ಬೆಂಗಳೂರು: ಈಗಲ್ಟನ್ ರೆಸಾರ್ಟ್(Eagleton Resort) ಮೇಲೆ ಸಿಸಿಬಿ(CCB) ದಾಳಿ ನಡೆಸಿ ಇಬ್ಬರು ಇರಾನಿ ಪ್ರಜೆ ಸೇರಿ ಒಟ್ಟು ನಾಲ್ವರನ್ನ ಅರೆಸ್ಟ್ ಮಾಡಲಾಗಿತ್ತು. ಇದರಲ್ಲಿ ಪ್ರಮುಖ ಆರೋಪಿ ಜಾವದ್ನನ್ನು ಸಿಸಿಬಿ ವಿಚಾರಣೆ ನಡೆಸಿದ್ದು ಆತ ಅನೇಕ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ಆತನ ಹಿಸ್ಟರಿ ಕೇಳಿದ್ರೆ ನೀವೆ ಶಾಕ್ ಆಗ್ತೀರಾ. ಹಾಗಾದ್ರೆ ಆತ ಸಿಸಿಬಿ ಬಳಿ ಬಿಚ್ಚಿಟ್ಟ ವಿವರಗಳನ್ನು ಇಲ್ಲಿ ಓದಿ.
‘ಐ ಬಿಲಿವ್ ಇನ್ ಶಿವಾ’ ಎಂದ ಜಾವದ್
ಇರಾನ್ ಮೂಲದ ಇಸ್ಲಾಂ ಧರ್ಮದವನಾಗಿದ್ದ ಆರೋಪಿ ಜಾವದ್ ಶಿವನಲ್ಲಿ ನಂಬಿಕೆ ಇಟ್ಟಿದ್ದ. ಮುಸ್ಲಿಂ ವ್ಯಕ್ತಿಯಾದ್ರು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದ. ಮನೆಯಲ್ಲಿ ಶಿವನ ಪೂಜೆ, ಧ್ಯಾನ ಮಾಡುತ್ತಿದ್ದ. ವಿದ್ಯಾರ್ಥಿಯಾಗಿ ಭಾರತಕ್ಕೆ 2010 ಕ್ಕೆ ಬಂದ ಆರೋಪಿ ಜಾವದ್ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ. ಆದರೆ ಹೆಸರು ಮಾತ್ರ ಬದಲಾಯಿಸಿಕೊಂಡಿಲ್ಲ. ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆ ಎಲ್ಲವೂ ಇದೆ ಹಾಗಾಗಿ ಇಸ್ಲಾಂ ಧರ್ಮದಿಂದ ಬೇಸೆತ್ತು ಹಿಂದೂ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದೇನೆ ಎಂದು ಸಿಸಿಬಿ ಪೊಲೀಸರ ಮುಂದೆ ಅಚ್ಚರಿಯ ಸಂಗತಿ ತೆರೆದಿಟ್ಟಿದ್ದಾನೆ. ಇನ್ನು ಆರೋಪಿ ಜಾವದ್ ರೋಸ್ಟಂಪೌರ್ ಎಂಬಿಎ ಪದವೀಧರನಾಗಿದ್ದು ಬಾಣಸವಾಡಿಯ ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾನೆ.
ಜಾವದ್ ಕುಟುಂಬಸ್ಥರು ಎಲ್ಲಿದ್ದಾರೆ? ಹಿನ್ನೆಲೆ ಏನು?
ಜಾವದ್ ತಂದೆ-ತಾಯಿ ಮತ್ತು ಕುಟುಂಬಸ್ಥರು ಇರಾನ್ನಲ್ಲೇ ಇದ್ದಾರೆ. ಪೋಷಕರು ಕರೆದರೂ ಜಾವದ್ ಇರಾನ್ಗೆ ಹೋಗದೇ ಭಾರತದಲ್ಲೇ ವಾಸ್ತವ್ಯ ಹೂಡಿದ್ದಾನೆ. ಪೋಷಕರ ವಿರುದ್ಧವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಹಿಂದೂ ಧರ್ಮಕ್ಕೆ ಮತಾಂತರವಾಗಿ ಇರಾನ್ ಗೆ ಹೋದರೆ ಕೊಲ್ಲುತ್ತಾರೆಂಬ ಭಯಕ್ಕೇ ಭಾರತದಲ್ಲೇ ಉಳಿದು ಗಾಂಜಾ ಬೆಳೆಯುವುದನ್ನು ಕಲಿತಿದ್ದಾನೆ.
ಜಾವದ್ ಗಾಂಜಾ ಸೇವಿಸಲು ಮತ್ತು ಉತ್ಪಾದಿಸಲು ಆರಂಭಿಸಿದ್ದು ಏಕೆ?
