ವಿಮಾನದಲ್ಲಿ ಅಮೆರಿಕಾ ಮಹಿಳೆ ಜೀವ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್: ಆಗಿದ್ದೇನು?

ಗೋವಾ-ದೆಹಲಿ ವಿಮಾನದಲ್ಲಿ ತುರ್ತು ವೈದ್ಯಕೀಯ ನೆರವು ಬೇಕಾದ ಅಮೆರಿಕನ್ ಮಹಿಳೆಯ ಜೀವ ಉಳಿಸುವ ಮೂಲಕ ಮಾಜಿ ಶಾಸಕಿ ಹಾಗೂ ವೈದ್ಯೆ ಡಾ. ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಪಕ್ಷದ ನಾಯಕಿಯ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ವಿಮಾನದಲ್ಲಿ ಅಮೆರಿಕಾ ಮಹಿಳೆ ಜೀವ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್: ಆಗಿದ್ದೇನು?
ಅಮೆರಿಕನ್ ಮಹಿಳೆಗೆ ಅಂಜಲಿ ನಿಂಬಾಳ್ಕರ್​​ ಚಿಕಿತ್ಸೆ.

Updated on: Dec 14, 2025 | 1:04 PM

ಬೆಂಗಳೂರು, ಡಿಸೆಂಬರ್​​ 14: ಗೋವಾ–ನವದೆಹಲಿ ವಿಮಾನ ಪ್ರಯಾಣದ ವೇಳೆ ಮಧ್ಯಾಕಾಶದಲ್ಲಿ ತುರ್ತು ವೈದ್ಯಕೀಯ ಸಮಸ್ಯೆಗೆ ಒಳಗಾದ ಅಮೆರಿಕನ್ ಮಹಿಳೆಯ ಜೀವವನ್ನು ಉಳಿಸುವ ಮೂಲಕ ಕರ್ನಾಟಕದ ಮಾಜಿ ಶಾಸಕಿ ಹಾಗೂ ವೃತ್ತಿಯಲ್ಲಿ ವೈದ್ಯೆಯಾಗಿರುವ ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ‘ವೋಟ್ ಚೋರಿ’ ಅಭಿಯಾನ ಸಂಬಂಧ ಕಾರ್ಯಕ್ರಮಕ್ಕೆ ಅವರು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ವಿಮಾನದಲ್ಲಿ ಅಂಜಲಿ ನಿಂಬಾಳ್ಕರ್ ಅವರ ಸಹ ಪ್ರಯಾಣಿಕರಾಗಿದ್ದ ಅಮೆರಿಕನ್ ಮಹಿಳೆ ಏಕಾಏಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ನಿಂಬಾಳ್ಕರ್ ಅವರು ಕಾರ್ಡಿಯೋಪಲ್ಮನರಿ ರೆಸಸ್ಸಿಟೇಶನ್ (CPR) ಮಾಡಿ ಆಕೆಯ ಪ್ರಾಣ ಉಳಿಸಿದ್ದಾರೆ. ವಿಮಾನ ಪ್ರಯಾಣದ ಸಂಪೂರ್ಣ ಅವಧಿಯಲ್ಲೂ ನಿಂಬಾಳ್ಕರ್ ಅವರು ಆ ರೋಗಿಯ ಪಕ್ಕದಲ್ಲೇ ಇದ್ದು, ಆಕೆಯ ವೈದ್ಯಕೀಯ ಅಗತ್ಯಗಳಿಗೆ ನಿರಂತರ ಗಮನ ಹರಿಸಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆದ ತಕ್ಷಣ, ಅಸ್ವಸ್ಥ ವಿದೇಶಿ ಪ್ರಯಾಣಿಕೆಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಂಬಾಳ್ಕರ್ ಅವರ ಸಮಯೋಚಿತ ಕ್ರಮಕ್ಕೆ ಸಹಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ರಾಮನಗರದಲ್ಲಿ ಆನೆ ದಾಳಿಗೆ ರೈತ ಬಲಿ; ಮೈಸೂರಿನಲ್ಲಿ ಹುಲಿ ದಾಳಿಗೆ ಹಸುಗಳ ಸರಣಿ ಸಾವು

ಸಿಎಂರಿಂದಲೂ ಶ್ಲಾಘನೆ


ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಮಾಡಿರುವ ಮುಖ್ಯಮಂತ್ರಿಗಳು, ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು ಚಿಕಿತ್ಸೆ ನೀಡಿ, ಮಹಿಳೆಯ ಜೀವ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ, ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ ಎಂದು ಸಿಎಂ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.