ಇದೇ ಕೊನೆ ಚುನಾವಣೆ. ಈ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ. ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿಯಾಗಬೇಕೆಂಬುದು ನನ್ನ ಬಯಕೆ. ಹೀಗಾಗಿ ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: ಕರ್ನಾಟಕ ವಿಧಾನಸಭೆ (Karnataka Assembly Election) ದಿನಾಂಕ ಘೋಷಣೆಯಾಗಲಿದ್ದು, ಕ್ಷೇತ್ರ ಹುಡುಕಾಟದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹುಟ್ಟೂರು ವರುಣಾದಿಂದ (Varuna) ಸ್ಪರ್ಧಿಸುವುದು ಪಕ್ಕಾ ಆಗಿದೆ. ಈ ಕುರಿತು ಮೈಸೂರಿನಲ್ಲಿ (Mysore) ಮಾತನಾಡಿದ ಕಾಂಗ್ರೆಸ್ (Congress) ನಾಯಕ ಸಿದ್ದರಾಮಯ್ಯ ಇದೇ ನನ್ನ ಕೊನೆ ಚುನಾವಣೆ, ಇದೇ ಕೊನೆ ಚುನಾವಣೆ ಎಂದು ಎರೆಡೆರೆಡು ಬಾರಿ ಉಚ್ಚರಿಸಿದ್ದಾರೆ. ಈ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ. ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿಯಾಗಬೇಕೆಂಬುದು ನನ್ನ ಬಯಕೆ. ಹೀಗಾಗಿ ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಹೀಗಾಗಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದೆ. ಈ ಬಾರಿ ನನಗೆ ಯಾವ ಅನುಮಾನಗಳು ಇಲ್ಲ. ಆದರೇ ಕೋಲಾರದ ಜನ ಒತ್ತಾಯದಿಂದ ಕರೆಯುತ್ತಿರುವ ಕಾರಣ ಅಲ್ಲೂ ನಿಲ್ಲಲೂ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಅಂತಿಮ ತೀರ್ಮಾನ ಹೈ ಕಮಾಂಡ್ಗೆ ಬಿಟ್ಟದ್ದು ಎಂದು ಹೇಳಿದರು.
ಇದನ್ನೂ ಓದಿ: ವರುಣಾ ಕಣದಲ್ಲಿ ನಡೆದಿದ್ಯಾ ಮ್ಯಾಚ್ ಫಿಕ್ಸಿಂಗ್ ಮಸಲತ್ತು? ಮರುಕಳಿಸುತ್ತಾ 2006ರ ಚಾಮುಂಡೇಶ್ವರಿ ಚುನಾವಣೆಯ ಚಮಕ್..?
ನನಗೆ ಕ್ಷೇತ್ರ ಇಲ್ಲ ಎನ್ನುವುದೆಲ್ಲಾ ಅರ್ಥ ಇಲ್ಲದ ಮಾತು. ನನಗೆ 25 ಕ್ಷೇತ್ರದಲ್ಲೂ ಗೆಲ್ಲುವ ಅವಕಾಶ ಇರುವ ಕಾರಣ ನನಗೆ ಆಹ್ವಾನಿಸುತ್ತಿದ್ದಾರೆ. ನನ್ನ ಎದುರಾಳಿ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಜನರ ಆಶೀರ್ವಾದದಿಂದ ನಮ್ಮ ಗೆಲುವು ನಿರ್ಧಾರವಾಗುತ್ತೆ. ಇಂದು ರಾಜ್ಯ ವಿಧಾನಸಭೆಗೆ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಿದೆ. ಚುನಾವಣೆಯಲ್ಲಿ ಮುಕ್ತ, ಪಾರದರ್ಶಕವಾಗಿ ನಡೆಯಬೇಕು. ಚುನಾವಣೆಯಲ್ಲಿ ವೇಳೆ ನಡೆಯುವ ಅಕ್ರಮಗಳನ್ನು ತಡೆಯಬೇಕು. ಆಡಳಿತದ ಪಕ್ಷ ಸೇರಿ ಯಾರೇ ಅಕ್ರಮ ನಡೆಸಿದ್ರೂ ಕ್ರಮಕೈಗೊಳ್ಳಬೇಕು. ಆಡಳಿತ ಪಕ್ಷದವರು ಪ್ರಭಾವ ಬೀರುವ ಅವಕಾಶ ಇರುತ್ತೆ. ಅಕ್ರಮಗಳನ್ನು ತಡೆಯುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