ಮಾನಸಿಕ ಖಿನ್ನತೆಯಿಂದ (ಸಿಜರ್ ಡಿಸಿಸ್) ಬಳಲುತ್ತಿದ್ದ ಆರೋಪಿ ಜಾವದ್ ಅದಕ್ಕೆ ಔಷಧಿಯನ್ನ ಆನ್ ಲೈನ್ ನಲ್ಲಿ ಹುಡುಕಾಡಿದ್ದಾನೆ. ಅದಕ್ಕೆ ಗಾಂಜಾ ಸೇವನೆ ಎಂಬ ಉತ್ತರ ಸಿಕ್ಕಿದೆ. ಹೀಗಾಗಿ ಅಂದಿನಿಂದ ಗಾಂಜಾ ಬೆಳೆಯಲು ಮತ್ತು ಸೇವಿಸಲು ಆರಂಭಿಸಿರುವುದಾಗಿ ಸಿಸಿಬಿ ಬಳಿ ಆರೋಪಿ ತಿಳಿಸಿದ್ದಾನೆ.
ಇನ್ನು ಈತ ಗಾಂಜಾ ಸೊಪ್ಪನ್ನು ಕೇವಲ ಸೇದುತ್ತಿರಲಿಲ್ಲ. ಹೆಂಚಿನಲ್ಲಿ ಬೇಯಿಸಿ ತಿನ್ನುತ್ತಿದ್ದನಂತೆ. ಅದರಿಂದ ಮನಸ್ಸಿಗೆ ನೆಮ್ಮದಿ ಸಿಗತ್ತೆ ಎಂದು ಸಿಸಿಬಿ ಎದುರು ಹೇಳಿಕೆ ನೀಡಿದ್ದಾನೆ. ಆದ್ರೆ ಎಲ್ಲಾ ಗಾಂಜಾವನ್ನು ತಿನ್ನಲು ಸಾಧ್ಯವಿಲ್ಲ. ಈತ ಬೆಳೆಯುತ್ತಿದ್ದ ಹೈಡ್ರೋ ಗಾಂಜಾ ಉತ್ತಮ ಗುಣಮಟ್ಟದ್ದು ಹಾಗಾಗಿ ಇದು ತಿನ್ನಲು ಯೋಗ್ಯವಾಗಿದೆ ಎಂದು ತಿಳಿಸಿದ್ದಾನೆ.
ವಿದ್ಯಾವಂತನಾಗಿರೋ ಜಾವದ್ ಗಾಂಜಾ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದ. ಭಾರತದಲ್ಲಿ ಗಾಂಜಾಗೆ 11 ಸಾವಿರ ವರ್ಷದ ಇತಿಹಾಸವಿದೆ. ಈ ಬಗ್ಗೆಯೂ ಅಧ್ಯಯನ ಮಾಡಿರೋದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಇದು ಹಲವು ರೋಗಕ್ಕೆ ಔಷಧಿ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಜಾವದ್ ಗಾಂಜಾ ಮನೆಯಲ್ಲಿ ಬೆಳೆಯಲು ಪ್ರಾರಂಭಿಸಿದ್ದು ಹೇಗೆ?
ಗ್ರೋ ವೀತ್ ಈಸಿ ವೆಬ್ ಸೈಟ್ ಮೂಲಕ ಗಾಂಜಾ ಬಗ್ಗೆ ಸ್ಟಡಿ ಮಾಡಿದ್ದ ಆರೋಪಿ ಅಮೆಜಾನ್ ಮೂಲಕ ಮಾರಿಜುವಾನ ಬುಕ್ ಖರೀದಿ ಮಾಡಿದ್ದ ಈ ಮೂಲಕ ಗಾಂಜಾ ಬೆಳೆಯೋದರ ಬಗ್ಗೆ ಅಧ್ಯಯನ ಮಾಡಿದ್ದಾನೆ. ಡೈನಾಸೆನ್ ವೆನ್ ಸೈಟ್ ಮೂಲಕ ಯುರೋಪ್ ನಿಂದ ಗಾಂಜಾ ಬೀಜ ಖರೀದಿಸಿ ಅದನ್ನು ಫಿಶ್ ಟ್ಯಾಂಕ್ ನಲ್ಲಿಟ್ಟು ಬೆಳೆಯಲು ಪ್ರಾರಂಭಿಸಿದ್ದಾನೆ. ಅದು ಸಕ್ಸಸ್ ಕಂಡ ನಂತರ ದೊಡ್ಡ ಮಟ್ಟದಲ್ಲಿ ಗಾಂಜಾ ಬೆಳೆಯಲು ಪ್ಲಾನ್ ಮಾಡಿಕೊಂಡಿದ್ದಾನೆ.
