ಅಂತರಾಜ್ಯ ಕಳ್ಳ ಅಕ್ಕನ ಮನೆಗೆ ಬಂದು ಖಾಕಿ ಕೈಲಿ ತಗಲಾಕ್ಕೊಂಡ!
ಕನಾರ್ಟಕ ಸೇರಿದಂತೆ ಆಂದ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲೂ ಕಳ್ಳತನ, ಸುಲಿಗೆ ಮಾಡಿದ್ದ ನಟೋರಿಯಸ್ ಕಳ್ಳನನ್ನು ಜಿಗಣಿ ಪೊಲೀಸರು ಹಿಡಿದಿದ್ದು, ಕಳ್ಳತನವಾದ ಬೈಕ್‌ಗಳು ಮತ್ತು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿ ತನ್ನ ಅಕ್ಕನ ಮನೆಗೆ ಬಂದ ಸಮಯದಲ್ಲಿ ಪೊಲೀಸರು ಲಾಕ್ ಮಾಡಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆನೇಕಲ್, ಡಿಸೆಂಬರ್ 14: ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಕೊಲೆ, ಸುಲಿಗೆ, ಕಳ್ಳತನ ಸೇರಿದಂತೆ 60 ಪ್ರಕರಣಗಳ ಆರೋಪಿಯಾಗಿದ್ದ ಖತರ್ನಾಕ್ ಕಳ್ಳನಿಗಾಗಿ ಜಿಗಣಿ ಪೊಲೀಸರು ಕಾದು ಕೂತಿದ್ದರು. ಅಕ್ಕನ ಮನೆಗೆ ಬಂದ ಆರೋಪಿಯನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆ, ಸುಲಿಗೆ ಸೇರಿ ಇವನಮೇಲಿದ್ದದ್ದು 60 ಕೇಸ್!
ಕನಕಪುರ ತಾಲೂಕಿನ ಮುಳ್ಳಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ (35) ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಲೀಸಾಗಿ ಕಳ್ಳತನ ಮಾಡುತ್ತಿದ್ದ. ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಕೊಲೆ, ಸುಲಿಗೆ, ಬೈಕ್ ಕಳವು, ಮನೆಗಳ್ಳತನ ಸೇರಿದಂತೆ 60 ಪ್ರಕರಣಗಳ ಆರೋಪಿಯಾದ ಈತನ ಮೇಲೆ ಬೆಂಗಳೂರು ನಗರ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ 13 ಪ್ರಕರಣಗಳು ದಾಖಲಾಗಿವೆ.
ಅಕ್ಕನ ಮನೆಯಲ್ಲಿ ಕದ್ದ ಮಾಲು ಬಚ್ಚಿಡುತ್ತಿದ್ದ
ಸೆಪ್ಟೆಂಬರ್ ತಿಂಗಳಲ್ಲಿ ಜಿಗಣಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣದ ತನಿಖೆ ವೇಳೆ ಸಿಸಿಟಿವಿ ಪರಿಶೀಲನೆಯಿಂದ ಆರೋಪಿಯ ಚಲನವಲನ ಪತ್ತೆಯಾಗಿತ್ತು. ಶಿವಕುಮಾರ್ ತನ್ನ ಅಕ್ಕನ ಮನೆಗೆ ಬಂದು ಹೋಗುತ್ತಿದ್ದ ಮಾಹಿತಿ ಪಡೆದ ಪೊಲೀಸರು, ಸಮೀಪದ ಮನೆಯೊಂದನ್ನು ಬಾಡಿಗೆ ಪಡೆದು, ಆತನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಆರೋಪಿ ಪ್ರತಿ ಬಾರಿ ತಾನು ಬರುವ ವಿಷಯವನ್ನು ಅಕ್ಕನಿಗೆ ಕರೆ ಮಾಡಿ ತಿಳಿಸುತ್ತಿದ್ದ. ಮನೆ ಬಳಿ ಬರುತ್ತಿದ್ದಂತೆ ಆತನ ಅಕ್ಕ ಮತ್ತು ಆಕೆಯ ಮಕ್ಕಳು ರಸ್ತೆಯ ಬಳಿ ನಿಂತು ಯಾರೂ ಆತನನ್ನು ನೋಡದಂತೆ ನಿಗಾ ವಹಿಸುತ್ತಿದ್ದರು. ಮನೆಯ ಬಳಿ ಬರುತ್ತಿದ್ದ ಆರೋಪಿ, ತನಗೆ ಬೇಕಾದ ವಸ್ತಗಳನ್ನು ಅಕ್ಕನಿಂದ ಪಡೆದು, ತಾನು ಕದ್ದ ವಸ್ತುಗಳನ್ನು ಆಕೆಗೆ ನೀಡಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ.
ಕದ್ದ ಬೈಕ್ನಲ್ಲೇ ಚೈನ್ ಸ್ನ್ಯಾಚಿಂಗ್
ಹೀಗೆ ಕಾದು ಕುಳಿತಿದ್ದ ಪೊಲೀಸರನ್ನು ಕಂಡ ಶಿವಕುಮಾರ್, ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಬೈಕ್ ಕೆಳಗೆ ಬಿದ್ದಿದ್ದು ಅದೇ ವೇಳೆ ಸಿನಿಮೀಯವಾಗಿ ಆತನನ್ನು ಬಂಧಿಸಲಾಗಿದೆ. ಬಂಧಿತನಿಂದ 3 ಬೈಕ್‌ಗಳು ಹಾಗೂ 130 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಕಳ್ಳತನಕ್ಕೆ ಪಕ್ಕಾ ಪ್ಲಾನ್ ಮಾಡುತ್ತಿದ್ದ ಆರೋಪಿ ಶಿವಕುಮಾರ್, ಮೊದಲು ಬೈಕ್ ಕದ್ದು ನಂತರ ಅದೇ ಬೈಕ್ನಲ್ಲಿ ಚೈನ್ ಸ್ನ್ಯಾಚಿಂಗ್, ಮನೆಗಳ್ಳತನಕ್ಕೆ ಇಳಿಯುತ್ತಿದ್ದ. ಪೊಲೀಸರಿಗೆ ಸಣ್ಣ ಸುಳಿವು ನೀಡದೇ ಎಸ್ಕೇಪ್ ಆಗುತ್ತಿದ್ದ ಆಸಾಮಿ, ಬೆಂಗಳೂರಿನ ಶಿವಾಜಿ ನಗರದ ಜೆಟ್ ಕಿಂಗ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಮ್ಯಾನೇಜ್ಮೆಂಟ್ ಆಫ್ ನೆಟ್ವರ್ಕಿಂಗ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮಾಡಿದ್ದ ಈತ ತಾಂತ್ರಿಕವಾಗಿ ಕಳ್ಳತನದ ಸಣ್ಣ ಸುಳಿವು ಸಿಗದಂತೆ ಕೃತ್ಯವೆಸಗುತ್ತಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



