ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಳ; ಆರೋಗ್ಯದ ಮೇಲೆ ನಿಗಾವಹಿಸಲು ತಜ್ಞರ ಸಲಹೆ

| Updated By: ಆಯೇಷಾ ಬಾನು

Updated on: Jan 03, 2024 | 7:44 AM

ಕಳೆದ 2022ಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಚಳಿಯ ಪ್ರಮಾಣ ಜಾಸ್ತಿಯಾಗಿದ್ದು ರಾಜ್ಯ - ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಚಳಿಯ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಆರೋಗ್ಯದಲ್ಲಿ ಒಂದಷ್ಟು ಸಮಸ್ಯೆಯಾಗಬಹುದು ಎಚ್ಚರಿಕೆಯಿಂದ ಇರಿ ಎಂದು ಆರೋಗ್ಯ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಳ; ಆರೋಗ್ಯದ ಮೇಲೆ ನಿಗಾವಹಿಸಲು ತಜ್ಞರ ಸಲಹೆ
ಚಳಿ
Image Credit source: Hindustan Times
Follow us on

ಬೆಂಗಳೂರು, ಜ.03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಂಜಿನ ಮುಸುಕಿನಿಂದ ಕಂಗೊಳಿಸುವ ರಸ್ತೆಗಳು ಕಾಣ ಸಿಗುತ್ತಿವೆ (Cold Weather). ಲಾಲ್ ಬಾಗ್, ಕಬ್ಬನ್ ಪಾರ್ಕ್ ಕಡೆಗಳತ್ತ ಹೋದರೆ ಊಟಿಯಂತಹ ಅನುಭವವಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಜಾಸ್ತಿಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ದಾಖಲೆಯ ಚಳಿಯ ತಾಪಮಾನ ವರದಿಯಾಗಿದೆ. ಹೀಗಾಗಿ ಆರೋಗ್ಯದಲ್ಲಿ ಏರುಪೇರು ಆಗಬಹುದು ಎಚ್ಚರಿಕೆ ವಹಿಸಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಳೆದ 2022ಕ್ಕೆ ಹೋಲಿಕೆ ಮಾಡಿದ್ರೆ 2023ರ ಡಿಸೆಂಬರ್ ತಿಂಗಳಲ್ಲಿ ಚಳಿಯ ಪ್ರಮಾಣ ಜಾಸ್ತಿಯಾಗಿದ್ದು, ಡಿಸೆಂಬರ್​ನಲ್ಲಿ ಸರಾಸರಿ ಉಷ್ಣಾಂಷ 23.15 ದಾಖಲಾಗಿದೆ. ಕಳೆದ ಐದು ವರ್ಷಕ್ಕೆ ಹೋಲಿಕೆ ಮಾಡಿದ್ರೆ 2023ರ ವರ್ಷದಲ್ಲಿ ಚಳಿಯ ಪ್ರಮಾಣ ಜಾಸ್ತಿಯಾಗಿದೆ. ಇನ್ನು ಈ ವರ್ಷ ಜನವರಿ, ಫೆಬ್ರವರಿ ತಿಂಗಳಲ್ಲಿಯೂ ನಿರೀಕ್ಷೆಗೂ ಮೀರಿದ ಚಳಿ ಕಂಡುಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ. ಚಳಿ ಹೆಚ್ಚಳ ಹಿನ್ನೆಲೆ ಜನರು ಆರೋಗ್ಯದ ಮೇಲೆ ನಿಗಾ ವಹಿಸಿ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather: ಕರ್ನಾಟಕದಾದ್ಯಂತ ಶೀತಗಾಳಿ, 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನವರಿ 9ರವರೆಗೆ ಮಳೆ

ಸಧ್ಯ ಕಳೆದ ತಿಂಗಳು ಬೆಂಗಳೂರಿನಲ್ಲಿ 18 ಡಿಗ್ರಿ, ಚಿಕ್ಕಮಗಳೂರು 13 ಡಿಗ್ರಿ, ಹಾಸನದಲ್ಲಿ 13.2 ಡಿಗ್ರಿ, ಬೆಳಗಾವಿ 13.6, ಬೀದರ್ 13.6, ಧಾರವಾಡ 14.4, ಬಾಗಲಕೋಟೆ 14.4 , ವಿಜಯಪುರದಲ್ಲಿ 9.6 ಡಿಗ್ರಿಯಷ್ಟು ಕನಿಷ್ಟ ತಾಪಮಾನ ದಾಖಲಾಗಿದೆ. ತಾಪಮಾನದ ಬದಲಾವಣೆ ಇನ್ನು ಎರಡು ತಿಂಗಳು ಮುಂದುವರಿಯುವ ಸಾಧ್ಯತೆ ಇದ್ದು, ತಾಪಮಾನದ ಏರಳಿತದಿಂದಾಗಿ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆಗಳು ಇರುವುದರಿಂದ ವಯೋವೃದ್ದರು ಹಾಗೂ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು ಒಳ್ಳೇದು ಅಂತ ತಜ್ಞರು ಸೂಚನೆ ನೀಡಿದ್ದಾರೆ. ಅಂದಹಾಗೇ ಕಳೆದ 2023ರಕ್ಕೆ ಹೋಲಿಕೆ ಮಾಡಿದ್ರೆ, 2024 ಈ ವರ್ಷ ಚಳಿಯ ಪ್ರಮಾಣ ಕಡಿಮೆ ಇರಲಿದ್ದು, ಶೀತ ಗಾಳಿಯ ಪ್ರಮಾಣ ಹೆಚ್ಚಾಗಿ ಇರಲಿದೆ. ಅಲ್ಲದೇ ಈ ವರ್ಷ ಚಳಿಯ ತಾಪಮಾನ ಫೆಬ್ರವರಿ ತಿಂಗಳವರೆಗೂ ಹೆಚ್ಚಾಗಿ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