ಮೊದಲು ಕಮ್ಮನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾಗ ಫಿಶ್ ಟ್ಯಾಂಕ್ ನಲ್ಲಿ ಗಾಂಜಾ ಇಟ್ಟು ಬೆಳೆಯಲು ಪ್ರಾರಂಭ ಮಾಡಿ ನಂತರ ಸಾಕಷ್ಟು ಸದ್ದು ಮಾಡಿದ್ದ ಸೆಲೆಬ್ರಿಟಿ ಡ್ರಗ್ಸ್ ಕೇಸ್ ಸುದ್ದಿ ಹೆಚ್ಚಾಗುತ್ತಿದ್ದಂತೆ ಇದರಿಂದ ಹೆದರಿ ಜನ ಹೆಚ್ಚಿರುವ ಪ್ರದೇಶದಲ್ಲಿ ಗಾಂಜಾ ಬೆಳೆಯೋದು ಕಷ್ಟ ಎಂದು ಅಪಾರ್ಟ್ ಮೆಂಟ್ ನಿಂದ ಬಿಡದಿಯ ಈಗಲ್ಟನ್ ರೆಸಾರ್ಟ್ ವಿಲ್ಲಾಗೆ ಜಾಗ ಬದಲಿಸಿದ್ದಾನೆ.
ಆರ್ಮಿ ಆಫಿಸರ್ ಓರ್ವನಿಂದ ವಿಲ್ಲಾ ಬಾಡಿಗೆಗೆ ಪಡೆದು ಪ್ರತಿ ತಿಂಗಳು 36 ಸಾವಿರ ಬಾಡಿಗೆ ಕಟ್ಟಿ ವಿಲ್ಲಾಗೆ ಯಾರು ಬರೋದಿಲ್ಲ ಎಂದು ಹೈಡ್ರೋ ಗಾಂಜಾ ಬೆಳೆಯಲು ಪ್ರಾರಂಭ ಮಾಡಿದ್ದಾನೆ. ಈತ ಬೆಳಿತಿದ್ದ ಗಾಂಜಾ ದಲ್ಲಿ ಸಿಬಿಡಿ ಕೆಮಿಕಲ್ ಇರುತ್ತಿತ್ತು. ಸಿಬಿಡಿ ಕೆಮಿಕಲ್ ಸೇವಿಸಿದರೆ ಮತ್ತು ಬರುವ ಭಾವನೆ ನೀಡುತ್ತದೆ. ಮೆದುಳಿನ ಕಾರ್ಯ ಬದಲಿಸುವ ಕ್ಷಮತೆ ಈ ರಾಸಾಯನಿಕ ಹೊಂದಿದೆ. ಈ ರಾಸಾಯನಿಕ ಮೆದುಳಿಗೆ ತಲುಪಿದಾಗ ಮನಃಸ್ಥಿತಿ, ಅರಿವು, ನಡವಳಿಕೆ ಮತ್ತು ವಾಸ್ತವದ ಗ್ರಹಿಕೆಗಳಲ್ಲಿ ತಾತ್ಕಾಲಿಕ ಬದಲಾವಣೆ ಆಗಲಿದೆ.
ಆರೋಪಿ ಹೈಡ್ರೋ ಗಾಂಜಾ ಬೆಳಿತಾ ಇದ್ದಿದ್ದು ಹೇಗೆ?
ಆರೋಪಿ ಮನೆಯ ಒಳಗೆಯೇ ಈ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ. ಗಾಂಜಾ ಬೆಳೆಯಲು ಹೆಚ್ಚು ಉಷ್ಣಾಂಶ ಮತ್ತು ಹೆಚ್ಚು ತಂಪು ವಾತಾವರಣ ಕೂಡ ಇರಬಾರದು ಎಂಬುವುದನ್ನು ಅಧ್ಯಯನದ ಮೂಲಕ ತಿಳಿದುಕೊಂಡಿದ್ದ. ಮನೆಯಲ್ಲಿ ಯುವಿ ಲೈಟ್ಸ್, ಎಲ್ಇಡಿ, ಲ್ಯಾಂಪ್ ಟೆಂಪರೇಚರ್, ರೆಗ್ಯೂಲೇಟರ್ ಬಳಸಿ ಮನೆಯಲ್ಲಿಯೇ ಹೈಡ್ರೋ ಗಾಂಜಾ ಉತ್ಪಾದನೆ ಮಾಡಿದ್ದಾನೆ. ಸದ್ಯ ಆರೋಪಿ ಬಂಧಿಸಿ ಸಿಸಿಬಿ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: Eagleton Resort: ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಡ್ರಗ್ಸ್ ತಾಣವಾಗಿದ್ದ ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ
Published On - 8:38 am, Wed, 29 September 21